ಶಾಲಾ ಮಕ್ಕಳಿಗೆ ಕಳಪೆ ಆಹಾರ

ಉಡುಪಿ: ಅಕ್ಷರ ದಾಸೋಹ ಯೋಜನೆಯಲ್ಲಿ ಶಾಲಾ ಮಕ್ಕಳ ಊಟಕ್ಕೆ ಕಳಪೆ ಆಹಾರ ಪದಾರ್ಥ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಮಾನ್ಯ ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ನ.30 ರಂದು ಮುಂದೂಡಲಾಗಿದ್ದ ಜಿ.ಪಂ ಸಾಮಾನ್ಯ ಸಭೆ ಮಂಗಳವಾರ ಜಿ.ಪಂ. ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿ.ಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಲೆಗೆ ಪೂರೈಸಲಾಗಿದ್ದ ಕಳಪೆ ಬೇಳೆಯ ಮಾದರಿಯನ್ನು ಬಾಬು ಶೆಟ್ಟಿ ಅವರು ಸಭೆಯಲ್ಲಿ ತೋರಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಉಳಿದ ಸದಸ್ಯರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಹಾರ ಪೂರೈಕೆ ಮಾಡುವ ಗುತ್ತಿಗೆ ಏಜೆನ್ಸಿಗೆ ಬಿಲ್‌ಪಾಸ್ ಮಾಡದಂತೆ, ಕಪ್ಪುಪಟ್ಟಿಗೆ ಸೇರಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ ಪದಾರ್ಥ ಪೂರೈಕೆಯಾಗಬೇಕು, ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷೃ ತೋರಬಾರದು, ಈ ರೀತಿ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಖಡಕ್ ಸೂಚನೆ ನೀಡಿದರು.

ಸಭೆಯಲ್ಲಿ ಹೆಜಮಾಡಿ ಬಂದರು ಕಾಮಗಾರಿ ವ್ಯವಸ್ಥಿತವಾಗಿಲ್ಲದ ಬಗ್ಗೆ ಚರ್ಚೆ ನಡೆಯಿತು. ಜಿ.ಪಂ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ಶೀಘ್ರ ಮುಗಿಸುವಂತೆ ಸೂಚಿಸಲಾಯಿತು. ರೇಶನ್‌ಕಾರ್ಡ್ ಪ್ರಕ್ರಿಯೆ ವಿಳಂಬದ ಬಗ್ಗೆ ಪ್ರತಿಪಕ್ಷ ನಾಯಕ ಜನಾರ್ದನ್ ತೋನ್ಸೆ ಅಸಮಾಧಾನ ವ್ಯಕ್ತಪಡಿಸಿದರು. ಜಿ.ಪಂ ಸಿಇಒ ಸಿಂಧೂ ಬಿ.ರೂಪೇಶ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿದ್ದರು. ಮಂಗಳವಾರ ನಡೆದ ಸಭೆಗೆ ಪತ್ರಕರ್ತರಿಗೆ ಆಹ್ವಾನ ಇರಲಿಲ್ಲ.

ಸಭಾತ್ಯಾಗ ಪರಿಹಾವಲ್ಲ: ನ.30ರಂದು ಜಿಲ್ಲಾಡಳಿತ ಟೋಲ್ ಸಂಗ್ರಹ, ಮರಳು ಸಮಸ್ಯೆ ಪರಿಹರಿಸಲು ವಿಫಲ, ಸಾಮಾನ್ಯ ಸಭೆಯಂದೇ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿಗೆ ಅಪಮಾನ ಎಸಗಿದೆ ಎಂದು ಆರೋಪಿಸಿ ಆಡಳಿತ ಪಕ್ಷದ ಬಿಜೆಪಿ ಸದಸ್ಯರು ಸಾಮಾನ್ಯ ಸಭೆಯಿಂದ ಹೊರನಡೆದು ಸಭಾತ್ಯಾಗ ಮಾಡಿದರು. ಈ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆ ಮುಂದೂಡಲ್ಪಟ್ಟಿತ್ತು. ಮಂಗಳವಾರದ ಸಭೆಯಲ್ಲಿ ಜನಾರ್ದನ್ ತೋನ್ಸೆ ಸಭಾತ್ಯಾಗ ಯಾವುದಕ್ಕೂ ಪರಿಹಾರವಲ್ಲ. ಜಿಪಂ ಇತಿಹಾಸಲ್ಲಿ ಆಡಳಿತ ಪಕ್ಷ ಸಭಾತ್ಯಾಗ ಮಾಡಿದ ಉದಾಹರಣೆ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.