ಸ್ವಚ್ಛತಾ ಆಂದೋಲನಕ್ಕೆ ಪಂಚ ವರ್ಷ

ಗಂಗಾಧರ ಕಲ್ಲಪಳ್ಳಿ ಸುಳ್ಯ

ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಸ್ವಚ್ಛ ಭಾರತ ಆಂದೋಲನಕ್ಕೆ ಕರೆ ಕೊಟ್ಟರು. ಹಲವು ಸಂಘ ಸಂಸ್ಥೆಗಳು ಅದರಲ್ಲಿ ಕೈ ಜೋಡಿಸಿದ್ದವು. ಕೆಲವರು ಅದನ್ನು ಮುಂದುವರಿಸಿದರೆ ಇನ್ನು ಹಲವರು ಅರ್ಧದಲ್ಲೇ ಬಿಟ್ಟರು. ಗ್ರಾಮೀಣ ಪ್ರದೇಶದಲ್ಲಿ ಐದು ವರ್ಷಗಳಿಂದ ಪ್ರತಿ ವಾರವೂ ಸ್ವಚ್ಛತಾ ಆಂದೋಲನ ಮಾಡಿದ ಮಡಪ್ಪಾಡಿಯ ಮಹಾತ್ಮ ಗಾಂಧಿ ಗ್ರಾಮ ಸೇವಾ ತಂಡ ಸ್ವಚ್ಛ ಭಾರತದ ಕಲ್ಪನೆಯನ್ನು ತಪಸ್ಸಿನಂತೆ ಮುಂದುವರಿಸಿದೆ.

ಹನ್ನೆರಡು ಜನರ ತಂಡದಲ್ಲಿ ಹೆಚ್ಚಿನವರು 50 ವಯೋಮಿತಿ ದಾಟಿದವರು. ಜತೆಗೆ ಕೆಲವು ಯುವಕರು. ಪ್ರತಿ ಶನಿವಾರ ಬೆಳಗ್ಗೆ ಏಳು ಗಂಟೆಗೆ ಒಟ್ಟು ಸೇರಿ ಶ್ರಮದಾನ ಆರಂಭಿಸುತ್ತಾರೆ. ಒಂದೂವರೆ ಗಂಟೆ ಶ್ರಮದಾನ. ರಸ್ತೆ, ಚರಂಡಿ ಮೊದಲಾದ ಕಡೆ ಇವರ ಶ್ರಮದಾನ ಮುಂದುವರಿಯುತ್ತದೆ. ಮಹಾತ್ಮ ಗಾಂಧಿ ಗ್ರಾಮ ಸೇವಾ ತಂಡದ ಸದಸ್ಯರ ಈ ಮಾದರಿ ಕೆಲಸ ಐದನೇ ವರ್ಷ ಮುನ್ನಡೆಯುತ್ತಿದ್ದು, ವಾರಗಳ ಸಂಖ್ಯೆಯಲ್ಲಿ ದ್ವಿಶತಕದತ್ತ ದಾಪುಗಾಲಿಟ್ಟಿದೆ.

ವಾರದಲ್ಲಿ ಒಂದೂವರೆ ಗಂಟೆ ಮೀಸಲಿಟ್ಟರೆ ಅದ್ಭುತ ಸಾಧಿಸಬಹುದು ಎಂಬುದಕ್ಕೆ ಈ ಪ್ರಯೋಗ ಸಾಕ್ಷಿ. ಗ್ರಾಮದ ಅಭಿವೃದ್ಧಿಯಲ್ಲಿ ತಮ್ಮದೂ ಅಳಿಲ ಸೇವೆ ನೀಡಬೇಕೆಂಬ ಹಂಬಲದಿಂದ ಉತ್ಸಾಹಿಗಳ ಈ ತಂಡ ನಿರಂತರ ಸ್ವಚ್ಛತೆ ಮತ್ತು ಶ್ರಮದಾನ ಮೂಲಕ ಗ್ರಾಮ ಸ್ವರಾಜ್ಯದೆಡೆಗೆ ಮಾದರಿ ಹೆಜ್ಜೆಯಿರಿಸಿದ್ದಾರೆ. ಮಡಪ್ಪಾಡಿ ಗ್ರಾಮ ಸಂಪರ್ಕಿಸುವ ರಸ್ತೆ ದುರಸ್ತಿ, ರಸ್ತೆ ಬದಿ ಪೊದೆಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು, ಬಸ್ ನಿಲ್ದಾಣ ಮತ್ತಿತರ ಸಾರ್ವಜನಿಕ ಕಟ್ಟಡಗಳನ್ನು ಸುಸ್ಥಿತಿಯಲ್ಲಿಡಲು ಶ್ರಮಿಸುವುದು, ರಸ್ತೆ ಬದಿ ಚರಂಡಿ ನಿರ್ಮಾಣ, ಸ್ವಚ್ಛತಾ ಕಾರ್ಯ, ಮೋರಿ, ಮುಳುಗು ಸೇತುವೆಗಳಲ್ಲಿ ಸಿಲುಕಿರುವ ಕಸ ಕಡ್ಡಿ ತೆರವು ಮಾಡುವುದು, ಶಾಲೆ, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಶಾಲೆಯಲ್ಲಿ ಅಡಕೆ ತೋಟ ನಿರ್ವಹಣೆ, ರಸ್ತೆ ಬದಿ ಇವರು ನೆಟ್ಟ ಮರ ಗಿಡಗಳ ಪೋಷಣೆ ಮತ್ತಿತರ ಕಾಮಗಾರಿ ಸೇರಿದಂತೆ ಹಲವು ಕೆಲಸಗಳನ್ನು ಇವರು ನಿರ್ವಹಿಸುತ್ತಾರೆ.
2014ರ ಅ.18ರಂದು ಏಳು ಜನರ ತಂಡದೊಂದಿಗೆ ಇವರು ಸ್ವಚ್ಛತಾ ಕೆಲಸ ಆರಂಭಿಸಿದರು. ಬಳಿಕ ತಂಡದ ಸದಸ್ಯರ ಸಂಖ್ಯೆ 14ಕ್ಕೆ ಏರಿತ್ತು. ಈಗ 12 ಮಂದಿ ಸಕ್ರಿಯರಾಗಿದ್ದಾರೆ.

ಶ್ರಮದಾನದ ಬಗ್ಗೆ ವ್ಯವಸ್ಥಿತ ದಾಖಲೆ
ತಂಡದ ಶ್ರಮದಾನ ಬಗ್ಗೆ ಹಾಜರಿ ಪುಸ್ತಕ ಮತ್ತು ಕೆಲಸದ ವಿವರ ದಾಖಲಿಸಿಕೊಳ್ಳಲಾಗಿದೆ. ಫೋಟೋ, ವಿಡಿಯೋ ತೆಗೆದು ದಾಖಲು ಮಾಡಲಾಗಿದೆ. ಯಾವುದೇ ದೇಣಿಗೆ ಸ್ವೀಕರಿಸಿಲ್ಲ. ಶ್ರಮದಾನಕ್ಕೆ ಅಗತ್ಯ ಪರಿಕರಗಳನ್ನು ಸದಸ್ಯರೇ ಹೊಂದಿಸಿಕೊಳ್ಳಬೇಕು. ಶ್ರಮದಾನದ ಸ್ಥಳ ಮತ್ತು ವಿವರಗಳನ್ನು ತಂಡದ ಸಂಚಾಲಕ ಎಂ.ಡಿ.ವಿಜಯಕುಮಾರ್ ಎಸ್‌ಎಂಎಸ್ ಮೂಲಕ ತಿಳಿಸುತ್ತಾರೆ. ಸಮಯಕ್ಕೆ ಸರಿಯಾಗಿ ಆಗಮಿಸಿ ಒಂದೂವರೆ ಗಂಟೆ ಪೂರ್ತಿ ಕೆಲಸ ಮಾಡಬೇಕು ಇಂಥ ಸ್ವಯಂಶಿಸ್ತನ್ನೂ ತಂಡ ಅನುಸರಿಸಿಕೊಂಡು ಬಂದಿದೆ. ಸಮವಸ್ತ್ರ ಧರಿಸಿಯೇ ಸದಸ್ಯರು ಶ್ರಮದಾನಕ್ಕೆ ಹಾಜರಾಗುತ್ತಾರೆ. ಕೃಷಿಕ ಎಂ.ಡಿ.ವಿಜಯಕುಮಾರ್ ಇಂಥ ಆಶಯ ಇತರರಲ್ಲಿ ಹಂಚಿಕೊಂಡಾಗ ಸದಸ್ಯರು ಒಪ್ಪಿಕೊಂಡು ಈ ಕೆಲಸ ಆರಂಭಿಸಿದರು. ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಮುಖರಾದ ಗಂಗಯ್ಯ ಪೂಂಬಾಡಿ, ಸೋಮಶೇಖರ ಕೇವಳ, ರಾಜಕುಮಾರ್ ಪೂಂಬಾಡಿ, ಪ್ರಶಾಂತ್ ಪೂಂಬಾಡಿ, ಸುನೀಲ್ ಮಡಪ್ಪಾಡಿ, ಚಂದ್ರಶೇಖರ ಗುಡ್ಡೆಮನೆ, ಶಶಿಧರ ಕೇವಳ, ಶಿವಪ್ಪ ಪೂಂಬಾಡಿ, ವಿಶ್ವನಾಥ ಗೋಳ್ಯಾಡಿ, ವಿಶ್ವನಾಥ ಕಜೆ ತಂಡದ ಸದಸ್ಯರು.

ಸ್ವಚ್ಛತಾ ಪ್ರಶಸ್ತಿಯ ಗರಿ
ನಿರಂತರ ಸ್ವಚ್ಛತಾ ಅಭಿಯಾನಕ್ಕೆ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ನೀಡುವ ತಾಲೂಕು ಮಟ್ಟದ ಸ್ವಚ್ಛತಾ ಪುರಸ್ಕಾರ ಮಹಾತ್ಮ ಗಾಂಧಿ ಗ್ರಾಮ ಸೇವಾ ತಂಡಕ್ಕೆ ಈ ಹಿಂದೆ ಲಭಿಸಿತ್ತು. 100 ವಾರದ ಗಡಿ ದಾಟಿದ ಸಂದರ್ಭ ಪ್ರಶಸ್ತಿ ನೀಡಲಾಗಿತ್ತು. ಐದು ವರ್ಷ ಪೂರೈಸುವ ಸಂದರ್ಭ ಮುಂದಿನ ಅಕ್ಟೋಬರ್‌ನಲ್ಲಿ ತಂಡ ಮಾಡಿದ ಸ್ವಚ್ಛತಾ ಕೆಲಸಗಳ ಬಗ್ಗೆ ಜಿಲ್ಲಾಮಟ್ಟದ ಪ್ರದರ್ಶನ ಮಾಡುವ ಉದ್ದೇಶ ಇದೆ ಎನ್ನುತ್ತಾರೆ ತಂಡದ ಸದಸ್ಯರು.

ಬೆಳಕು ಚೆಲ್ಲಿದ ವಿಜಯವಾಣಿ
ಮಹಾತ್ಮ ಗಾಂಧಿ ಗ್ರಾಮ ಸೇವಾ ತಂಡದ ಶ್ರಮದಾನ ಆರಂಭದ ಹಲವು ತಿಂಗಳ ಕಾಲ ಪ್ರಚಾರ ಇಲ್ಲದೆ ನಡೆದಿತ್ತು. ತಂಡದ ಈ ಸೇವಾಕಾರ್ಯದ ಬಗ್ಗೆ ಪ್ರಥಮ ಬಾರಿ ವಿಜಯವಾಣಿ 2015 ಏ.27ರಂದು ವಿಶೇಷ ವರದಿ ವರದಿ ಪ್ರಕಟಿಸಿತ್ತು. ಬಳಿಕ ಗ್ರಾಮ ಸೇವಾ ತಂಡದ ಕಾರ್ಯಗಳ ಬಗ್ಗೆ ಹೊರ ಜಗತ್ತಿಗೆ ತಿಳಿದು ಬಾರಿ ಪ್ರಚಾರ ಪಡೆದಿತ್ತು. ಆದರೆ ಬಳಿಕವೂ ತಂಡ ಸದ್ದಿಲ್ಲದೆ ಕೆಲಸ ಮಾಡುತ್ತಿದೆ.

ಈ ರೀತಿ ಪರಿಕಲ್ಪನೆ ಆರಂಭಿಸಿದಾಗ ಇದನ್ನು ನಿರಂತರ ಮುಂದುವರಿಸಲು ಸಾಧ್ಯವೇ ಎಂಬ ಸಂದೇಹ ಕಾಡಿತ್ತು. ಆದರೆ ಸದಸ್ಯರ ಅರ್ಪಣಾ ಮನೋಭಾವ ಮತ್ತು ನಿರಂತರ ಪ್ರಯತ್ನದಿಂದ 182 ವಾರ ಪೂರೈಸಲು ಸಾಧ್ಯವಾಗಿದೆ. ಸಮಾಜದಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದನ್ನು ಮುಂದೆಯೂ ಸಾಧ್ಯವಾದಷ್ಟು ಮುಂದುವರಿಸಬೇಕೆಂಬ ಬಯಕೆ ನಮ್ಮದು.
ಎಂ.ಡಿ.ವಿಜಯಕುಮಾರ್ , ಮಹಾತ್ಮ ಗಾಂಧಿ ಗ್ರಾಮ ಸೇವಾ ತಂಡದ ಸಂಚಾಲಕ

Leave a Reply

Your email address will not be published. Required fields are marked *