ಚನ್ನವೀರ ಮಹಾಸ್ವಾಮಿಗಳ ಜನ್ಮಶತಮಾನೋತ್ಸವ ಭಾವಚಿತ್ರ ಮೆರವಣಿ

ಅಕ್ಕಿಆಲೂರ: ಲಿಂ.ಚನ್ನವೀರ ಮಹಾಸ್ವಾಮಿಗಳ ಜನ್ಮಶತಮಾನೋತ್ಸವದ ಪ್ರಯುಕ್ತ ಗುರುವಾರ ಭಕ್ತರ ಹಷೋದ್ಘಾರದ ಮಧ್ಯೆ ಪೂಜ್ಯರ ಭವ್ಯ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.

ಸ್ಥಳೀಯ ವಿರಕ್ತಮಠದಿಂದ ಆರಂಭವಾದ ಮೆರವಣಿಗೆಯಲ್ಲಿ ಗ್ರಾಮದ 13 ಯುವ ಸಂಘಟನೆಗಳು ಪುಷ್ಪ ಮತ್ತು ವಿದ್ಯುತ್ ಅಲಂಕಾರದಿಂದ ನಿರ್ವಿುಸಿದ ಲಿಂ.ಚನ್ನವೀರ ಸ್ವಾಮೀಜಿಗಳ ಭಾವಚಿತ್ರವುಳ್ಳ ತೆರೆದ ವಾಹನ ಗಮನ ಸೆಳೆಯಿತು. ಲಿಂ.ಚನ್ನವೀರ ಸ್ವಾಮೀಜಿಗಳ ಹಾಗೂ ಹಾನಗಲ್ಲ ಲಿಂ.ಕುಮಾರ ಸ್ವಾಮೀಜಿಗಳ ಭಾವಚಿತ್ರಗಳೊಂದಿಗೆ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಆನೆ ಅಂಬಾರಿ ಮೆರವಣಿಗೆಯ ವಿಶೇಷವಾಗಿತ್ತು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಕನ್ನಡ ನಾಡು-ನುಡಿ ಸಂಸ್ಕೃತಿ ಅನಾವರಣಗೊಳಿಸುವ ಹತ್ತಕ್ಕೂ ಹೆಚ್ಚು ವಿವಿಧ ಕಲಾತಂಡಗಳು, ಪಟ್ಟಣ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಮುತ್ತೈದೆಯರ ಪೂರ್ಣಕುಂಭಗಳು, ಮಾಳಗೊಂಡನಕೊಪ್ಪ ಮತ್ತು ಗೊಡಚಿಕೊಂಡ, ನೀಲಗುಂದ ಗ್ರಾಮಗಳ ಭಜನಾ ಮಂಡಳಿಗಳ ಕಲಾತಂಡಗಳ ವೈಭವ ಮೆರುಗು ನೀಡಿದವು. ಲಿಂ.ಚನ್ನವೀರ ಸ್ವಾಮೀಜಿಗಳ ಲಿಂಗಪೂಜಾನುಷ್ಠಾನದ ಕಾಲ್ಪನಿಕ ಸನ್ನಿವೇಶವನ್ನು ಪ್ರಚುರಪಡಿಸುವ ಪಟ್ಟಣದ ವೀರಭದ್ರಪ್ಪ ಉಪ್ಪಿನ ಅವರ ಛದ್ಮವೇಷದ ಸ್ತಬ್ಧಚಿತ್ರ ಗಮನ ಸೆಳೆಯಿತು.

ಪೇಟೆ ಓಣಿ, ಬಸವೇಶ್ವರ ನಗರ, ಕುಮಾರ ನಗರ, ಚಲವಾದಿ ಓಣಿ, ಕಮಾಟಿಗೇರಿ, ಹಳೂರ ಓಣಿ ಸೇರಿ ನಾಲ್ಕು ಕೀಲೋಮೀಟರ್​ಗೂ ಹೆಚ್ಚು ಉದ್ದ ಕ್ರಮಿಸಿದ ಮೆರವಣಿಗೆಯಲ್ಲಿ ಸಾವಿರಾರು ಜನ ಲಿಂ.ಚನ್ನವೀರ ಸ್ವಾಮೀಜಿಗಳ ಸಮಗ್ರ ಸಮಾಜ ಕ್ರಾಂತಿಯ ಕುರಿತಾದ ಮಂಗಳಘೊಷಗಳನ್ನು ಕೂಗುತ್ತ ಹೆಜ್ಜೆ ಹಾಕಿದರು. ಬಿ.ಜಿ.ಸಾಲವಟಗಿ ವ್ಯಾಪಾರಸ್ಥರು ಸೇರಿ ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದವು.

ಎಲ್ಲ ಬಡಾವಣೆಗಳಲ್ಲಿ ತಳಿರು-ತೋರಣ, ರಂಗೋಲಿ, ಬಾಳಿಕಂಬಗಳು, ಕೇಸರಿ ಕಮಾನುಗಳು, ಬಂಟಿಂಗ್ಸ್​ಗಳು, ದಾರ್ಶನಿಕರ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಬಾಗಲಕೋಟಿ ಜಿಲ್ಲೆ ಬದಾಮಿಯ ಕಲ್ಮೇಶ್ವರ ಭಜನಾ ಮಂಡಳಿಯ ಆಕಳು ಕುಣಿತದೊಂದಿಗೆ ಭಜನೆ ಪ್ರಮುಖ ಆಕರ್ಷಣೆಯಾಗಿತ್ತು. 5 ಗಂಟೆಗೂ ಹೆಚ್ಚು ಕಾಲ ನಡೆದ ಮೆರವಣಿಗೆ ವಿರಕ್ತಮಠದಲ್ಲಿ ಸಂಪನ್ನಗೊಂಡಿತು.

ಬಸಯ್ಯ ಮತ್ತು ಶಾಂತಯ್ಯ ಶಾಸ್ತ್ರೀಗಳು ವೇದ, ಸಂಸ್ಕೃತದ ಮಂತ್ರದೊಂದಿಗೆ ತೆರೆದ ವಾಹನದಲ್ಲಿ ಇರಿಸಲಾಗಿದ್ದ ಲಿಂ.ಚನ್ನವೀರ ಸ್ವಾಮೀಜಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಂತೆ ಅಂಬಾರಿ ಹೊತ್ತ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಆನೆ ಪೂಜ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು.