ವಿಷ ಪ್ರಸಾದ ದುರಂತ: ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಕೆ.ಆರ್​.ಆಸ್ಪತ್ರೆಗೆ ಸಿಎಂ ದಿಢೀರ್​​ ಭೇಟಿ

ಮೈಸೂರು: ಸುಲ್ವಾಡಿ ಗ್ರಾಮದ ಮಾರಮ್ಮನ ದೇವಸ್ಥಾನದಲ್ಲಿ ವಿಷಪೂರಿತ ಪ್ರಸಾದ ಸೇವಿಸಿ ಮೃತಪಟ್ಟವರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

ಮೈಸೂರಿನ ಕೆ.ಆರ್​.ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿ ಮಾತನಾಡಿದ ಸಚಿವ ಸಿ.ಎಸ್​.ಪುಟ್ಟರಾಜು, ‘ಮೃತರ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ ತಲಾ ಐದು ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ’ ಎಂದರು.

ಘಟನೆಯಲ್ಲಿ ಅಸ್ವಸ್ಥರಾಗಿರುವ ಎಲ್ಲರ ಚಿಕಿತ್ಸಾ ವೆಚ್ಚ ಭರಿಸುವಂತೆ ಚಾಮರಾಜನಗರ, ಮೈಸೂರು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಈಗಾಗಲೇ ಸೂಚಿಸಿದ್ದಾರೆ. ಹಾಗೇ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಭೇಟಿ
ಸಿದ್ಧಗಂಗೆಯ ಶತಾಯುಷಿ ಶಿವಕುಮಾರ ಶ್ರೀ ಆರೋಗ್ಯ ವಿಚಾರಿಸಲು ಚೆನ್ನೈನ ರೇವಾ ಆಸ್ಪತ್ರೆಗೆ ತೆರಳಿದ್ದ ಸಿಎಂ ಎಚ್​ಡಿಕೆ ಚೆನ್ನೈನಿಂದ ವಾಪಸಾದ ತಕ್ಷಣ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆರಳಿ ಅಲ್ಲಿನ ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಾಗಿರುವ ಅಸ್ವಸ್ಥರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. (ದಿಗ್ವಿಜಯ ನ್ಯೂಸ್)