ಪಾನ್ಶಾಪ್ ಪುತ್ರಿ ಅರ್ಥಶಾಸ್ತ್ರದಲ್ಲಿ ಟಾಪರ್

ವಿಜಯವಾಣಿ ಸುದ್ದಿಜಾಲ ಬೀದರ್
ಪಾನ್ಶಾಪ್ ಅಂಗಡಿ ನಡೆಸುವರ ಪುತ್ರಿ ಅರ್ಥಶಾಸ್ತ್ರ ವಿಭಾಗದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ನಾಲ್ಕು ಚಿನ್ನದ ಪದಕ ಪಡೆದು ಸಾಧನೆ ಮೆರೆೆದಿದ್ದಾಳೆ.

ಇಲ್ಲಿಯ ನೌಬಾದ್ ಪ್ರಥಮ ದರ್ಜೆ ಕಾಲೇಜಿನ ಎಂಎ ಅರ್ಥಶಾಸ್ತ್ರ ವಿದ್ಯಾರ್ಥಿನಿ ಲಕ್ಷ್ಮೀ ರಘುನಾಥರಾವ ನಾಸಿಗಾರ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ. ಶುಕ್ರವಾರ ಕಲಬುರಗಿಯಲ್ಲಿ ನಡೆದ ಗುಲ್ಬರ್ಗ ವಿವಿಯ 37ನೇ ಘಟಿಕೋತ್ಸವದಲ್ಲಿ ಇವರಿಗೆ ಪದಕ ಪ್ರದಾನ ಮಾಡಿ ಅಭಿನಂದಿಸಲಾಯಿತು.

ಅರ್ಥಶಾಸ್ತ್ರದಲ್ಲಿ ಅಧಿಕ ಅಂಕ ಪಡೆದಿದ್ದಕ್ಕೆ ಬಸವರಾಜ ರಾಯರೆಡ್ಡಿ ಪದಕ, ಮೈಕ್ರೊ ಎಕಾನಾಮಿಕ್ಸ್ ಪತ್ರಿಕೆಯಲ್ಲಿ ಮಹಿಳಾ ವಿದ್ಯಾರ್ಥಿಗಳಲ್ಲಿ ಅಧಿಕ ಅಂಕ ಪಡೆದಿದ್ದಕ್ಕೆ ದ್ಯಾವಮ್ಮ ಪಸಲಾಡಿ ಪದಕ ಹಾಗೂ ಎಂಎನಲ್ಲಿ ಅಧಿಕ ಅಂಕ ಪಡೆದಿದ್ದಕ್ಕೆ ಲಕ್ಷ್ಮಯ್ಯಾ ಜಾಜಿ, ಎಂ.ಎಸ್. ಕಲ್ಲೂರ್ ಪದಕ ಸೇರಿ ನಾಲ್ಕು ಚಿನ್ನದ ಪದಕ ಲಕ್ಷ್ಮೀ ಮುಡಿಗೇರಿವೆ.

ಲಕ್ಷ್ಮೀ ಇಲ್ಲಿಯ ನಯಾಕಮಾನ್ ಹತ್ತಿರದ ಚೊಂಡಿಗಲ್ಲಿ ನಿವಾಸಿ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದಾರೆ. 7ನೇ ತರಗತಿವರೆಗೆ ನಗರದ ಶಾರದಾ ಶಾಲೆ, ಎಸ್ಸೆಸ್ಸೆಲ್ಸಿವರೆಗೆ ನೀಲಾಂಬಿಕಾ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಸಕರ್ಾರಿ ಜ್ಯೂನಿಯರ್ ಕಾಲೇಜಿನಲ್ಲಿ ಪಿಯು(ಕಲಾ ವಿಭಾಗ) ಮುಗಿಸಿ, ಸಿದ್ಧಾರೂಢ ಕಾಲೇಜಿನಲ್ಲಿ ಡಿಇಡಿ ಮಾಡಿದ್ದಾರೆ. ನಂತರ ನೌಬಾದ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಎಂಎ ಅರ್ಥಶಾಸ್ತ್ರ ಓದಿದ್ದಾರೆ. ಅರ್ಥಶಾಸ್ತ್ರದಲ್ಲಿ ನಾಲ್ಕು ಚಿನ್ನದ ಪದಕ ಪಡೆದು ಗಮನ ಸೆಳೆದಿದ್ದಾರೆ.

ಲಕ್ಷ್ಮೀ ತಂದೆ ನಗರದ ಡಿಸಿಸಿ ಬ್ಯಾಂಕ್ ಎದುರುಗಡೆ ಪಾನ್ಶಾಪ್ ಅಂಗಡಿ ನಡೆಸುತ್ತಿದ್ದಾರೆ. ತಾಯಿ ಸುನೀತಾ ಗೃಹಿಣಿ. ಕಾಲೇಜಿನಲ್ಲಿ ಉಪನ್ಯಾಸಕರು ಹೇಳಿದ ಪಾಠ ಶ್ರದ್ಧೆಯಿಂದ ಕೇಳಿ, ಒಂದು ಬಾರಿ ಮನೆಯಲ್ಲಿ ಪುನರಾವರ್ತನೆ ಮಾಡಿದ ಕಾರಣಕ್ಕೆ ಅಧಿಕ ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ. ಸಾಧನೆಗೆ ಕಠಿಣ ಶ್ರಮ, ಸಮಯಪಾಲನೆ ಬಹಳ ಮುಖ್ಯ ಎನ್ನುತ್ತಾರೆ ಲಕ್ಷ್ಮೀ.