ಸರ್ಕಾರಿ ಶಾಲೆಯಲ್ಲಿ ಗುಣಮಟ್ಟ ಕಾಪಾಡಲು ಪಬ್ಲಿಕ್ ಶಾಲೆ ಆರಂಭ

ಎನ್.ಆರ್.ಪುರ: ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾಥಮಿಕ ಶಾಲೆ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜನ್ನು ವಿಲೀನಗೊಳಿಸಿ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತಿಸಲಾಗಿದೆ ಎಂದು ಎಂಎಡಿಬಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಎಲ್​ಕೆಜಿ ಶಾಲೆ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ತಾಲೂಕಿಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸುತ್ತಿದ್ದರೂ ಸರ್ಕಾರಿ ಶಾಲೆ ಮುಚ್ಚುತ್ತಿರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಬಡ ಮಕ್ಕಳಿಗೆ ಎಲ್​ಕೆಜಿಯಿಂದ ಪಿಯುಸಿವರೆಗೆ ಒಂದೇ ಕಡೆ ಶಿಕ್ಷಣ ನೀಡುವ ಕಲ್ಪನೆಯಿಂದ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್​ಕೆಜಿಯಿಂದ 12ನೇ ತರಗತಿಯವರೆಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದರು.

ತಾಪಂ ಅಧ್ಯಕ್ಷೆ ಜಯಶ್ರೀ ಮೋಹನ್ ಮಾತನಾಡಿ, ಬಡ ಮಕ್ಕಳಿಗೆ ಇಂಗ್ಲಿಷ್ ಕಲಿಯುವ ಆಸೆ ಇದ್ದರೂ ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಗೆ ಹೋಗುವುದು ಕಷ್ಟವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಿರುವುದರಿಂದ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.

Leave a Reply

Your email address will not be published. Required fields are marked *