ಮುರ್ಕೆತ್ತಿಯಲ್ಲಿ ಲೋ ವೋಲ್ಟೇಜ್

ಕೃಷಿ, ಕುಡಿಯುವ ನೀರಿಗೆ ಸಮಸ್ಯೆ ವಿದ್ಯುತ್ ಪರಿವರ್ತಕ, ಹೊಸ ತಂತಿ ಅಳವಡಿಸಲು ಒತ್ತಾಯ

ಬಾಲಚಂದ್ರ ಕೋಟೆ ಬೆಳ್ಳಾರೆ
ಪೆರುವಾಜೆ ಗ್ರಾಮದ ಮುರ್ಕೆತ್ತಿ ಪರಿಸರದಲ್ಲಿ ಕೃಷಿಕರಿಗೆ ತೋಟಗಳಿಗೆ ನೀರು ಹಾಯಿಸಲು ಹಾಗೂ ಕುಡಿಯುವ ನೀರು ಪಂಪ್ ಮಾಡಲು ಲೋ ವೋಲ್ಟೇಜ್ ಸಮಸ್ಯೆ ಎದುರಾಗಿದೆ. ಬೆಳ್ಳಾರೆ ಮೆಸ್ಕಾಂ ವ್ಯಾಪ್ತಿಗೊಳಪಟ್ಟ ಮುರ್ಕೆತ್ತಿ ಪರಿಸರದಲ್ಲಿ 63ಕೆ.ವಿ ಹಾಗೂ 25 ಕೆವಿ ಪರಿವರ್ತಕದ ಅಗತ್ಯ ತೀವ್ರವಾಗಿದ್ದು, ಅದರ ವ್ಯವಸ್ಥೆಯಿಲ್ಲದೆ ಕೃಷಿಕರು ಹಾಗೂ ಗ್ರಾಮಸ್ಥರು ಪರದಾಡುವಂತಾಗಿದೆ.
ಈ ಭಾಗದಲ್ಲಿ 50ಕ್ಕೂ ಹೆಚ್ಚಿನ ಮನೆಗಳಿವೆ. ಕೃಷಿಯನ್ನೇ ಅವಲಂಬಿತರಾಗಿರುವ ಕೆಲವು ಕುಟುಂಬಗಳು ಹಾಗೂ ಕುಡಿಯುವ ನೀರಿಗೆ ಗ್ರಾಮಸ್ಥರು ಪೆರುವಾಜೆ ಗ್ರಾಮ ಪಂಚಾಯಿತಿ ನಳ್ಳಿ ನೀರು ಅವಲಂಬಿಸಿದ್ದಾರೆ. ಪಂಚಾಯಿತಿ ನೀರು ಪೂರೈಕೆಗೂ ಲೋ ವೋಲ್ಟೇಜ್ ಸಮಸ್ಯೆಯಾಗಿದೆ.

ಹೊಸ ಪರಿವರ್ತಕಗಳಿಗೆ ಬೇಡಿಕೆ:  ಪ್ರಸ್ತುತವಿರುವ ಪರಿವರ್ತಕಗಳಲ್ಲಿ ಹೆಚ್ಚಿನ ವಿದ್ಯುತ್ ಹೊರೆಯಾದಾಗ ಲೋ ವೋಲ್ಟೇಜ್ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಪಂಪ್‌ಸೆಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಕೆಟ್ಟು ಹೋಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮುರ್ಕೆತ್ತಿ ಪರಿಸರದಲ್ಲಿ ಲೋ ವೋಲ್ಟೇಜ್ ಸಮಸ್ಯೆ ಪದೇ ಪದೆ ತಲೆದೋರುತ್ತಿರುವುದರಿಂದ ಇಲ್ಲಿಗೆ 63 ಕೆವಿ ಹಾಗೂ 25 ಕೆವಿ ಪರಿವರ್ತಕಗಳನ್ನು ಅಳವಡಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್ ವತಿಯಿಂದ ಕಾರ್ಯನಿವಾಹಕ ಇಂಜಿನಿಯರ್‌ಗೆ ಬೇಡಿಕೆ ಸಲ್ಲಿಸಲಾಗಿದೆ.

ಸತತ ಕೈಕೊಡುವ ವಿದ್ಯುತ್: ಮುರ್ಕೆತ್ತಿ ಪರಿಸರದಲ್ಲಿ ಸಮಾನ್ಯವಾದ ಮಳೆ ಬಂದರೂ ವಿದ್ಯುತ್ ಕೈಕೊಡುತ್ತಿದೆ. ಇಲ್ಲಿರುವ ಎಲ್ಲ ಹಳೆಯ ವಿದ್ಯುತ್ ತಂತಿಗಳನ್ನು ಇದುವರೆಗೂ ಬದಲಾಯಿಸದೇ ಇರುವುದೇ ಇದಕ್ಕೆ ಕಾರಣ. ಮಳೆಗಾಲದಲ್ಲಿ ಸತತವಾಗಿ ವಿದ್ಯುತ್ ಕೈಕೊಡುತ್ತಿದ್ದು, ಹಳೆಯ ತಂತಿಗಳನ್ನು ಬದಲಾಯಿಸಿ ಹೊಸ ತಂತಿಗಳನ್ನು ಅಳವಡಿಸದೇ ಇರುವುದರಿಂದ ಸಮಸ್ಯೆ ತಲೆದೋರಿದೆ. ಮಳೆಗಾಲದ ದಿನಗಳಲ್ಲಿ ಹಳೆಯ ತಂತಿಗಳಿಂದ ಅಪಾಯಗಳು ಖಂಡಿತ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮುರ್ಕೆತ್ತಿ ಪರಿಸರದಲ್ಲಿ ಲೋ ವೋಲ್ಟೇಜ್‌ನಿಂದಾಗಿ ಕೃಷಿಕರಿಗೆ ಹಾಗೂ ಕುಡಿಯುವ ನೀರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಮೆಸ್ಕಾಂ ಕೂಡಲೆ ಇಲ್ಲಿ 63 ಕೆವಿ ಹಾಗೂ 25 ಕೆವಿ ಪರಿವರ್ತಗಳನ್ನು ಅಳವಡಿಸಬೇಕು. ಮಳೆಗಾಲದಲ್ಲಿ ಅಪಾಯ ಉಂಟಾಗದಂತೆ ಹಳೇ ತಂತಿಗಳನ್ನು ಬದಲಾಯಿಸಿ ಹೊಸ ತಂತಿಗಳನ್ನು ಅಳವಡಿಸಿ ಸಮಸ್ಯೆ ಬಗೆಹರಿಸಬೇಕಿದೆ
ಸಚಿನ್‌ರಾಜ್ ಶೆಟ್ಟಿ,  ಅಧ್ಯಕ್ಷ ದ.ಕ ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್

ಮುರ್ಕೆತ್ತಿ ಭಾಗದಲ್ಲಿ ಈ ಸಮಯದಲ್ಲಿ ವಿದ್ಯುತ್ತಿನ ಹೆಚ್ಚಿನ ಹೊರೆಯಾದಾಗ ಸಮಸ್ಯೆ ಎದುರಾಗುತ್ತಿರಬಹುದು. ಹೆಚ್ಚುವರಿ ಪರಿವರ್ತಕ ಅಳವಡಿಸುವ ಬಗ್ಗೆ ಪರಿಶೀಲಿಸಿ ಸಮಸ್ಯೆ ಸರಿಪಡಿಸುತ್ತೇವೆ
ಸತೀಶ್,
ಮೆಸ್ಕಾಂ ಸಹಾಯಕ ಇಂಜಿನಿಯರ್