ಅಕ್ರಮ ಕಲ್ಲು ಗಣಿಗಾರಿಕೆಗೆ ವಿರೋಧ

ಮದ್ದೂರು: ತಾಲೂಕಿನ ಶೀನಪ್ಪನದೊಡ್ಡಿ ಹಾಗೂ ಕೀಳಘಟ್ಟ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಇಲ್ಲಿಯಾ ಗ್ರಾಮಸ್ಥರು ಪ್ರತಿಭಟನೆ ಮಾಡಿದರು.

ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಕ್ರಮ ಖಂಡಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಪಂ ಸದಸ್ಯ ಕೀಳಘಟ್ಟ ಸತೀಶ್ ಮಾತನಾಡಿ, ಗ್ರಾಮಗಳಲ್ಲಿ 5 ವರ್ಷಗಳಿಂದ ಅಕ್ರಮ ಕಲ್ಲುಗಣಿಗಾರಿಕೆ ನಡೆಯತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ರಸ್ತೆಯಿಂದ ಹಾಗೂ ಮನೆಯಿಂದ 200 ಮೀಟರ್ ದೂರದಲ್ಲಿ ಕಲ್ಲುಗಣಿಗಾರಿಕೆ ಮಾಡಬೇಕು. ಆದರೆ, 15 ಮೀಟರ್ ಅಂತರದಲ್ಲೇ ಕಲ್ಲುಗಣಿಗಾರಿಕೆ ಮಾಡುತ್ತಿರುವುದರಿಂದ ಮನೆಗಳಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಸಮೀಪದಲ್ಲಿ ಶಿಂಷಾ ಎಡದಂಡೆ ನಾಲೆಯಿದೆ. ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸುತ್ತಿವೆ. ಸಂಜೆಯ ವೇಳೆ ಕಲ್ಲು ಒಡೆಯಲು ಸಿಡಿಮದ್ದುಗಳನ್ನು ಸ್ಪೋಟಿಸುವುದರಿಂದ ಗ್ರಾಮದಲ್ಲಿ ಇರಲು ಆತಂಕವಾಗುತ್ತಿದೆ. ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ರೈತ ಸಂಘದ ಮುಖಂಡರೊಬ್ಬರು ಭಾಗಿಯಾಗಿದ್ದು, ಇವರು ಪಾಂಡವಪುರಕ್ಕೆ ಹೋಗಿ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸಿ ಎಂದು ಹೋರಾಟ ಮಾಡುತ್ತಾರೆ. ಇವರೇ ಇಲ್ಲಿ ಕಲ್ಲು ಗಣಿಗಾರಿಕೆ ಮಾಡುತ್ತಾರೆ ಎಂದು ಆರೋಪಿಸಿದರು.

ಮುಖಂಡ ಪುಟ್ಟಸ್ವಾಮಿ ಮಾತನಾಡಿ, ಇಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ ಪರಿಶೀಲನೆ : ಮದ್ದೂರು ತಾಲೂಕಿನ ಶೀನಪ್ಪದೊಡ್ಡಿ ಮತ್ತು ಕೀಳಘಟ್ಟ ಗ್ರಾಮಕ್ಕೆ ಉಪವಿಭಾಗಾಧಿಕಾರಿ ರಾಜೇಶ್ ಅವರು ಆಗಮಿಸಿ ಕಲ್ಲುಗಣಿಗಾರಿಕೆ ಸಂಬಂಧ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಅಲ್ಲದೆ ಹಾನಿಗೊಳಗಾದ ಮನೆಗಳಿಗೆ ಹೋಗಿ ಪರಿಶೀಲನೆ ಮಾಡಿದರು.

ಕಲ್ಲುಗಣಿಗಾರಿಕೆಯಿಂದ ಗ್ರಾಮದಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಒಂದು ಗುಂಪು ಎಸಿ ರಾಜೇಶ್ ಅವರಿಗೆ ಮನವಿ ಕೊಟ್ಟರೆ, ಮತ್ತೊಂದು ಗುಂಪು ಕಲ್ಲುಗಣಿಗಾರಿಕೆಯಿಂದ ಯಾವುದೇ ತೊಂದೆಯಾಗುತ್ತಿಲ್ಲ. ಇದರಿಂದ ಕಲ್ಲುಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಎಸಿ ಸಮ್ಮುಖದಲ್ಲೇ 2 ಗುಂಪುಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.

ನಂತರ ಎಸಿ ಮಾತನಾಡಿ, ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ತಹಸೀಲ್ದಾರ್ ಹಾಗೂ ಡಿಸಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದು ಪರಿಶೀಲನೆ ಮಾಡಲಾಗುತ್ತಿದೆ. ಯಾರು ಪರವಾನಗಿ ತೆಗೆದುಕೊಂಡಿದ್ದಾರೆ, ತೆಗೆದುಕೊಂಡಿಲ್ಲ, ಯಾವ ಸ್ಥಳದಲ್ಲಿ ಕಲ್ಲುಗಣಿಗಾರಿಕೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡು ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶೀನಪ್ಪದೊಡ್ಡಿ ಗ್ರಾಮಕ್ಕೆ ಆಗಮಿಸಿದ ಎಸಿ ಅವರನ್ನು ಇಲ್ಲಿಯ ಮಹಿಳೆಯರು ಕಲ್ಲು ಕೆಲಸ ಮಾಡಿ ಜೀವನ ಮಾಡುತ್ತಿದ್ದೇವೆ. ಕಲ್ಲುಗಣಿಗಾರಿಕೆ ಅವಕಾಶ ನೀಡದೆ ಹೋದರೆ ನಮಗೆ ಜೀವನ ನಡೆಸಲು ಕಷ್ಟವಾಗುತ್ತದೆ. ಇದರಿಂದ ಕಲ್ಲುಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಎಸಿ ಅವರ ಬಳಿ ಮನವಿ ಮಾಡಿಕೊಂಡರು.