ಮದ್ದೂರು: ಸಂಕಷ್ಟದ ಸಂದರ್ಭದಲ್ಲೂ ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ಕೂಡಲೇ ಸುಪ್ರೀಂಕೋರ್ಟ್ ಮತ್ತು ಕಾವೇರಿ ನದಿ ನೀರಿನ ನಿರ್ವಹಣಾ ಪ್ರಾಧಿಕಾರ ವಸ್ತುಸ್ಥಿತಿಯನ್ನು ಅರಿತು ಆದೇಶ ಮಾಡಬೇಕು. ಅದನ್ನು ಬಿಟ್ಟು ಎಲ್ಲೋ ಕುಳಿತುಕೊಂಡು ಕಾಟಾಚಾರಕ್ಕೆ ತಮಿಳುನಾಡಿಗೆ ನೀರು ಹರಿಸಿ ಎಂದು ಆದೇಶ ಮಾಡುವುದು ಸರಿಯಲ್ಲ. ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಮಳೆರಾಯ ಕೃಪೆ ತೋರದಿದ್ದರೆ, ಮುಂದಿನ ದಿನಗಳಲ್ಲಿ ಮಂಡ್ಯ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ. ಆದ್ದರಿಂದ ಆದೇಶವನ್ನು ಪರಿಶೀಲನೆ ಮಾಡಿ ಕರ್ನಾಟಕಕ್ಕೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಿರಾದ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಂಜಾವತಧೂತ ಸ್ವಾಮೀಜಿ, ವೇದಿಕೆಯ ಅಧ್ಯಕ್ಷ ರಮೇಶ್‌ಗೌಡ, ಪದಾಧಿಕಾರಿಗಳಾದ ಹಾಗಲಹಳ್ಳಿ ಬಸವರಾಜು, ಟೈಲರ್ ರಮೇಶ್, ಜಗ್ಗಿಶೀನಪ್ಪ, ಶ್ರೀನಿವಾಸ್, ಸೋಂಪುರ ಉಮೇಶ್, ಹರೀಶ್ ಇತರರು ಇದ್ದರು.