ನಿಮ್ಮ ಸೇವೆಗೆ ಅವಕಾಶ ನೀಡಿ

ಮದ್ದೂರು ನಿಮ್ಮ ಸೇವೆ ಮಾಡಲು ನನ್ನ ತಾಯಿ ಸುಮಲತಾ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಅವಕಾಶ ನೀಡಿ ಎಂದು ಅಂಬರೀಷ್ ಪುತ್ರ ಅಭಿಷೇಕ್ ಮನವಿ ಮಾಡಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಬಿರುಸಿನ ಮತಪ್ರಚಾರದಲ್ಲಿ ಮಾತನಾಡಿದರು.

ನನ್ನ ತಾಯಿಗೆ ಅಧಿಕಾರದ ದುರಾಸೆ ಇಲ್ಲ. ನಿಮ್ಮಗಳ ಜತೆ ಇರಲು, ಅಂಬರೀಷ್ ಅವರ ಹೆಸರು ಉಳಿವು ಮತ್ತು ನಿಮ್ಮ ಸೇವೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ತಾಲೂಕಿನ ಇತಿಹಾಸ ಪ್ರಸಿದ್ಧ ವೈದ್ಯನಾಥೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಕಾರ್ಯಕ್ರಮ ಆರಂಭಿಸಿದರು.

ಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ಹುಣಸೇಮರದೊಡ್ಡಿ, ರುದ್ರಾಕ್ಷಿಪುರ, ಸೋಮನಹಳ್ಳಿ, ಕೆ.ಬಿ.ಹಳ್ಳಿ, ಎನ್.ಕೋಡಿಹಳ್ಳಿ ಸೇರಿ 28 ಹಳ್ಳಿಗಳಲ್ಲಿ ಮತಪ್ರಚಾರ ಮಾಡಿದರು. ಜತೆಗೆ ಸೋಮನಹಳ್ಳಿಯ ಹಲವು ಕಾರ್ಖಾನೆಗಳಿಗೆ ಭೇಟಿ ನೀಡಿ ಮಹಿಳಾ ಕಾರ್ಮಿಕರನ್ನು ಭೇಟಿ ಮಾಡಿ ಸುಮಲತಾ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಹಲವು ಸಂಘಟನೆಗಳ ಬೆಂಬಲ: ನನ್ನ ತಾಯಿ ಸುಮಲತಾಗೆ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್, ರೈತ ಸಂಘ, ಡಿಎಸ್‌ಎಸ್ ಸೇರಿ ಹಲವು ಸ್ತ್ರೀ ಶಕ್ತಿ ಸಂಘಗಳು, ಜೆಡಿಎಸ್ ಕಾರ್ಯಕರ್ತರು ಬೆಂಬಲ ನೀಡುತ್ತಿದ್ದಾರೆ ಎಂದು ಅಭಿಷೇಕ್ ತಿಳಿಸಿದರು.

ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಾತನಾಡಿ, ನನ್ನ ತಂದೆ ಅಂಬರೀಷ್ ಅವರ ಒಳ್ಳೆಯ ಗುಣ ನೋಡಿ ಎಲ್ಲರೂ ನನ್ನ ತಾಯಿ ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಇದನ್ನು ಸಹಿಸದ ವಿರೋಧಿಗಳು ಕೋಮುವಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ಬಿಜೆಪಿಗೆ ಹೋಗಬೇಕು ಅಂದುಕೊಂಡಿದ್ದರೆ ಅಧಿಕೃತವಾಗಿ ಬಿಜೆಪಿಯಿಂದಲೇ ಸ್ಪರ್ಧಿಸಲಾಗುತ್ತಿತ್ತು ಎಂದು ಹೇಳಿದರು.

ನಟ ದರ್ಶನ್ ಮತ್ತು ಯಶ್ ಬಗೆ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು. ಅವರು ಜೀರೋದಿಂದ ಕಷ್ಟಪಟ್ಟು ಬೆವರು ಸುರಿಸಿ ಈ ಹಂತಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು.