ಸಂಚಲನದ ಪ್ರಕರಣಗಳಿಗೆ ಕನ್ನಡಿಗ ಜಡ್ಜ್​ಗಳ ತೀರ್ಪು

| ಶಿವಕುಮಾರ ಮೆಣಸಿನಕಾಯಿ ಬೆಂಗಳೂರು

ತಮಿಳುನಾಡಿನ ರಾಜಕಾರಣದ ಅತ್ಯಂತ ವರ್ಣರಂಜಿತ ಮುಖ್ಯಮಂತ್ರಿಗಳಾಗಿದ್ದ ಜೆ. ಜಯಲಲಿತಾ ಹಾಗೂ ಎಂ. ಕರುಣಾನಿಧಿ ಅವರ ವಿವಾದಾತ್ಮಕ ಬದುಕಿನಲ್ಲಿ ಕರ್ನಾಟಕದ ನ್ಯಾಯಾಧೀಶರು ಒಂದಲ್ಲ ಒಂದು ರೀತಿಯಲ್ಲಿ ನಿರ್ಣಾಯಕ ಎನಿಸಿದ್ದಾರೆ.

ಇದು ಮೇಲ್ನೋಟಕ್ಕೆ ಎತ್ತಿಂದೆತ್ತಣ ಸಂಬಂಧ ಎನಿಸಬಹುದು. ಆದರೆ, ತಮಿಳುನಾಡಿನ ಇಬ್ಬರು ಸಿಎಂಗಳ ಪ್ರಕರಣದಲ್ಲಿ ರಾಜ್ಯದ ನ್ಯಾಯಾಧೀಶರು ನೀಡಿದ ತೀರ್ಪಗಳು ಮಹತ್ವದ ಪರಿಣಾಮವನ್ನೇ ಬೀರಿವೆ. ವ್ಯತ್ಯಾಸ ಇಷ್ಟೇ. ಒಬ್ಬ ಸಿಎಂಗೆ ತೀರ್ಪು ಕಂಟಕವಾದರೆ, ಮತ್ತೊಬ್ಬ ಸಿಎಂ ವಿಚಾರದಲ್ಲಿ ನೀಡಿದ್ದ ತೀರ್ಪು ಅಭಿಮಾನಿಗಳ ಲೆಕ್ಕದಲ್ಲಿ ಗೌರವಕ್ಕೆ ಪಾತ್ರವಾಯಿತು.

ಪ್ರಕರಣ-1: ಜಯಲಲಿತಾ ಬದುಕಿನುದ್ದಕ್ಕೂ ಪೇಚಿಗೆ ಸಿಲುಕಿಸಿದ್ದು ಅಕ್ರಮ ಆಸ್ತಿ ಸಂಪಾದನೆ ಪ್ರಕರಣ. 1991ರಿಂದ 1996ರ ಅವಧಿಯಲ್ಲಿ ಸಿಎಂ ಆಗಿದ್ದಾಗ 66.65 ಕೋಟಿ ರೂ. ಅಕ್ರಮ ಆಸ್ತಿ ಅವರನ್ನು ಬಾಧಿಸಿತ್ತು. ಈ ಪ್ರಕರಣದ ನ್ಯಾಯಸಮ್ಮತ ತನಿಖೆಗಾಗಿ ಮದ್ರಾಸ್​ನಿಂದ ಕರ್ನಾಟಕ ಹೈಕೋರ್ಟ್​ಗೆ ವರ್ಗಾಯಿಸಲಾಗಿತ್ತು. 18 ವರ್ಷಗಳ ಕಾನೂನು ಹೋರಾಟದ ನಂತರ ಜಯಲಲಿತಾ ಸೇರಿ ಸ್ನೇಹಿತೆ ಶಶಿಕಲಾ, ಸೊಸೆ ಇಳವರಸಿ ಹಾಗೂ ವಿ.ಎನ್. ಸುಧಾಕರನ್ ತಪ್ಪಿತಸ್ಥರು ಎಂದು ವಿಶೇಷ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪು ನೀಡಿದವರು ಕನ್ನಡಿಗ, ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮೈಕಲ್ ಡಿ’ಕುನ್ಹಾ. ಮೈಕಲ್ ಡಿ’ ಕುನ್ಹಾ ಮೂಲತಃ ಮಂಗಳೂರಿನವರು.

ಪ್ರಕರಣ-2: ಎಂ. ಕರುಣಾನಿಧಿ ಆ. 7ರ ಸಂಜೆ ನಿಧನರಾದಾಗ ಅವರ ಪಾರ್ಥಿವಶರೀರದ ಅಂತ್ಯಕ್ರಿಯೆಯನ್ನು ಮತ್ತೊಬ್ಬ ಮಾಜಿ ಸಿಎಂ ಸಿ.ಎನ್. ಅಣ್ಣಾದೊರೈ ಸಮಾಧಿ ಇರುವ ಚೆನ್ನೈನ ಮರೀನಾ ಬೀಚ್​ನಲ್ಲೇ ಮಾಡಬೇಕೆಂದು ಡಿಎಂಕೆ ನಿರ್ಧರಿಸಿತ್ತು. ಆದರೆ, ಎಐಎಡಿಎಂಕೆ ನೇತೃತ್ವದ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಆದ್ದರಿಂದ ಡಿಎಂಕೆ ಮಂಗಳವಾರ ರಾತ್ರಿ ಮದ್ರಾಸ್ ಹೈಕೋರ್ಟ್ ಕದ ತಟ್ಟಿತು. ಬುಧವಾರ ಬೆಳಗ್ಗೆಯೂ ಮುಂದುವರಿದ ವಿಚಾರಣೆ ಬಳಿಕ ಕೋರ್ಟ್ ಸಮ್ಮತಿ ನೀಡಿದ ಹಿನ್ನೆಲೆಯಲ್ಲಿ ಕಲೈಜ್ಞರ್​ಕರುಣಾನಿಧಿ ಅಂತ್ಯಕ್ರಿಯೆ ಡಿಎಂಕೆ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಆಶಯದಂತೆ ಮರೀನಾ ಬೀಚ್​ನಲ್ಲೇ ನಡೆಯಿತು.

ಭಾರಿ ಕುತೂಹಲ ಹಾಗೂ ವಿವಾದಕ್ಕೆ ಕಾರಣವಾದ ಕರುಣಾನಿಧಿ ಅಂತ್ಯಕ್ರಿಯೆ ಕುರಿತ ತೀರ್ಪು ನೀಡಿದವರು ಮದ್ರಾಸ್ ಹೈಕೋರ್ಟ್​ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಹಾಗೂ ಎಸ್.ಎಸ್. ಸುಂದರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ. ಅಂದಹಾಗೆ ಹುಲುವಾಡಿ ರಮೇಶ್ ಕೂಡ ಕನ್ನಡಿಗರು. ಮೈಸೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದವರು. ಹೀಗೆ ನೇರವಾಗಿಯೇ ತಮಿಳುನಾಡಿನ ಇಬ್ಬರು ಮುಖ್ಯಮಂತ್ರಿಗಳ ವಿಭಿನ್ನ ಸನ್ನಿವೇಶಗಳಲ್ಲಿ ನಿರ್ಣಾಯಕ ತೀರ್ಪು ಕೊಟ್ಟವರು ಕನ್ನಡಿಗರೇ ಆಗಿದ್ದುದು ಕೇವಲ ಕಾಕತಾಳೀಯ.