ತಂದೆ ಜತೆಗೂಡಿ ಎಚ್‌ಡಿಕೆ ಪ್ರಚಾರ

ಮದ್ದೂರು: ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ಸಭೆ ನಡೆಸಿದರು.

ನಾಯಕರು ಗ್ರಾಮಕ್ಕೆ ಬರುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಸ್ವಾಗತಿಸಿದರು.

ಈ ವೇಳೆ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯ ಜನರು ದೇವೇಗೌಡರ ಮೇಲೆ ಅಭಿಮಾನ ಇಟ್ಟು ನಮ್ಮ ಪಕ್ಷವನ್ನು ಬೆಳೆಸಿದ್ದೀರಿ. ಈ ಬಾರಿ ನಿಖಿಲ್ನನ್ನು ಗೆಲ್ಲಿಸುವ ಮೂಲಕ ನಮ್ಮ ಕೈ ಬಲಪಡಿಸಬೇಕು. ನಾನು ಈ ಜಿಲ್ಲೆಯ ಮೇಲೆ ಇಟ್ಟಿರುವ ಬದ್ಧತೆ ತಿಳಿಯಬೇಕಾದರೆ ಐದಾರು ತಿಂಗಳು ನೀವು ಕಾಯಬೇಕಾಗುತ್ತದೆ. ಜಿಲ್ಲೆಯ ಕೆ.ಎಂ.ದೊಡ್ಡಿ ಮತ್ತು ಕೊಪ್ಪ ಖಾಸಗಿ ಸಕ್ಕರೆ ಕಾರ್ಖಾನೆಗಳು ಇದುವರೆಗೆ ಬಾಕಿ ಹಣ ನೀಡಿಲ್ಲವೆಂದು ರೈತರು ಮನವಿ ಮಾಡಿದ್ದು, ಚುನಾವಣೆ ಮುಗಿದ ನಂತರ ಕಬ್ಬಿನ ಬಾಕಿ ಹಣ ಕೊಡಿಸುವುದಾಗಿ ಭರವಸೆ ನೀಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಅಂಬರೀಷ್ ಬಿಟ್ಟು ಹೋಗಿರುವ ಅಪೂರ್ಣ ಕೆಲಸಗಳನ್ನು ನಾನು ಪೂರ್ಣ ಮಾಡಲು ಚುನಾವಣೆಗೆ ನಿಂತಿರುವುದಾಗಿ ಪಕ್ಷೇತರ ಅಭ್ಯರ್ಥಿ ಹೇಳುತ್ತಾರೆ. ಆದರೆ ಆ ಅಪೂರ್ಣ ಕೆಲಸಗಳು ಯಾವುದೆಂದು ಎಲ್ಲೂ ಹೇಳುತ್ತಿಲ್ಲ ಎಂದು ಸುಮಲತಾ ಹೆಸರು ಹೇಳದೇ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ನಿಲ್ಲಿಸಿದ ಪರಿಣಾಮವಾಗಿ ಎಚ್.ಡಿ.ಕುಮಾರಸ್ವಾಮಿಗೆ ಮತ್ತು ನನಗೆ ಅವರು ಆಡುತ್ತಿರುವ ಮಾತಿನಿಂದ ನನ್ನ 60 ವರ್ಷದ ರಾಜಕೀಯ ಜೀವನದಲ್ಲಿ ಹೆಚ್ಚು ನೋವು ಆಗಿದೆ. ನಾನು ಯಾವುದೇ ಜಾತಿಗೆ ಅನ್ಯಾಯ ಮಾಡಿಲ್ಲ. ಎಲ್ಲರಿಗೂ ಸ್ಥಾನಮಾನ ನೀಡಿದ್ದೇನೆ ಎಂದರು.

ನಮ್ಮ ಪಕ್ಷ ಹಾಗೂ ನಮ್ಮ ಕುಟುಂಬವನ್ನು ನಂಬಿದ ಯಾರಿಗೂ ನಾವು ಇದುವರೆಗೆ ಮೋಸ ಮಾಡಿಲ್ಲ. ಜಿಲ್ಲೆಯ ರೈತ ನಾಯಕ ಜಯರಾಂ ಸತ್ತ ಸಂದರ್ಭದಲ್ಲಿ ಅವರ ಪತ್ನಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದೇವೆ. ಶಾಸಕ ಎಂ.ಎಸ್.ಸಿದ್ದರಾಜು ಮರಣಾನಂತರ ಅವರ ಪತ್ನಿ ಕಲ್ಪನಾ ಸಿದ್ದರಾಜುಗೆ ಅವಕಾಶ ಕಲ್ಪಿಸಿದ್ದೇವೆ. ನನ್ನ ಹೆಸರಿನೊಂದಿಗೆ ಗೌಡ ಎಂಬುದು ಇಲ್ಲದಿದ್ದರೆ ನಾನು ಇನ್ನೂ ಉತ್ತಮ ಎತ್ತರಕ್ಕೆ ಬೆಳೆಯುತ್ತಿದ್ದನೇನೊ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಬೋರಯ್ಯ, ಎಪಿಎಂಸಿ ಅಧ್ಯಕ್ಷ ಶಿವಲಿಂಗಯ್ಯ, ಜೆಡಿಎಸ್ ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಸ್ವಾಮಿ, ಶೇಖರ್ ಇದ್ದರು.