ಭಾವನ ಆಸ್ತಿ ಲಪಟಾಯಿಸಿದ ನಾದಿನಿ !

ಮದ್ದೂರು: ಭಾವನನ್ನು ಯಾಮಾರಿಸಿ ಆಸ್ತಿ ಲಪಟಾಯಿಸಿದ ನಾದಿನಿ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾವ ನಾಗೇಂದ್ರ ಅವರ ಅಂಗವೈಕಲ್ಯವನ್ನು ದುರುಪಯೋಗ ಮಾಡಿಕೊಂಡ ನಾದಿನಿ ದೇವಿಕಾ ಆಸ್ತಿ ಲಪಟಾಯಿಸಿದ್ದಾಳೆ ಎಂದು ನಾಗೇಂದ್ರನ ಪತ್ನಿ ಶಾಂತಾ ಆರೋಪ ಮಾಡಿದ್ದಾರೆ.

ಪಟ್ಟಣದ ಟಿಬಿ ವೃತ್ತದ ಬಳಿಯಿರುವ ಮೂರಂತಸ್ತಿನ ಕಟ್ಟಡ ಲಪಟಾಯಿಸಲು ನಾದಿನಿ ದೇವಿಕಾ ಬುದ್ಧಿಮಾಂದ್ಯ ಭಾವನನ್ನು ಬಾಡಿಗೆ ಹೆಚ್ಚು ಮಾಡಿಸೋದಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಕರೆದೊಯ್ದು ಸಹಿ ಪಡೆದು ಆಸ್ತಿ ಲಪಟಾಯಿಸಿ ವಂಚನೆ ಮಾಡಿದ್ದಾರೆಂದು ಶಾಂತಾ ದೂರಿನಲ್ಲಿ ತಿಳಿಸಿದ್ದಾರೆ.

ಹಕ್ಕು ಪರಭಾರೆ ಪತ್ರದಲ್ಲಿ 33.50 ಲಕ್ಷ ರೂ. ಕೊಟ್ಟಿರುವುದಾಗಿ ಉಲ್ಲೇಖ ಮಾಡಲಾಗಿದೆ. ಆದರೆ, ಒಂದು ರುಪಾಯಿಯನ್ನು ಕೊಟ್ಟಿಲ್ಲ ಎನ್ನುವುದು ಶಾಂತಾ ಆರೋಪವಾಗಿದೆ. ಈ ವಂಚನೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಹಾಗೂ ಉಪ ನೋಂದಣಾಧಿಕಾರಿ ಶಾಮಿಲಾಗಿ ಮೋಸ ಮಾಡಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ನ್ಯಾಯ ಕೊಡಿಸುವಂತೆ ಶಾಂತಾ ಅವರು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಬಗ್ಗೆ ಸಮರ್ಪಕ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಪೊಲೀಸರಿಗೆ ಸಚಿವರು ತಾಕೀತು ಮಾಡಿದ್ದಾರೆ.

ಈ ಸಂಬಂಧ ಪುರಸಭಾ ಮುಖ್ಯಾಧಿಕಾರಿ ಮಹೇಶ್ ಪ್ರತಿಕ್ರಿಯಿಸಿ, ಉಪನೋಂದಣಾಧಿಕಾರಿಗಳು ನೀಡಿರುವ ರಿಜಿಸ್ಟರ್ ಪತ್ರದ ಜತೆಗೆ ವಕೀಲರಿಂದ ಕಾನೂನು ಸಲಹೆ ಪಡೆದು ಖಾತೆ ಮಾಡಲಾಗಿದೆ. ಇದರಲ್ಲಿ ನಮ್ಮದು ಯಾವುದೇ ಲೋಪವಿಲ್ಲ ಎಂದು ತಿಳಿಸಿದ್ದಾರೆ.