More

    ಮಳೆಯಿಂದ ಮಾದಪ್ಪನ ನಿತ್ಯ ಪೂಜೆಗೆ ಅಡ್ಡಿ


    ಚಾಮರಾಜನಗರ: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಜೋರು ಮಳೆ ಬಂತೆಂದರೆ ಮಾದಪ್ಪನಿಗೆ ನಿತ್ಯ ತ್ರಿಕಾಲ ಪೂಜೆಗೆ ನೀರು ತರುವ ಮಜ್ಜನ ಬಾವಿ ಮುಳುಗಡೆಯಾಗುತ್ತದೆ. ಇದರಿಂದ ಅರ್ಚಕರು ತೊಂದರೆಪಡುವಂತಾಗಿದೆ. ಆದ್ದರಿಂದ ಪ್ರಾಧಿಕಾರದ ಆಡಳಿತ ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ.


    ಮಾದಪ್ಪನಿಗೆ ನಿತ್ಯ ತ್ರಿಕಾಲ ಪೂಜೆಯನ್ನು ನೇರವೇರಿಸುವುದು ವಾಡಿಕೆ. ಅದರಂತೆ ಬೇಡಗಂಪಣ ಸರದಿ ಅರ್ಚಕರು ದೇಗುಲ ಸಮೀಪವಿರುವ ನಂದನವನದ ಮಜ್ಜನ ಬಾವಿಯಿಂದ ಅಗ್ರೋದಕವನ್ನು ತಂದು ಪೂಜೆಯನ್ನು ನೆರವೇರಿಸಲಾಗುತ್ತದೆ. ಆದರೆ ಕಳೆದ 3 ವರ್ಷದಿಂದ ನನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಮಳೆಗಾಲದ ವೇಳೆ ಜೋರು ಮಳೆ ಸುರಿದರೆ ನೀರಿನ ಜತೆ ತಂಬಡಗೇರಿಯ ಚರಂಡಿಯಲ್ಲಿನ ಕೊಳಚೆ ನೀರು ತಗ್ಗು ಪ್ರದೇಶದಲ್ಲಿರುವ ನಂದನವನಕ್ಕೆ ನುಗ್ಗಿ ಆವೃತಗೊಳ್ಳುತ್ತದೆ. ಈ ವೇಳೆ ಅರ್ಚಕರು ನೀರನ್ನು ಹೊತ್ತೊಯ್ಯಬೇಕಾದರೆ ಹರಸಾಹಸ ಪಡಬೇಕಿದೆ.


    ಇನ್ನು ಮಜ್ಜನ ಬಾವಿಯೂ ಮುಳುಗಡೆಯಾದರೆ ಬೇರೆಡೆಯಿಂದ ನೀರನ್ನು ತಂದು ಪೂಜೆ ಸಲ್ಲಿಸಬೇಕಾದ ಅನಿವಾರ್ಯತೆ ಇದೆ. ಜತೆಗೆ ದೇಗುಲದ ರಾಜಗೋಪುರದ ಮುಂಭಾಗದಲ್ಲೂ ನೀರು ನಿಲ್ಲುವಂತಾಗುತ್ತದೆ. ಇದರಿಂದ ಭಕ್ತರು ತೊಂದರೆ ಅನುಭವಿಸುವುದು ಒಂದೆಡೆಯಾದರೆ ನಂದನವನ ನೀರಿನಿಂದ ಆವೃತವಾಗುವುದರಿಂದ ಅಗ್ರೋದಕವನ್ನು ತರುವ ಅರ್ಚಕರು ಪೂಜೆ ನೆರೆವೇರಿಸಲು ಎರಡು ಬಾರಿ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ.


    ನಂದನವನಕ್ಕೆ ನೀರು ನುಗ್ಗದಂತೆ ಹಾಗೂ ಮಜ್ಜನಬಾವಿ ಮುಳುಗಡೆಯಾಗದಂತೆ ಅಗತ್ಯ ಕ್ರಮವಹಿಸುವಂತೆ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಚಕರು ಹಾಗೂ ಭಕ್ತರು ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪವನ್ನು ಆಗಾಗ್ಗೆ ವ್ಯಕ್ತಪಡಿಸುತ್ತಲೇ ಇದ್ದಾರೆ.


    ಆದ್ದರಿಂದ ಇದೀಗ ಮಳೆ ಆರಂಭವಾಗಿರುವುದರಿಂದ ನೂತನವಾಗಿ ನೇಮಕಗೊಂಡಿರುವ ಪ್ರಾಧಿಕಾರದ ಕಾರ್ಯದರ್ಶಿ ಅವರು ಈ ಬಗ್ಗೆ ಗಮನಹರಿಸಿ ನಂದನವನಕ್ಕೆ ನೀರು ನುಗ್ಗದಂತೆ ಹಾಗೂ ಮಜ್ಜನ ಬಾವಿ ಮುಳುಗಡೆಯಾದಂತೆ ಅಗತ್ಯ ಕ್ರಮವಹಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ.



    ಜೋರು ಮಳೆ ಸುರಿದರೆ ಮಜ್ಜನಬಾವಿ ಮುಳುಗಡೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂದನವನಕ್ಕೆ ನೀರು ನುಗ್ಗದಂತೆ ಕ್ರಿಯಾಯೋಜನೆ ತಯಾರಿಸಿ ಅಗತ್ಯ ಕ್ರಮವಹಿಸಲಾಗುವುದು.
    ಎ.ಈ ರಘು, ಕಾರ್ಯದರ್ಶಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮ.ಬೆಟ್ಟ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts