ಸಬ್ಸಿಡಿ ತಿಂದ್ರೆ ಹುಷಾರ್

ಬೆಂಗಳೂರು: ಎಲ್ಪಿಜಿ ಸಬ್ಸಿಡಿ ನೀಡಿಕೆಯಲ್ಲಿ ಅಕ್ರಮ ಎಸಗಿದಲ್ಲಿ ಅಂತಹ ಗ್ಯಾಸ್ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ತೈಲ ಮಾರಾಟ ಸಂಸ್ಥೆ (ಒಎಂಸಿ) ಎಚ್ಚರಿಸಿದೆ. ‘ಎಲ್ಪಿಜಿ ಸಬ್ಸಿಡಿಗೆ ಬ್ಲೇಡ್’ ಶೀರ್ಷಿಕೆಯಲ್ಲಿ ಗುರುವಾರ ವಿಜಯವಾಣಿ ಪ್ರಕಟಿಸಿದ ವರದಿಯಿಂದಾಗಿ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ. ಗ್ರಾಹಕರು ಬ್ಯಾಂಕ್​ನಲ್ಲಿ ಖಾತೆಗೆ ಆಧಾರ್ ಜೋಡಣೆ ಮತ್ತು ಕೆವೈಸಿ ಅಪ್​ಡೇಟ್ ಮಾಡಿದ್ದರೂ ಗ್ಯಾಸ್ ಏಜೆನ್ಸಿಗಳು ಸಬ್ಸಿಡಿ ಕೊಡಲು ನಿರಾಕರಿಸುತ್ತಿರುವುದನ್ನು ವಿಜಯವಾಣಿ ಸಾಕ್ಷಿ ಸಮೇತ ಬಯಲಿಗೆಳೆದ ಬಳಿಕ ರಾಜ್ಯಾದ್ಯಂತ ಸಂಚಲನ ಉಂಟಾಗಿದೆ.

ನೂರಾರು ಗ್ರಾಹಕರು ವಿಜಯವಾಣಿ ಕಚೇರಿಗೆ ಕರೆ ಮಾಡಿ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಒಎಂಸಿ ತೀರ್ಮಾನ: ಹೊಗೆಮುಕ್ತ ದೇಶದ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೆ ತಂದಿದೆ. ಇಂಡಿಯನ್ ಆಯಿಲ್ ಕಾಪೋರೇಷನ್(ಐಒಸಿ) 66.8 ಲಕ್ಷಗಳ ಪೈಕಿ 59.3 ಲಕ್ಷ, ಭಾರತ್ ಪೆಟ್ರೋಲಿಯಂ ಕಾಪೋರೇಷನ್ (ಬಿಪಿಸಿ) 38.5 ಲಕ್ಷಗಳ ಪೈಕಿ 34.4 ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾಪೋರೇಷನ್(ಎಚ್​ಪಿಸಿ) 52.1 ಲಕ್ಷಗಳ ಪೈಕಿ 47.2 ಲಕ್ಷ ಗ್ಯಾಸ್ ಸಬ್ಸಿಡಿ ಖಾತೆಗಳು ರಾಜ್ಯದಲ್ಲಿದೆ. ಪ್ರತಿ ತಿಂಗಳು ಲಕ್ಷಾಂತರ ರೂ. ಸಬ್ಸಿಡಿ ಹಣ ಕೇಂದ್ರದಿಂದ ಬಿಡುಗಡೆಯಾಗುತ್ತಿದೆ. ಗ್ಯಾಸ್ ಏಜೆನ್ಸಿಗಳು ಮತ್ತು ಅಧಿಕಾರಿಗಳು ಸಬ್ಸಿಡಿ ಹಣವನ್ನು ಗೋಲ್‍ಮಾಲ್ ಮಾಡುತ್ತಿರುವ ಬಗ್ಗೆ ಗ್ರಾಹಕರು ತೈಲ ಮಾರಾಟ ಸಂಸ್ಥೆಗಳಿಗೆ ದೂರು ನೀಡಿದರೆ ಅಂಥ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಒಎಂಸಿ ತಿಳಿಸಿದೆ.

ಖಾತ್ರಿಪಡಿಸಿಕೊಳ್ಳಿ: ಕೆಲವು ಪ್ರಕರಣಗಳಲ್ಲಿ ಮಾತ್ರ ಸಬ್ಸಿಡಿ ಹಣ ವರ್ಗಾವಣೆ ವಿಳಂಬವಾಗಿರುತ್ತದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಿದೆಯಾ ಅಥವಾ ಇಲ್ಲವಾೕ ಎಂಬುದರ ಖಾತ್ರಿಗೆ www.uidai.gov.in ಮತ್ತು ಸಬ್ಸಿಡಿ ಹಣ ಖಾತೆಗೆ ಜಮೆ ಆಗಿರುವ ಬಗ್ಗೆ www.npci.org.in/apbs-faqs-customers ಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು. ಆಯಾ ಕ್ಷೇತ್ರ ವ್ಯಾಪ್ತಿಯ ಎಲ್ಪಿಜಿ ಗ್ಯಾಸ್ ಏಜೆನ್ಸಿಯಲ್ಲಿ ಕಡ್ಡಾಯವಾಗಿ ಆಧಾರ್ ಸಂಖ್ಯೆ ಜೋಡಣೆ ಮತ್ತು ಕೆವೈಸಿ ಅಪ್​ಡೇಟ್ ಮಾಡಬೇಕೆಂದು ಹಲವು ಬಾರಿ ಸೂಚಿಸಿದರೂ ಕೆಲವು ಗ್ರಾಹಕರು ಮಾಹಿತಿ ನೀಡಿಲ್ಲ. ಯೋಜನೆ ಜಾರಿಯಾಗಿ 3 ವರ್ಷ ಕಳೆದರೂ ಕೆಲವು ಫಲಾನುಭವಿಗಳು ಬ್ಯಾಂಕ್ ವಿವರ ಕೂಡ ಕೊಟ್ಟಿಲ್ಲ. ಆದ್ದರಿಂದ ಸಬ್ಸಿಡಿ ಹಣ ಗ್ರಾಹಕರಿಗೆ ಸಿಗುತ್ತಿಲ್ಲ. ದೂರುಗಳ ಪರಿಹಾರಕ್ಕಾಗಿಯೇ ಪ್ರತ್ಯೇಕ ಸೆಲ್ ಕೂಡ ಪ್ರಾರಂಭಿಸಿದ್ದೇವೆ ಎಂದು ಇಂಡಿಯನ್ ಆಯಿಲ್ ಕಾಪೋರೇಷನ್(ಐಒಸಿ) ಹೇಳಿದೆ. ಭಾರತ್ ಪೆಟ್ರೋಲಿಯಂ ಕಾಪೋರೇಷನ್ (ಬಿಪಿಸಿ) ಹಿಂದುಸ್ತಾನ್ ಪೆಟ್ರೋಲಿಯಂ ಕಾಪೋರೇಷನ್ (ಎಚ್​ಪಿಸಿ) ಸಂಸ್ಥೆಯಲ್ಲಿ ಇದೇ ನಿಯಮ ಇದೆ ಎಂದು ಸ್ಪಷ್ಟಪಡಿಸಿದೆ.

ಸಹಾಯವಾಣಿ

ಇಂಡಿಯನ್ ಅಯಿಲ್ ಕಾಪೋರೇಷನ್(ಐಒಸಿ) ವ್ಯಾಪ್ತಿಗೆ ಬರುವ ಎಲ್ಪಿಜಿ ಗ್ರಾಹಕರು ತಮ್ಮ ಸಮಸ್ಯೆಗಳ ಬಗ್ಗೆ ದೂ:18002333555 ಮತ್ತು ಭಾರತ್ ಪೆಟ್ರೋಲಿಯಂ ಕಾಪೋರೇಷನ್ (ಬಿಪಿಸಿ) ಎಲ್ಪಿಜಿ ಗ್ರಾಹಕರು ದೂ: 1800224344 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.

ದೂರುಗಳ ಸುರಿಮಳೆ

ದಿಗ್ವಿಜಯ 247 ನ್ಯೂಸ್ ಸುದ್ದಿವಾಹಿನಿಯಲ್ಲಿ ಗುರುವಾರ ಸಂಜೆ ಪ್ರಸಾರವಾದ ಜನದನಿ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಕರೆ ಮಾಡಿದ್ದ ಜನರು ಸಬ್ಸಿಡಿ ಹಣ ಬಾರದ ಬಗ್ಗೆ ಅಳಲು ತೋಡಿಕೊಂಡರು.