ಅರಸೀಕೆರೆ: ತಾಲೂಕಿನ ಇತಿಹಾಸ ಪ್ರಸಿದ್ಧ ಮಾಡಾಳು ಮುತ್ತಿನ ಮೂಗುತಿ ಸ್ವರ್ಣ ಗೌರಿ ವಿಸರ್ಜನಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸ್ವರ್ಣಗೌರಿಯನ್ನು ಬಗೆ ಬಗೆಯ ಹೂಗಳಿಂದ ಪಲ್ಲಕ್ಕಿ ಸಹಿತ ಮಂಗಳವಾರ ಸಂಜೆ ಮೆರವಣಿಗೆಗೆ ಸಜ್ಜುಗೊಳಿಸಲಾಯಿತು. ಸಂಪ್ರದಾಯದಂತೆ ಬುಧವಾರ ಬೆಳಗಿನ ಜಾವ ಮಡಿಲು ತುಂಬಿಸಿಕೊಳ್ಳುವ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.
ಗೌರಮ್ಮನವರ ಉತ್ಸವ ಕಣ್ತುಂಬಿಕೊಳ್ಳಲು ಮಹಿಳೆಯರು ಗ್ರಾಮದ ಬೀದಿ ಬೀದಿಗಳಲ್ಲಿ ಚಿತ್ತಾರದ ರಂಗೋಲಿ ಬಿಡಿಸಿದ್ದರು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ನೆರೆದಿದ್ದ ಭಕ್ತ ಸಮೂಹ ಜಯಘೋಷ ಕೂಗುತ್ತಾ ಕರ್ಪೂರದ ಕುಂಡದಲ್ಲಿ ಲಕ್ಷಾಂತರ ಕರ್ಪೂರದ ಬಿಲ್ಲೆಗಳನ್ನು ಸುಡುವ ಮೂಲಕ ತಾವು ತಂದಿದ್ದ ಕಾಣಿಕೆಗಳನ್ನು ಸಮರ್ಪಿಸಿ ಹರಕೆ ತೀರಿಸಿದರು. ಕೆಲ ಸುಮಂಗಲೆಯರು ರಾತ್ರಿಯಿಡೀ ಕರ್ಪೂರದ ಗುಗ್ಗಳ ಹೊತ್ತು ಭಕ್ತಿ ಸಮರ್ಪಿಸಿದರು. ಗ್ರಾಮದ ಮಧ್ಯಭಾಗದಲ್ಲಿರುವ ಕಲ್ಯಾಣಿಯಲ್ಲಿ ಗೋಧೂಳಿ ವೇಳೆಗೆ ವಿಸರ್ಜನಾ ಮಹೋತ್ಸವ ಸಂಪನ್ನಗೊಂಡಿತು. ಮಹಾ ತಾಯಿಗೆ ಭಕ್ತಿಪೂರ್ವಕ ಬೀಳ್ಕೊಡುಗೆ ನೀಡಲಾಯಿತು.
ಮಾಡಾಳು, ಸೀತಾಪುರ, ಶಶಿವಾಳ, ರಾಂಪುರ, ಡಿ.ಎಂ.ಕುರ್ಕೆ, ಕಿತ್ತನಕೆರೆ, ದೋಣನಕಟೆ, ದಿಬ್ಬೂರು, ಹಿರಿಸಾದರಹಳ್ಳಿ, ಸಿದ್ದರಳ್ಳಿ, ಬೊಮ್ಮೇನಹಳ್ಳಿ, ಕಣಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಸಹಸ್ರಾರು ಭಕ್ತರು, ಚುನಾಯಿತ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಕೈಗಾರಿಕೋದ್ಯಮಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ದೇವಿಯ ದರ್ಶನ ಪಡೆದರು.