ಹರಿದ್ವಾರದಲ್ಲಿ ಮಾಧವೇಂದ್ರ ಆಸ್ಪತ್ರೆ ಆರಂಭ

< ವೃಂದಾವನಸ್ಥ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಕನಸಿನಕೂಸು> 

ಮಂಗಳೂರು: ಶ್ರೀ ಕಾಶೀ ಮಠ ಸಂಸ್ಥಾನ ವತಿಯಿಂದ ಹರಿದ್ವಾರದಲ್ಲಿ ಈ ಹಿಂದೆಯೇ ನಿರ್ಮಾಣಗೊಂಡಿದ್ದ ಮಾಧವೇಂದ್ರ ಆಸ್ಪತ್ರೆಯನ್ನು ಅತ್ಯಾಧುನಿಕವಾಗಿ ನವೀಕರಿಸಿದ್ದು, ಭಾನುವಾರ ಸಂಸ್ಥಾನದ ಮಠಾಧೀಶ ಶ್ರೀ ಸಯ್ಯಮಿಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.

ಮಣಿಪಾಲ್ ಕೆ.ಎಂ.ಸಿ ಆಸ್ಪತ್ರೆ ಸಹಯೋಗದೊಂದಿಗೆ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಲಾಗಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ, ಸಲಕರಣೆಗಳನ್ನು ಇಲ್ಲಿ ಅಳವಡಿಸಲಾಗಿದೆ. ಈ ಆಸ್ಪತ್ರೆ ವೃಂದಾವನಸ್ಥ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಕನಸಿನಕೂಸು. ಹರಿದ್ವಾರದಲ್ಲಿರುವ ಬಡ ಜನರ ಹಾಗೂ ಸಾಧು ಸಂತರ ಉಚಿತ ಸೇವೆ ಕಲ್ಪಿಸಬೇಕೆಂಬುದು ಅವರ ಆಶಯವಾಗಿತ್ತು. ಗುರುವರ್ಯರ ಈ ಕನಸನ್ನು ಅರಿತುಕೊಂಡ ಸಯ್ಯಮಿಂದ್ರ ತೀರ್ಥರು ಆಸ್ಪತ್ರೆಯ ನವೀಕರಣ ಕಾರ್ಯ ಆರಂಭಿಸಿದ್ದರು. ಈಗ ಆಸ್ಪತ್ರೆಯನ್ನು ಅತ್ಯುಧುನಿಕ ಮಾದರಿಯಲ್ಲಿ ರೂಪಿಸಲಾಗಿದ್ದು, ಎಲ್ಲ ವಿಧದ ಚಿಕಿತ್ಸೆಗಳು ದೊರೆಯುಂತೆ ಮಾಡಲಾಗಿದೆ.

ಹರಿದ್ವಾರದ ವೇದವ್ಯಾಸ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕರಾದ ಗಣೇಶ ಮಲ್ಯ ಹೊಸದಿಲ್ಲಿ, ಹರಿದ್ವಾರ ವ್ಯವಸ್ಥಾಪಕ ಸಮಿತಿಯ ಸುರೇಶ ಶೆಣೈ, ವಸಂತ್ ಶೆಣೈ, ರಮಾನಂದ ಭಟ್ ಚೇಂಪಿ, ಡಾ.ಅನಂತ್ ಕಿಣಿ, ಡಾ.ನಾಗರಾಜ್ ಕಾಮತ್, ಮಣಿಪಾಲ್ ಕೆ.ಎಂ.ಸಿ ಆಸ್ಪತ್ರೆಯ ಡಾ.ವಿಕ್ರಾಂತ್, ಡಾ. ಅಂಕುರ್, ಸತೀಶ್ ಪೈ, ಜಯಸಿಂಹ ಪೈ ಉಪಸ್ಥಿತರಿದ್ದರು.