ಲಖನೌ: ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಲ್ಯಾನ್ಸ್ ಕ್ಲೂಸೆನರ್ ಅವರನ್ನು ಮುಂಬರುವ ಐಪಿಎಲ್-17ರ ಆವೃತ್ತಿಗೆ ಲಖನೌ ಸೂಪರ್ ಜೈಂಟ್ಸ್ ನೂತನ ಸಹಾಯಕ ಕೋಚ್ ನೇಮಕ ಮಾಡಲಾಗಿದೆ. ದಕ್ಷಿಣ ಅಫ್ರಿಕಾ ಎಸ್20 ಲೀಗ್‌ನಲ್ಲಿ ಎಲ್‌ಎಸ್‌ಜಿ ್ರಾಂಚೈಸಿಯ ಡರ್ಬನ್ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿರುವ ಕ್ಲೂಸೆನರ್, ಐಪಿಎಲ್‌ನಲ್ಲಿ ಜಸ್ಟೀನ್ ಲ್ಯಾಂಗರ್‌ಗೆ ಸಹಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್‌ನ ಬ್ಯಾಟಿಂಗ್ ಕೋಚ್ ಆಗಿ ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವ 52 ವರ್ಷದ ಕ್ಲೂಸೆನರ್, ಭಾರತದ ದೇಶೀಯ ಟೂರ್ನಿಗಳಲ್ಲೂ ದೆಹಲಿ ಹಾಗೂ ತ್ರಿಪುರ ರಾಜ್ಯ ತಂಡಗಳ ಪರ ಕೆಲಸ ನಿರ್ವಹಿಸಿದ್ದಾರೆ. ಕಳೆದ ವರ್ಷದ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಮೆಜಾನ್ ವಾರಿಯರ್ಸ್ ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿ ಜಯಿಸಲು ನೆರವಾಗಿದ್ದ ಕ್ಲೂಸೆನರ್, ದ.ಆಫ್ರಿಕಾ, ಜಿಂಬಾಬ್ವೆ ತಂಡಗಳ ಬ್ಯಾಟಿಂಗ್ ಕೋಚ್ ಸಹ ಆಗಿದ್ದರು. 1996-2004ರವರೆಗೆ 49 ಟೆಸ್ಟ್, 171 ಏಕದಿನದಲ್ಲಿ ಕ್ಲೂಸೆನರ್ ದ.ಆಫ್ರಿಕಾವನ್ನು ಪ್ರತಿನಿಧಿಸಿದ್ದಾರೆ.