ಮದ್ದೂರಲ್ಲಿ 21 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ

ಮದ್ದೂರು: ಗ್ರಾಹಕರು ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡುವ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಸೆಸ್ಕ್ ಎಇಇ ರಾಜಣ್ಣ ಮನವಿ ಮಾಡಿದರು.

ಪಟ್ಟಣದ ಸೆಸ್ಕ್ ಇಲಾಖೆ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯುತ್ ಗ್ರಾಹಕರ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ 21 ಕೋಟಿಗೂ ಅಧಿಕ ವಿದ್ಯುತ್ ಬಿಲ್ ಹಣ ಬಾಕಿ ಉಳಿದಿದೆ ಎಂದರು.
ತಾಲೂಕಿನ ದೇಶಹಳ್ಳಿ, ವಳಗೆರೆಹಳ್ಳಿ, ಗೆಜ್ಜಲಗೆರೆ, ಕುದರಗುಂಡಿ, ಚಾಮನಹಳ್ಳಿ ಗ್ರಾಮಗಳಲ್ಲಿ 5 ಕೋಟಿಗೂ ಅಧಿಕ ಹಣ ಬಾಕಿ ಉಳಿದಿದ್ದು ಗ್ರಾಹಕರಿಗೆ ಅಗತ್ಯ ವಿದ್ಯುತ್ ಸರಬರಾಜು ಮತ್ತು ಇನ್ನಿತರ ಹೆಚ್ಚುವರಿ ಕಾಮಗಾರಿಗಳಿಗೆ ಅಡ್ಡಿಯಾಗಿದೆ ಎಂದರು.

ಗುಣಮಟ್ಟದ ವಿದ್ಯುತ್ ಸರಬರಾಜು ಮತ್ತು ಅಗತ್ಯವಿರುವೆಡೆ ಕೆಲ ಕಾಮಗಾರಿಗಳಿಗೆ ಆರ್ಥಿಕ ಕೊರತೆ ಉಂಟಾಗದಂತೆ ಇಲಾಖೆಯೊಟ್ಟಿಗೆ ಗ್ರಾಹಕರು ಕೈಜೋಡಿಸಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ದಿನದ 24 ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡುವ ಸಂಬಂಧ ಈಗಾಗಲೇ ಅಗತ್ಯ ಸಿದ್ಧತೆಗಳು ನಡೆದಿವೆ ಎಂದರು.

ಚಾಮನಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಅಲ್ಲದೆ ತಂತಿಗಳು ಜೋತುಬಿದ್ದಿದ್ದು ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿ ನಿರಂತರ ಜ್ಯೋತಿ ಕಾಮಗಾರಿ ಅಪೂರ್ಣಗೊಂಡಿದ್ದು ಕೂಡಲೇ ಕಾಮಗಾರಿ ಮುಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಇಇ ರಾಜಣ್ಣ, ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುತ್ತದೆ. ವಿದ್ಯುತ್ ಕಂಬಗಳೂ ಸೇರಿದಂತೆ ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಲು ಮಾರ್ಗದಾಳುಗಳಿಗೆ ಸೂಚಿಸಲಾಗಿದೆ. ನಿರಂತರ ಜ್ಯೋತಿ ಕಾಮಗಾರಿ ಪೂರ್ಣಗೊಳಿಸಲು ಟೆಂಡರ್‌ದಾರರಿಗೆ ಸೂಚಿಸಿರುವುದಾಗಿ ಹೇಳಿದರು.

Leave a Reply

Your email address will not be published. Required fields are marked *