ದ್ವಿಚಕ್ರ ವಾಹನ ಸವಾರರ ಬೆನ್ನುಬಿದ್ದ ನಾಯಿ ಕೈಗೆ ಸಿಗದೆ ತಪ್ಪಿಸಿಕೊಂಡ ಶ್ವಾನ
ಗೌರಿಬಿದನೂರು: ನಗರದಲ್ಲಿ ಹುಚ್ಚು ನಾಯಿಯೊಂದು ಅಟ್ಟಹಾಸ ನಡೆಸಿ, ಮಕ್ಕಳು, ಮಹಿಳೆಯರು, ವೃದ್ಧರು ಸೇರಿ 14 ಮಂದಿಯನ್ನು ಕಚ್ಚಿ ಗಾಯಗೊಳಿಸಿದೆ.
ಮಂಗಳವಾರ ದಿಢೀರನೆ ರಸ್ತೆಯಲ್ಲಿ ಪ್ರತ್ಯಕ್ಷವಾದ ಹುಚ್ಚುನಾಯಿ, ರಸ್ತೆಬದಿ ಹೋಗುತ್ತಿದ್ದ ಜನರ ಮೇಲೆ ಎರಗಿದೆ. ನಗರದ ಬೆಂಗಳೂರು ವೃತ್ತದಿಂದ ಪ್ರಾರಂಭಿಸಿ ನ್ಯಾಷನಲ್ ಕಾಲೇಜಿನವರೆಗೆ ದಾರಿಯಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದೆ.
ಸವಾರರ ಬೆನ್ನು ಬಿದ್ದ ನಾಯಿ: ಹುಚ್ಚುನಾಯಿ ದ್ವಿಚಕ್ರ ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಹೋಗಿದ್ದು, ಇದರಿಂದ ವಾಹನ ಸವಾರರು ಗಾಬರಿಗೊಂದು ಅಡ್ಡಾದಿಡ್ಡಿಯಾಗಿ ಚಲಿಸಿ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಸ್ಥಳೀಯರು ನಾಯಿಯನ್ನು ಕೊಲ್ಲಲು ಪ್ರಯತ್ನಿಸಿದರೂ ನಾಯಿ ತಪ್ಪಿಸಿಕೊಂಡಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ: ಹುಚ್ಚು ನಾಯಿ ಕಡಿತದಿಂದ ಗಾಯಗೊಂಡವರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಹಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಲವರ ಕೈ ಮತ್ತು ಕಾಲಿನ ಭಾಗಕ್ಕೆ ಕಚ್ಚಿದ್ದು, ಅದೃಷ್ಟವಶಾತ್ ಯಾರಿಗೂ ಹೆಚ್ಚಿನ ಅನಾಹುತವಾಗಿಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.
ಒಂದೇ ದಿನ 23 ಪ್ರಕರಣ
ನಗರದಲ್ಲಿ ಒಂದೇದಿನ 17 ಹಾಗೂ ಗ್ರಾಮೀಣ ಪ್ರದೇಶದಲ್ಲಿ 6 ಸೇರಿ ಒಟ್ಟು 23 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಅಂದಾಜು 2500ಕ್ಕೂ ಅಧಿಕ ಬಿಡಾಡಿ ನಾಯಿಗಳಿವೆ. ಅವುಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ಮಕ್ಕಳು ಮತ್ತು ವಾಹನ ಸವಾರರು ಓಡಾಡಲು ಭಯ ಪಡಬೇಕಾದ ವಾತಾವರಣ ನಿರ್ಮಾಣವಾಗಿದೆ.
ನಗರದಲ್ಲಿ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಿದೆ . ನಮ್ಮ ವಾರ್ಡ್ ನಾಗರಿಕರು ಸೇರಿ ಹಲವು ಜನರ ಮೇಲೆ ನಾಯಿಗಳು ದಾಳಿ ನಡೆಸುತ್ತಿವೆ. ತಕ್ಷಣ ಸೆರೆ ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಬೇಕು.
– ಚಲಪತಿ 3ನೇ ವಾರ್ಡ್ ನಿವಾಸಿ
ಬಿಡಾಡಿ ನಾಯಿಗಳನ್ನು ಸೆರೆ ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ 37.50 ಲಕ್ಷ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ತಿಂಗಳಾಂತ್ಯದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಬಳಿಕ ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಯಲಿದೆ.
– ಡಿ.ಎಂ.ಗೀತಾ ಪೌರಾಯುಕ್ತೆ