ಮಾಡಾವು ವಿದ್ಯುತ್ ಸಬ್‌ಸ್ಟೇಷನ್ ಕೆಲಸ ಪುನಾರಂಭ

ಶ್ರವಣ್‌ಕುಮಾರ್ ನಾಳ ಪುತ್ತೂರು

ಅರಣ್ಯ ಇಲಾಖೆ ಮತ್ತು ಕೆಪಿಟಿಸಿಎಲ್ ನಡುವಿನ ದೀರ್ಘ ಸಮಯಗಳ ತಕರಾರಿನ ಹಿನ್ನೆಲೆಯಲ್ಲಿ ಒಂಬತ್ತು ವರ್ಷಗಳಿಂದ ಸ್ಥಗಿತಗೊಂಡಿದ್ದ ಮಾಡಾವು 110 ಕೆವಿ ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿ ಮತ್ತೆ ಆರಂಭವಾಗಿದ್ದು ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಅರಣ್ಯ ಇಲಾಖೆಗೆ ಕೆಪಿಟಿಸಿಎಲ್‌ನಿಂದ ಪರಿಹಾರವಾಗಿ ಚಿತ್ರದುರ್ಗದ 20 ಎಕರೆ ಭೂಮಿ ನೀಡಲು ಒಪ್ಪಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಬ್‌ಸ್ಟೇಷನ್ ಕೆಲಸ ಮತ್ತೆ ಆರಂಭಗೊಂಡಿದೆ. ಕೆಲ ತಿಂಗಳ ಹಿಂದೆ ಮಾಡಾವು ಬೊಳಿಕಲದಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಸಬ್‌ಸ್ಟೇಷನ್ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಈಗ ಕಾಮಗಾರಿ ಪ್ರಗತಿಯಲ್ಲಿದೆ.

2009ರಲ್ಲಿ ಆರಂಭವಾದ ಮಾಡಾವು 110 ಕೆವಿ ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿಯ ಮುಂದುವರಿದ ಭಾಗವಾಗಿ ಮಾಡಾವಿನಿಂದ ಸುಳ್ಯಕ್ಕೆ ಮತ್ತು ಆಲಂಕಾರಿಗೆ ವಿದ್ಯುತ್ ಲೈನ್ ಹಾದು ಹೋಗಬೇಕಿದೆ. ಇದಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ಸುಳ್ಯ ಲೈನ್ ವ್ಯಾಪ್ತಿಯಲ್ಲಿ ಸಾಮಾಜಿಕ ಅರಣ್ಯ ವಲಯಕ್ಕೆ ಸೇರಿದ ಭೂಮಿ ಇರುವಲ್ಲಿ ಕೆಲಸ ಸಾಗುವುದಕ್ಕೆ ಅರಣ್ಯ ಇಲಾಖೆ ತಕರಾರು ಸಲ್ಲಿಸಿತ್ತು. ಈ ವಿಷಯದಲ್ಲಿ ಆರು ವರ್ಷಗಳ ಅನಂತರ ಅರಣ್ಯ ಇಲಾಖೆ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ರಾಜಿ ಮಾತುಕತೆ ನಡೆಸಿ ಸುಳ್ಯ ಮತ್ತು ಆಲಂಕಾರು ಸಾಮಾಜಿಕ ಅರಣ್ಯ ವಲಯ ಪ್ರದೇಶವನ್ನು ಕೆಪಿಟಿಸಿಎಲ್ ಕಾಮಗಾರಿಗೆ ನೀಡಲು ಒಪ್ಪಿದೆ. ಇದಕ್ಕೆ ಬದಲಾಗಿ ಕೆಪಿಟಿಸಿಎಲ್ ಚಿತ್ರದುರ್ಗದಲ್ಲಿ 20 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಪರಿಹಾರವಾಗಿ ನೀಡಲು ಒಪ್ಪಿಗೆ ನೀಡಬೇಕಾಯಿತು.

107ರಲ್ಲಿ 104 ಟವರ್ ನಿರ್ಮಾಣ ಪೂರ್ಣ: ನೆಟ್ಲಮುಡ್ನೂರಿನಿಂದ ಮಾಡಾವಿಗೆ 110 ಕೆವಿ ವಿದ್ಯುತ್ ಲೈನ್ ಎಳೆಯುವ ಮೂಲಕ ಸಬ್‌ಸ್ಟೇಷನ್ ಆರಂಭವಾಗುತ್ತದೆ. ಮಾಡಾವಿನಿಂದ ಸುಳ್ಯ, ಕಡಬ, ಆಲಂಕಾರಿಗೆ ವಿದ್ಯುತ್ ಸರಬರಾಜು ಮಾಡುವ ಬೃಹತ್ ಯೋಜನೆ ಇದು. ಕಬಕದಿಂದ ಮಾಡಾವು ತನಕ 27 ಕಿ.ಮೀ ದೂರದಲ್ಲಿ ಲೈನ್ ಎಳೆದು 107 ವಿದ್ಯುತ್ ಲೈನ್ ಟವರ್‌ಗಳ ನಿರ್ಮಾಣ ನಡೆಯಲಿದೆ. ಈ ಪೈಕಿ 104 ಟವರ್‌ಗಳ ನಿರ್ಮಾಣ ಮುಗಿದಿದ್ದು, 14 ಕಿ.ಮೀ ತಂತಿ ಎಳೆಯುವ ಕಾಮಗಾರಿಯೂ ಪೂರ್ಣಗೊಂಡಿದೆ. ಮಾಡಾವಿನಲ್ಲಿ ಸಬ್‌ಸ್ಟೇಷನ್ ಆರಂಭವಾದಲ್ಲಿ ಸುಳ್ಯ, ಆಲಂಕಾರು, ಕುಂಬ್ರ ಮತ್ತು ಕಡಬ ಭಾಗದಲ್ಲಿ ವಿದ್ಯುತ್ ವಿತರಣೆಗೆ ಮುಕ್ತ ಅವಕಾಶ ದೊರೆಯುತ್ತದೆ. ಬಳಿಕ ದಿನದ 24 ಗಂಟೆಯೂ ವಿದ್ಯುತ್ ಪೂರೈಸಲು ಇದು ಸಹಕಾರಿಯಾಗಲಿದೆ.

ಸುಳ್ಯ ಲೈನ್ ವ್ಯಾಪ್ತಿಯಲ್ಲಿ ಸಾಮಾಜಿಕ ಅರಣ್ಯ ವಲಯಕ್ಕೆ ಸೇರಿದ ಭೂಮಿ ಇರುವ ಕಾರಣ ಅರಣ್ಯ ಇಲಾಖೆಯ ತಕರಾರು ಇತ್ತು. ಈ ವಿಚಾರದಲ್ಲಿ ಅರಣ್ಯ ಇಲಾಖೆ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ರಾಜಿ ಮಾತುಕತೆ ನಡೆಸಿ ಚಿತ್ರದುರ್ಗದಲ್ಲಿ 20 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲಾಗಿದ್ದು, ಅದಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ.
|ಪಿ.ಡಿ.ಬಿ. ರಾವ್, ಕೆಪಿಟಿಸಿಎಲ್ ಚ್ೀ ಎಕ್ಸ್‌ಕ್ಯೂಟಿವ್ ಇಂಜಿನಿಯರ್