ಚಂದ್ರ ಗ್ರಹಣ ದೇಗುಲಗಳಲ್ಲಿ ಮಂತ್ರ ಪಠಣ

ಶುಕ್ರವಾರ ರಾತ್ರಿ 11.54ರಿಂದ ಶನಿವಾರ ಮುಂಜಾನೆ 3.48 ಗಂಟೆವರೆಗೆ ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ವಿವಿಧ ಪೂಜೆ-ಪುನಸ್ಕಾರಗಳು ನೆರವೇರಿದವು. ಗ್ರಹಣ ಹಿನ್ನೆಲೆಯಲ್ಲಿ ಕೆಲ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಮತ್ತೆ ಕೆಲವು ಕಡೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಭಕ್ತರು ಗ್ರಹಣ ಬಿಡುವವರೆಗೂ ಜಾಗರಣೆ, ಜಪ-ತಪದಲ್ಲಿ ನಿರತರಾಗಿದ್ದರೆ, ಹಲವೆಡೆ ನಾಗರಿಕರು ರಕ್ತಚಂದನ ಗ್ರಹಣವನ್ನು ಕಣ್ತುಂಬಿಕೊಂಡರು.

ಬೆಂಗಳೂರು: ಶತಮಾನದ ಸುದೀರ್ಘ ಚಂದ್ರಗ್ರಹಣವನ್ನು ಶುಕ್ರವಾರ ತಡರಾತ್ರಿ ಸಾರ್ವಜನಿಕರು ರಾಜ್ಯದಾದ್ಯಂತ ಸಂಭ್ರಮ ಸಡಗರದಿಂದ ವೀಕ್ಷಿಸಿದರು. ಗ್ರಹಣಕ್ಕೂ ಮುನ್ನ ಜನ ದೇವಾಲಯಗಳಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಮಂತ್ರ ಪಠಿಸಿದರು. ಸಂಪೂರ್ಣ ಚಂದ್ರಗ್ರಹಣದ ಪ್ರಯುಕ್ತ ರಾಜಧಾನಿಯ ನೆಹರೂ ತಾರಾಲಯದಲ್ಲಿ ಶುಕ್ರವಾರ ತಡರಾತ್ರಿ ದೂರದರ್ಶಕದ ಮೂಲಕ ಖಗೋಳದ ವಿಸ್ಮಯವನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು. ಸಾವಿರಾರು ಜನ ಪಾಲ್ಗೊಂಡು, ಕೆಂಪು ಚಂದಿರನನ್ನು ಕಣ್ತುಂಬಿಕೊಂಡರು. ಇಲ್ಲಿ ರಾತ್ರಿ 11.30ರಿಂದ ಬೆಳಗಿನ ಜಾವ 3.30ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಬರಿಗಣ್ಣಿನಿಂದಲೂ ಚಂದ್ರಗ್ರಹಣವನ್ನು ವೀಕ್ಷಿಸಬಹುದು ಎಂದು ವಿಜ್ಞಾನಿಗಳು ಮುಂಚೆಯೇ ಹೇಳಿದ್ದರಿಂದ ಬಹಳಷ್ಟು ಜನ ಮಹಡಿಗಳ ಮೇಲೆ ಹಾಗೂ ರಸ್ತೆಯಲ್ಲೇ ಕೆಂಪು ಚಂದಿರನನ್ನು ವೀಕ್ಷಿಸಿದರು. ದಾವಣಗೆರೆ ಬಾಲಭವನದಲ್ಲಿ ಟೆಲಿಸ್ಕೋಪ್ ಮೂಲಕ ಚಂದ್ರಗ್ರಹಣ ಕಣ್ತುಬಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಧಾರವಾಡದಲ್ಲಿ ಮಳೆ ಹಾಗೂ ಮೋಡದಿಂದ ವೀಕ್ಷಣೆಗೆ ಅಡ್ಡಿಯಾಯಿತು.

ಅಷ್ಟಮಠ ಶ್ರೀಗಳ ಪುಣ್ಯಸ್ನಾನ

ಉಡುಪಿಯ ಮಧ್ವ ಸರೋವರದಲ್ಲಿ ಅಷ್ಟ ಮಠದ ಶ್ರೀಗಳು ಪುಣ್ಯ ಸ್ನಾನ ಮಾಡಿದರು. ಹೊರನಾಡು ಅನ್ನಪೂರ್ಣೆಶ್ವರಿ ದೇವಿಗೆ ಗ್ರಹಣದ ಪೂರ್ಣಾವಧಿಯಲ್ಲಿ ಜಲಾಭಿಷೇಕ ನಡೆಸಲಾಯಿತು.

ಶೃಂಗೇರಿ ದೇಗುಲದಲ್ಲಿ ಪೂಜೆ

ಶೃಂಗೇರಿ ಶ್ರೀ ಶಾರದಾ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ 11.54ರಿಂದ ಶನಿವಾರ ಮುಂಜಾನೆ 3.48 ಗಂಟೆವರೆಗೆ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಆವರಣದಲ್ಲಿರುವ ಶ್ರೀ ತೋರಣ ಗಣಪತಿ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿ ಎಲ್ಲ ದೇವಾಲಯಗಳನ್ನು ತೆರೆಯಲಾಗಿತ್ತು. ಗ್ರಹಣ ಮುಗಿದ ನಂತರ ಶ್ರೀ ಮಠದ ಪುರೋಹಿತರಿಂದ ದೇವಾಲಯದಲ್ಲಿ ಗ್ರಹಣ ಪೂಜೆ ನೆರವೇರಿಸಲಾಯಿತು. ಮಠದ ಇತಿಹಾಸದಲ್ಲಿ ಹೀಗೆ ರಾತ್ರಿ ದೇವಾಲಯ ತೆರೆದಿರುವುದು ಅಪರೂಪವಾಗಿತ್ತು.

ಸ್ಮಶಾನದಲ್ಲಿ ಜನಜಾಗೃತಿ

ಬೆಳಗಾವಿಯ ಮಾನವ ಬಂಧುತ್ವ ವೇದಿಕೆ ಚಂದ್ರ ಗ್ರಹಣ ನಿಮಿತ್ತ ಅಲ್ಲಿನ ಸ್ಮಶಾನದಲ್ಲಿ ಶುಕ್ರವಾರ ರಾತ್ರಿ ಜನಜಾಗೃತಿ ಕಾರ್ಯಕ್ರಮ ನಡೆಸಿ, ಚಂದ್ರ ಗ್ರಹಣ ಒಂದು ನೈಸರ್ಗಿಕ ವಿಸ್ಮಯ ಎಂದು ತಿಳಿವಳಿಕೆ ಮೂಡಿಸಿತು.

ತಿರುಪತಿಯಲ್ಲಿ ದೇವೇಗೌಡರ ಕುಟುಂಬ

ಶತಮಾನದ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಟುಂಬ ವರ್ಗದವರು ತಿರುಪತಿ ಶ್ರೀ ವೆಂಕಟೇಶ್ವರನ ದರ್ಶನ ಪಡೆದು ಸುಪ್ರಭಾತ ಪೂಜೆ ಸಲ್ಲಿಸಿದರು. ದೇವೇಗೌಡರ ಜತೆಗೆ ಅವರ ಪತ್ನಿ ಚೆನ್ನಮ್ಮ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸೇರಿ ಕುಟುಂಬದವರು ಪಾಲ್ಗೊಂಡಿದ್ದರು.