ಮಾಲೆಗಾವ್​ ಸ್ಫೋಟ ಪ್ರಕರಣ: ಶ್ರೀಕಾಂತ್​ ಪುರೋಹಿತ್​, ಸಾಧ್ವಿ ವಿರುದ್ಧ ದೋಷಾರೋಪ ನಿಗದಿ

ಮುಂಬೈ: ಮಾಲೆಗಾವ್ ಸ್ಫೋಟ ಪ್ರಕರಣದಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರ ಐವರ ವಿರುದ್ಧ ಮುಂಬೈನ ವಿಶೇಷ ನ್ಯಾಯಾಲಯವು ಮಂಗಳವಾರ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ದೋಷಾರೋಪ ದಾಖಲಿಸಿದೆ.

ಆರೋಪಿಗಳ ವಿರುದ್ಧ ಎನ್‌ಐಎ ವಿಶೇಷ ಕೋರ್ಟ್‌ ನ್ಯಾಯಾಧೀಶ ವಿನೋದ್ ಪಡಲ್ಕರ್ ಅವರು ದೋಷಾರೋಪ ನಿಗದಿಮಾಡಿದರು.
ಯುಎಪಿಎ ಕಾಯ್ದೆಯಡಿ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾದ ಆರೋಪ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿ ಕ್ರಿಮಿನಲ್ ಸಂಚು ಮತ್ತು ಹತ್ಯೆ ಆರೋಪವನ್ನು ಆಪಾದಿತರ ವಿರುದ್ಧ ಹೊರಿಸಲಾಗಿದೆ.

ದೋಷಾರೋಪ ನಿಗದಿಯಾದ ನಂತರ ಕ್ರಿಮಿನಲ್ ಪ್ರಕರಣದ ವಿಚಾರಣೆ ಆರಂಭವಾಗುವುದು. ನ್ಯಾಯಾಧೀಶರು ಆರೋಪಗಳನ್ನು ಓದಿ ಹೇಳುವಾಗ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು. ಪುರೋಹಿತ್, ಸಾಧ್ವಿ ಮಾತ್ರವಲ್ಲದೇ, ಆರೋಪಿಗಳಾದ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ, ಅಜಯ್ ರಾಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ವಿರುದ್ಧವೂ ಆರೋಪ ನಿಗದಿಯಾಗಿದೆ.

29 ಸೆಪ್ಟೆಂಬರ್ 2008ರಲ್ಲಿ ಬೈಕ್​ಗೆ ಬಾಂಬ್​ ಅನ್ನು ಕಟ್ಟಿ ಮಾಲೆಗಾವ್ ಪಟ್ಟಣದ ಮಸೀದಿ ಬಳಿ ಸ್ಫೋಟಗೊಳಿಸಲಾಗಿತ್ತು. ಆ ಘಟನೆಯಲ್ಲಿ ಆರು ಮಂದಿ ಮೃತಪಟ್ಟು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.