ಬ್ಯಾಟ್ಸ್​ಮನ್​ಗಳ ವಿರುದ್ಧ ಧೋನಿ ಕಿಡಿ

ಚೆನ್ನೈ: ಮೊದಲ ಕ್ವಾಲಿಫೈಯರ್​ನಲ್ಲಿ ಅನುಭವಿಸಿದ ಸೋಲಿಗೆ ಬ್ಯಾಟ್ಸ್​ಮನ್​ಗಳೇ ಪ್ರಮುಖ ಕಾರಣ ಎಂದು ಸಿಎಸ್​ಕೆ ನಾಯಕ ಎಂಎಸ್ ಧೋನಿ ದೂರಿದ್ದಾರೆ. ಲೀಗ್ ಹಂತದಲ್ಲಿ ತವರು ನೆಲದಲ್ಲೇ 7 ಪಂದ್ಯಗಳನ್ನು ಆಡಿದ್ದರೂ ತವರಿನ ಪಿಚ್ ಮರ್ಮ ಅರಿಯದೇ ಬ್ಯಾಟ್ಸ್​ಮನ್​ಗಳು ಕೆಟ್ಟ ಶಾಟ್​ಗಳಿಗೆ ಬಲಿಯಾದರು ಎಂದು ಧೋನಿ ಬೇಸರಿಸಿದರು.

ಚೆಪಾಕ್ ಮೈದಾನದಲ್ಲಿ ಮಂಗಳವಾರ ನಡೆದ ಐಪಿಎಲ್-12ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ತಂಡ 6 ವಿಕೆಟ್​ಗಳಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಶರಣಾಯಿತು. ಫೈನಲ್ ಪ್ರವೇಶಿಸಲು ಸಿಎಸ್​ಕೆ ತಂಡಕ್ಕೆ ಮೊದಲ ಅವಕಾಶ ಕೈತಪ್ಪಿದರೂ ಎರಡನೇ ಕ್ವಾಲಿಫೈಯರ್ ಮೂಲಕ ಮತ್ತೊಂದು ಅವಕಾಶ ಉಳಿದಿದೆ. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ ತಂಡ 4 ವಿಕೆಟ್​ಗೆ 131 ರನ್ ಪೇರಿಸಿದರೆ, ಪ್ರತಿಯಾಗಿ ಮುಂಬೈ ಇಂಡಿಯನ್ಸ್ ತಂಡ ಸೂರ್ಯಕುಮಾರ್ ಯಾದವ್ (71*) ಏಕಾಂಗಿ ಹೋರಾಟದ ಫಲವಾಗಿ 18.3 ಓವರ್​ಗಳಲ್ಲಿ 4 ವಿಕೆಟ್​ಗೆ 132 ರನ್​ಗಳಿಸಿ ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಮುಂಬೈ ಕಳೆದ 6 ವರ್ಷಗಳಲ್ಲಿ 4ನೇ ಹಾಗೂ ಒಟ್ಟಾರೆ 5ನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿತು.

ಬ್ಯಾಟಿಂಗ್ ಕಾಯ್ದುಕೊಳ್ಳಲು ನಿರ್ಧರಿಸಿದ್ದೆ

ಸಿಎಸ್​ಕೆ ಬ್ಯಾಟಿಂಗ್ ಮಾಡುವ ವೇಳೆ ಪಿಚ್ ಸ್ಪಿನ್ನರ್​ಗಳಿಗೆ ನೆರವಾಗುತ್ತಿತ್ತು. ಇದರಿಂದ ಪಿಚ್ ಬಗ್ಗೆ ಚೆನ್ನಾಗಿ ಅರಿತಿದ್ದರಿಂದ ದೊಡ್ಡ ಹೊಡೆತಕ್ಕೆ ಮುಂದಾಗದೇ 1-2 ರನ್​ಗಳಿಗೆ ಹೆಚ್ಚು ಮಹತ್ವ ನೀಡಿದೆ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ ಸೂರ್ಯಕುಮಾರ್ ಯಾದವ್ ಹೇಳಿದರು. ಇನಿಂಗ್ಸ್​ನ

ಅಂತಿಮ ಹಂತದವರೆಗೂ ಬ್ಯಾಟಿಂಗ್ ಕಾಯ್ದುಕೊಳ್ಳಲು ನಿರ್ಧರಿಸಿದ್ದೆ ಎಂದು ಮುಂಬೈ ರಣಜಿ ತಂಡದ ಮಾಜಿ ನಾಯಕರೂ ಆದ ಸೂರ್ಯಕುಮಾರ್ ತಿಳಿಸಿದರು.

ಗೆಲುವಿನ ಶ್ರೇಯ ಸೂರ್ಯಕುಮಾರ್​ಗೆಸಲ್ಲಬೇಕು. ಸ್ಪಿನ್ನರ್​ಗಳ ಎದುರು ಆಡಲು ಅವರೊಬ್ಬ ಉತ್ತಮ ಬ್ಯಾಟ್ಸ್​ಮನ್. ಸ್ಪಿನ್ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸುವ ಕಲೆ ಅವರಲ್ಲಿದೆ.

| ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ನಾಯಕ