ರಾಮಗಢ (ಜಾರ್ಖಂಡ್): ಕಳೆದ ಗುರುವಾರ ರಾಮಗಢ್ ಜಿಲ್ಲೆಯ ಮನುವಾ ಗ್ರಾಮದಲ್ಲಿ ನಡೆದ ಗೋಮಾಂಸ ವರ್ತಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಮುಖಂಡ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ನಾಯಕ ನಿತ್ಯಾನಂದ್ ಮಹಾತೋ ಹಾಗೂ ಸಂತೋಷ್ ಸಿಂಗ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಚೋಟು ರಾಣಾ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ.
ಮಾರುತಿ ವಾಹನದಲ್ಲಿ ಗೋಮಾಂಸ ಕೊಂಡೊಯ್ಯುತ್ತಿದ್ದಾನೆಂಬ ಅನುಮಾನದ ಮೇಲೆ ರಾಮಗಢ್ ಜಿಲ್ಲೆಯ ಮನುವಾ ಗ್ರಾಮದ ಮಾಂಸ ವರ್ತಕ ಅಸ್ಗಾರ್ ಅನ್ಸಾರಿ ಎನ್ನುವರನ್ನು ಕಳೆದ ಗುರುವಾರ ಗುಂಪೊಂದು ಸಾರ್ವಜನಿಕವಾಗಿ ಥಳಿಸಿ ಹತ್ಯೆಗೈದಿತ್ತು. ಆತನ ವಾಹನಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿತ್ತು.
ನಿತ್ಯಾನಂದ್ ಮಥೊ ಅವರು ಯುವಕರನ್ನು ಪ್ರೇರೇಪಿಸಿ ಈ ಕೃತ್ಯ ಎಸಗಿದ್ದಾನೆ. ಘಟನೆಯ ಸ್ಥಳದಲ್ಲಿ ನಿತ್ಯಾನಂದ್ ಅವರು ಇರಲಿಲ್ಲ. ಆದರೆ, ಒಂದು ವಿಡಿಯೋದಲ್ಲಿ ಅವರು ಅನ್ಸಾರಿಯನ್ನು ಎಳೆದ ದೃಶ್ಯ ಸೆರೆಯಾಗಿದೆ. ನಂತರ ಸ್ಥಳೀಯರು ಸೇರಿ ಅನ್ಸಾರಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯನ್ನು ಹಿರಿಯ ಅಧಿಕಾರಿ ಆರ್.ಕೆ. ಮಾಲಿಕ್ ಅವರು, ಪೂರ್ವಸಿದ್ಧತೆಯ ಕೊಲೆ ಎಂದು ವಿವರಿಸಿದ್ದಾರೆ. ದಾಳಿಕೋರರು ನೆರೆಹೊರೆಯ ಹಜಾರಿಬಾಗ್ ಜಿಲ್ಲೆಯವರಾಗಿದ್ದ ಅನ್ಸಾರಿಗಾಗಿ ಕಾಯುತ್ತಿದ್ದರು ಎಂದು ತೋರುತ್ತದೆ. ಅನ್ಸಾರಿ ಗೋಮಾಂಸವನ್ನು ಸಾಗಿಸುತ್ತಿದ್ದಾರೆ ಎಂದು ದೃಢೀಕರಿಸಲಾಗಲಿಲ್ಲ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)
ArrestAsgar AnsariBeefBJPBJP Leader Nityanand MahtoJharkhandRamagarh