ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಕೊಲೆಗೈಯುತ್ತಿದ್ದ ಈ ಪಾತಕಿಗೆ ನೀಲಿ ಅಂಗಿ ಅದೃಷ್ಟವಂತೆ!

ಗುರುಗ್ರಾಮ(ಉತ್ತರ ಪ್ರದೇಶ)​: ಹಣದ ಆಮಿಷವೊಡ್ಡಿ ಹುಡುಗಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆಗೈಯುತ್ತಿದ್ದ ಸರಣಿ ಅತ್ಯಾಚಾರಿ ಆರೋಪಿಯು ಪೊಲೀಸ್​ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.

ಆರೋಪಿ ಸುನೀಲ್​ ಕುಮಾರ್​(20) ಎಂಬಾತ 2016-2018ರ ನಡುವೆ ಗುರುಗ್ರಾಮದ ಮೂವರು ಹುಡುಗಿಯರನ್ನು ಅತ್ಯಾಚಾರಗೈದು ಕೊಲೆ ಮಾಡಿದ ರೀತಿಯನ್ನು ಪೊಲೀಸ್​ ವಿಚಾರಣೆ ವೇಳೆ ಬಹಿರಂಗಪಡಿಸಿದ್ದು, ದೆಹಲಿ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶಗಳಲ್ಲಿ ಇತರೆ ಆರು ಹುಡುಗಿಯರನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ನನಗೆ ನೀಲಿ ಬಣ್ಣದ ಅಂಗಿ ಅದೃಷ್ಟವಾಗಿದ್ದು, ಅದನ್ನು ಧರಿಸಿಲ್ಲದ ಕಾರಣ ನಾನು ನಿಮ್ಮ ಕೈಗೆ ಸಿಕ್ಕಿಬಿದ್ದಿದ್ದೇನೆ ಎಂದು ಆರೋಪಿ ಸುನೀಲ್​ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಇದೇ ತಿಂಗಳ ಆರಂಭದಲ್ಲಿ ಆರೋಪಿ ಸುನೀಲ್, ಗುರುಗ್ರಾಮದಲ್ಲಿ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾ​ರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಆತನನ್ನು ಸೋಮವಾರ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಬಂಧಿಸಲಾಯಿತು.

ನಾನು ನೀಲಿ ಅಂಗಿಯನ್ನು ಧರಿಸಿದಾಗಲೆಲ್ಲ ಅಪರಾಧ ಎಸಗುತ್ತಿದ್ದೆ. ಆ ವೇಳೆ ಯಾವೊಬ್ಬ ಪೊಲೀಸರು ನನ್ನ ಜಾಡು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ಬಾರಿ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರು ಪೊಲೀಸರು ಬಂಧಿಸಿದ್ದರ ಬಗ್ಗೆ ಆರೋಪಿ ಆಶ್ಚರ್ಯ ವ್ಯಕ್ತಪಡಿಸಿದ್ದಾನೆ ಎಂದು ಪೊಲೀಸ್​ ಆಯುಕ್ತ ಕೆ.ಕೆ.ರಾವ್​ ತಿಳಿಸಿದ್ದಾರೆ.

ಅಪರಾಧ ಮಾಡುವ ಮುನ್ನ ಆರೋಪಿ ತನಗೆ ತಾನೇ ಸಿದ್ಧವಾಗುತ್ತಿದ್ದ. ಅಪರಾಧ ಎಸಗುವ ಒಂದು ದಿನದ ಮುಂಚೆ ಆತ ಸ್ಥಳಾನ್ವೇಷಣೆ ನಡೆಸಿ, ಅಪರಾಧ ಎಸಗುವ ಸ್ಥಳವನ್ನು ನಿಗದಿಪಡಿಸಿಕೊಂಡು ಮುಂಚಿತವಾಗಿಯೇ ಇಟ್ಟಿಗೆಗಳು ಮತ್ತು ಬಡಿಗೆಯನ್ನು ಇಟ್ಟುಕೊಳ್ಳುತ್ತಿದ್ದ. ಈತ 3 ರಿಂದ 6 ವರ್ಷದ ಬಾಲಕಿಯರನ್ನೇ ಟಾರ್ಗೆಟ್​​ ಮಾಡಿ, ಜನಜಂಗುಳಿ ಪ್ರದೇಶದಲ್ಲಿ ಬಾಲಕಿಯರ ಪಾಲಕರು ತಮ್ಮ ಕೆಲಸದಲ್ಲಿ ನಿರತವಾಗಿರುವುದನ್ನೇ ಬಂಡವಾಳ ಮಾಡಿಕೊಂಡು ಬಾಲಕಿಯರಿಗೆ ಹಣದ ಆಮಿಷ ತೋರಿಸಿ, ಅವರನ್ನು ಎತ್ತೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡುತ್ತಿದ್ದ. ಅಪರಾಧ ಎಸಗುವ ವೇಳೆ ಪೊಲೀಸರು ತನ್ನ ಜಾಡು ಹಿಡಿಯಬಹುದೆಂದು ಮೊಬೈಲ್​ ಪೋನ್​ ಬಳಸುತ್ತಿರಲಿಲ್ಲ ಎಂಬ ಆತಂಕಕಾರಿ ವಿಚಾರಗಳನ್ನು ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. (ಏಜೆನ್ಸೀಸ್​)