ಅದಮಾರು, ಪಲಿಮಾರು ಭಾಗ ನೆರೆ ಇಳಿಮುಖ

ಪಡುಬಿದ್ರಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರ ಬುಧವಾರ ತುಸು ಕಡಿಮೆಯಾಗಿದ್ದು, ಪಡುಬಿದ್ರಿ ಪಾದೆಬೆಟ್ಟು, ಪಲಿಮಾರು, ಅದಮಾರು ಭಾಗಗಳಲ್ಲಿ ನೆರೆ ಇಳಿಮುಖವಾಗಿದೆ. ಆದರೂ ಪಡುಬಿದ್ರಿಯಲ್ಲಿ ಹರಿಯುತ್ತಿರುವ ಕಾಮಿನಿ ನದಿ ತುಂಬಿದ್ದು, ಪಡುಹಿತ್ಲು, ಬೇಂಗ್ರೆ, ಕಲ್ಲಟ್ಟೆ, ಕಲ್ಸಂಕ ಭಾಗಗಳಲ್ಲಿ ನೆರೆ ಭೀತಿ ಮುಂದುವರಿದಿದೆ. ಮಂಗಳವಾರ ಸ್ಥಳಾಂತರಗೊಂಡಿದ್ದ ಪಾದೆಬೆಟ್ಟಿನ ಹೊಗೆತೋಟ ಹಾಗೂ ಪಲಿಮಾರು ಗ್ರಾಮದ ಪೂಂಜಮಾರು ನಿವಾಸಿಗಳು ಮನೆಗೆ ಮರಳಿದ್ದಾರೆ.
ಪಡುಬಿದ್ರಿ, ತೆಂಕ ಹಾಗೂ ಬಡಾ ಎರ್ಮಾಳ್‌ನಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತದ ಅಬ್ಬರ ಕಡಿಮೆಯಾಗಿದೆ. ಬುಧವಾರ ಮಧ್ಯಾಹ್ನ ನಂತರ ಮತ್ತೆ ಮಳೆ ಪ್ರಮಾಣ ಹೆಚ್ಚಾಗಿತ್ತು.

ಕುಟುಂಬಗಳ ಸ್ಥಳಾಂತರ: ಗಾಳಿ ಮಳೆಯಿಂದ ಕಾಪು ತಾಲೂಕು ವ್ಯಾಪ್ತಿಯ ಮೂಡುಬೆಟ್ಟು ಗ್ರಾಮದ ಶಿವಶಂಕರ ಹೆಬ್ಬಾರ್ ಎಂಬುವರ ಕೊಟ್ಟಿಗೆಗೆ, ಶಿರ್ವ ಗ್ರಾಮದ ದಾಮೋದರ ಆಚಾರ್ಯ ಎಂಬುವರ ಜಾನುವಾರು ಕೊಟ್ಟಿಗೆಗೆ ಹಾನಿಯಾಗಿದೆ. ನಂದಿಕೂರು ಗ್ರಾಮದ ಕೊಲ್ಲು ಮುಖಾರ್ತಿ ಮನೆ ಕುಸಿದಿದೆ. ನೆರೆಯಿಂದ ಮಂಗಳವಾರ ಸಾಯಂಕಾಲ ಎರ್ಮಾಳು-ಅದಮಾರು ರಸ್ತೆ ಜಲಾವೃತವಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಪಲಿಮಾರು ಗ್ರಾಮದ ಪೂಂಜಮಾರಿನ ಸಂಪ ಎಂಬುವರ ಕುಟುಂಬವನ್ನು ಸ್ಥಳಾಂತರಿಸಲಾಯಿತು. ಪಡುಬಿದ್ರಿ ಪಾದೆಬೆಟ್ಟಿನ ಹೊಗೆತೋಟದ ಆರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಅವರೆಲ್ಲ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಪಡುಬಿದ್ರಿ ಗ್ರಾಪಂ ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ, ಗ್ರಾಮಲೆಕ್ಕಿಗ ಶ್ಯಾಮಸುಂದರ್, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರನ್ನು ಸ್ಥಳಾಂತರಿಸಿದರು.
 ವಿದ್ಯುತ್ ಕಂಬ ನೆಲಕ್ಕೆ: ಕಾಪು: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಅರಸೀಕಟ್ಟೆ ಪರಿಶಿಷ್ಟ ಪಂಗಡದ ಕಾಲನಿಯ ರಮಣಿ ಎಂಬುವರ ಮನೆ ಬಳಿ ಆಲದ ಮರ ವಿದ್ಯುತ್ ತಂತಿ ಮೇಲೆ ಬಿದ್ದು ಎರಡು ವಿದ್ಯುತ್ ಕಂಬಗಳು ಬಿದ್ದು ನೆಲಕ್ಕುರುಳಿವೆ. ರಮಣಿಯವರ ಮನೆ ಮೇಲೆ ವಿದ್ಯುತ್ ತಂತಿಗಳು ಬಿದ್ದಿದ್ದರೂ ಅವಘಡ ಸಂಭವಿಸಿಲ್ಲ. ಮೆಸ್ಕಾಂ ಇಲಾಖೆ ತಕ್ಷಣ ಈ ತಂತಿಗಳ ವಿದ್ಯುತ್ ಸರಬರಾಜು ನಿಲ್ಲಿಸಿತ್ತು.

ಪರಿಹಾರ ನಿಧಿಗೆ ಸಾಮಗ್ರಿ ಹಸ್ತಾಂತರ
ಕಾರ್ಕಳ: ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್ ನೇತೃತ್ವದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಹಾಲಮೂರ್ತಿ ರಾವ್, ನಗರ ಠಾಣಾಧಿಕಾರಿ ನಂಜ ನಾಯಕ್, ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್, ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ನೆರೆ ಪರಿಹಾರ ನಿಧಿಗೆ ಕಾರ್ಕಳ ಆರಕ್ಷಕ ಠಾಣೆಯಿಂದ ಸುಮಾರು 1.5 ಲಕ್ಷ ರೂ. ಮೌಲ್ಯದ ಸಾಮಗ್ರಿ ನೀಡಲಾಯಿತು.

ನಿರಂತರ ಮಳೆಗೆ ನೆರೆ ಭೀತಿ
 ಗಂಗೊಳ್ಳಿ: ಗಂಗೊಳ್ಳಿ ಹಾಗೂ ಸುತ್ತಮುತ್ತ ನಿರಂತರ ಮಳೆ ಬುಧವಾರವೂ ಮುಂದುವರಿದಿದ್ದು, ತಗ್ಗು ಪ್ರದೇಶಗಳು ನೆರೆ ಭೀತಿ ಎದುರಿಸುತ್ತಿವೆ. ಸೌಪರ್ಣಿಕಾ, ಕುಬ್ಜಾ, ವಾರಾಹಿ, ಖೇಟಾ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ ಮತ್ತೊಮ್ಮೆ ನದಿ ಪಾತ್ರದ ಪ್ರದೇಶಗಳು ನೆರೆ ನೀರಿನಲ್ಲಿ ಮುಳುಗಡೆಯಾಗುವ ಸಾಧ್ಯತೆಗಳಿವೆ. ಕಡಲಿನ ಆರ್ಭಟವೂ ಜೋರಾಗಿದ್ದು, ಮೀನುಗಾರರು ಮೀನುಗಾರಿಕೆ ನಡೆಸಲು ಸಾಧ್ಯವಾಗದೆ ಮರಳಿ ಬಂದಿದ್ದಾರೆ. ಗಂಗೊಳ್ಳಿ ಗ್ರಾಮದ ಖಾರ್ವಿಕೇರಿ, ಗುಜ್ಜಾಡಿ ಗ್ರಾಮದ ಸನ್ಯಾಸಿಬಲೆ, ಕಂಚುಗೋಡು, ಹೊಸಾಡು ಗ್ರಾಮದ ಹೊಸಪೇಟೆ ಕಡಲ ತೀರದಲ್ಲಿ ಕಡಲ್ಕೊರೆತದ ತೀವ್ರತೆ ಮುಂದುವರಿದಿದೆ.

ಬೋಳದಲ್ಲಿ ಮನೆಗಳಿಗೆ ಹಾನಿ: ಬೆಳ್ಮಣ್: ಮಂಗಳವಾರ ಹಾಗೂ ಬುಧವಾರ ನಿರಂತರ ಸುರಿದ ಮಳೆಗೆ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಹಲವು ಮನೆಗಳಿಗೆ ಹಾನಿಯಾಗಿದೆ. ಯೋಗೀಶ್ ಅಂಚನ್ ಎಂಬುವರ ಮನೆಯ ಗೋಡೆ ಕುಸಿದಿದೆ. ಗ್ರಾಮದ ಬೋಪಾಡಿ ಸುಂದರ ಶೆಟ್ಟಿಯವರ ಮನೆಯ ಗೋಡೆ ಧರಾಶಾಯಿಯಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಸುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *