ಸಮಾಜದಲ್ಲಿ ಯಾವ ಕೆಲಸವೂ ಕೀಳಲ್ಲ

ಚಿಕ್ಕಮಗಳೂರು: ಕೇಶ ಮುಂಡನ ಕಾಯಕಕ್ಕೆ ಶ್ರೇಷ್ಠತೆ ನೀಡಿ ಪುರಾಣದಲ್ಲಿ ದೈವತ್ವ ಸ್ವರೂಪ ನೀಡಿದವರು ಸವಿತ ಮಹರ್ಷಿ ಎಂದು ಸಾಹಿತಿ ಬಿ.ತಿಪ್ಪೇರುದ್ರಪ್ಪ ಪ್ರತಿಪಾದಿಸಿದರು.

ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ದೇವತೆಗಳು ಯಜ್ಞ, ಯಾಗಾದಿ ನೆರವೇರಿಸುತ್ತಿದ್ದಾಗ ಶಿವನ ಗಡ್ಡ ಹಾಗೂ ಮೀಸೆಗೆ ಯಜ್ಞದ ಬೆಂಕಿ ಸೋಕಿ ಸುಟ್ಟು ಹೋಯಿತು. ಈ ಸಂದರ್ಭ ಶಿವನಿಂದ ಸೃಷ್ಟಿಯಾದ ಸವಿತ ಮಹರ್ಷಿಗಳು ಶಿವನಿಗೆ ಕೇಶ ಮುಂಡನ ಮಾಡಿರುವ ಬಗ್ಗೆ ಪೌರಾಣಿಕ ಪ್ರತೀತಿ ಇದೆ ಎಂದರು.

ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಮಾತನಾಡಿ, ಈ ವರ್ಷದಿಂದ ಪ್ರಥಮವಾಗಿ ಸವಿತ ಮಹರ್ಷಿಗಳ ಜಯಂತಿ ಆಚರಿಸಲು ಸರ್ಕಾರ ಮುನ್ನುಡಿ ಬರೆದಿದೆ. ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಸೂಕ್ತ. ಸಮಾಜವನ್ನು ಗೌರವಿಸಲು ಉತ್ತಮ ಹೆಜ್ಜೆ ಇಟ್ಟಿದೆ. ಮಹಾ ಪುರುಷರ ಜಯಂತಿ ಆಚರಣೆಗೆ ಸೀಮಿತವಾಗಬಾರದು. ಆ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.