ಬೆಂಗಳೂರು: ಮೈತ್ರಿ ಸರ್ಕಾರವಿದ್ದಾಗ ಶಾಲಾ ಮಕ್ಕಳಿಗೆ ವಿತರಿಸಿರುವ ಸೈಕಲ್ಗಳು ಕಳಪೆ ಗುಣಮಟ್ಟದಿಂದ ಕೂಡಿರುವ ವಿಚಾರ ತಜ್ಞರ ಪರಿಶೀಲನೆಯಿಂದ ದೃಢಪಟ್ಟಿದೆ. ರಾಜ್ಯ ಸರ್ಕಾರವೇ ನೇಮಿಸಿದ್ದ ಸಮಿತಿಯು ಕಳಪೆ ಸೈಕಲ್ಗಳ ಸಂಗತಿಯನ್ನು ಬಹಿರಂಗಪಡಿಸಿದೆ. ಸೈಕಲ್ಗಳನ್ನು ವಿತರಿಸಿರುವ ಕಂಪನಿ ವಿರುದ್ಧ ದಂಡ ವಿಧಿಸಬಹುದು ಎಂದು ಶಿಕ್ಷಣ ಇಲಾಖೆಗೆ ವರದಿ ಕೊಟ್ಟಿದೆ.
ಸೈಕಲ್ ಜೋಡಣೆ ಮತ್ತು ಕೆಲವು ಸಲಕರಣೆಗಳು ನಿಗದಿತ ತೂಕ ಹೊಂದಿಲ್ಲ. ಪೆಡಲ್, ಸೀಟ್ ಸೇರಿ ಸಣ್ಣ-ಪುಟ್ಟ ಲೋಪದೋಷಗಳಿವೆ. ಸೈಕಲ್ ವಿತರಿಸಿರುವ ಕಂಪನಿಗೆ ದಂಡ ವಿಧಿಸಬಹುದು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ವರದಿಯನ್ನು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಕಳುಹಿಸಿದೆ. ಸರ್ಕಾರ ತೆಗೆದುಕೊಳ್ಳಲಿರುವ ನಿರ್ಧಾರದ ಮೇಲೆ ಕಂಪನಿಗೆ ದಂಡ ಬೀಳಲಿದೆ. ಸೈಕಲ್ ಖರೀದಿಗೆ ನೀಡಿರುವ ಹಣದ ಮೇಲೆ ಶೇ.10 ದಂಡ ವಿಧಿಸಲು ಅವಕಾಶವಿದೆ.
ಈಗ ಒಂದು ಹಂತದ ಪರಿಶೀಲನಾ ವರದಿ ಮಾತ್ರ ಬಂದಿದೆ. ಇದಲ್ಲದೆ, ಪ್ರತಿ ವಿಭಾಗದಲ್ಲಿ ಹೆಣ್ಣು ಮಕ್ಕಳ ಸೈಕಲ್ 10 ಹಾಗೂ ಗಂಡು ಮಕ್ಕಳ ಸೈಕಲ್ 10 ಸೇರಿ ಒಟ್ಟಾರೆ 20 ಸೈಕಲ್ಗಳನ್ನು ಆಯ್ಕೆ ಮಾಡಿ ಗುಣಮಟ್ಟ ಪರಿಶೀಲನೆಗಾಗಿ ಲೂದಿಯಾನದಲ್ಲಿರುವ ಸಂಶೋಧನಾ ಮತ್ತು ತರಬೇತಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಆದರ ವರದಿ ಇನ್ನಷ್ಟೇ ಬರಬೇಕಿದೆ.
ಕಳೆದ ವರ್ಷ ಲೋಪವಿರಲಿಲ್ಲ!: 2018-19ನೇ ಸಾಲಿನಲ್ಲಿ ವಿತರಿಸಿದ್ದ ಸೈಕಲ್ಗಳ ಗುಣಮಟ್ಟವೂ ಕಡಿಮೆ ಎಂಬ ಆರೋಪ ಕೇಳಿಬಂದಿತ್ತು. ಆಗ ರಚನೆ ಮಾಡಲಾಗಿದ್ದ ಸಮಿತಿ ಪರಿಶೀಲನೆ ನಡೆಸಿ ಸೈಕಲ್ ಖರೀದಿ ಹಾಗೂ ವಿತರಣೆಯಲ್ಲಿ ಯಾವುದೇ ಲೋಪದೋಷವಿಲ್ಲ ಎಂದು ವರದಿ ಕೊಟ್ಟಿತ್ತು. ಈ ವರ್ಷ ರಚನೆಯಾಗಿದ್ದ ಮತ್ತೊಂದು ಸಮಿತಿ ಸೈಕಲ್ಗಳು ಕಳಪೆ ಎಂದು ವರದಿ ಕೊಟ್ಟಿದೆ.
ಏನಿದು ತಜ್ಞರ ಸಮಿತಿ?: ಕಳೆದೆರಡು ತಿಂಗಳ ಹಿಂದೆ ಮೆಕಾನಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸೈಕಲ್ ಗುಣಮಟ್ಟ ಪರಿಶೀಲನೆಗೆ ಮುಂದಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಟೀಕೆಗೆಳು ವ್ಯಕ್ತವಾದ ಹಿನ್ನೆಲೆ ಮೆಕಾನಿಕಲ್ ಪ್ರೊಫೆಸರ್ಗಳು ಮತ್ತು ಇಲಾಖೆ ಅಧಿಕಾರಿಗಳ ಜತೆಗೆ ಸಮಿತಿ ರಚಿಸಿತ್ತು. ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಿಗೆ ಭೇಟಿ ನೀಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದಲೇ ಸೈಕಲ್ ಆಯ್ಕೆ ಮಾಡಿ ಅವುಗಳನ್ನು ಪರಿಶೀಲನೆ ಮಾಡಿದೆ. ಒಂದು ವಾರ ಈ ಪರಿಶೀಲನೆ ಕಾರ್ಯ ನಡೆದಿದೆ.
183 ಕೋಟಿ ರೂ. ಖರ್ಚು: 2019-20ನೇ ಸಾಲಿಗೆ ಸೈಕಲ್ ಖರೀದಿಸಲು ಶಿಕ್ಷಣ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಆ ವೇಳೆ ‘ಏವಾನ್ ಸೈಕಲ್ ಲಿ.’ ಮತ್ತು ‘ಹೀರೋ ಸೈಕಲ್ ಲಿ.’ ಕಂಪನಿಗಳಿಗೆ ವಿತರಣೆಯ ಕಾರ್ಯಾದೇಶ ನೀಡಿತ್ತು. 5.04 ಲಕ್ಷ ಮಕ್ಕಳಿಗೆ ಸೈಕಲ್ ಖರೀದಿಸಲು ರಾಜ್ಯ ಸರ್ಕಾರ 183 ಕೋಟಿ ರೂ. ವೆಚ್ಚ ಮಾಡಿದೆ. ಕಲಬುರಗಿ ಮತ್ತು ಬೆಳಗಾವಿ ವಿಭಾಗಕ್ಕೆ ಏವಾನ್ ಕಂಪನಿ ಮತ್ತು ಬೆಂಗಳೂರು ಹಾಗೂ ಮೈಸೂರು ವಿಭಾಗಕ್ಕೆ ಹೀರೋ ಕಂಪನಿಯ ಸೈಕಲ್ಗಳು ವಿತರಣೆಯಾಗಿವೆ.
ಯೋಜನೆ ಜಾರಿ: 2006-07ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಈ ಸೈಕಲ್ ವಿತರಿಸುವ ಯೋಜನೆ ಪ್ರಾರಂಭಿಸಿತು. ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಉದ್ದೇಶದಿಂದ ಸರ್ಕಾರ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಸೈಕಲ್ ನೀಡಲು ಮುಂದಾಯಿತು. ಈ ಯೋಜನೆ ಹೆಚ್ಚು ಪ್ರಚಾರ ಪಡೆದ ಹಿನ್ನೆಲೆಯಲ್ಲಿ ಪಾಲಕರು ಬಾಲಕರಿಗೂ ವಿಸ್ತರಿಸುವಂತೆ ಬೇಡಿಕೆ ಮುಂದಿಟ್ಟರು. ಆನಂತರದಲ್ಲಿ ಸರ್ಕಾರ ಪ್ರೌಢಶಾಲೆಗೆ ಸೇರುವ ಬಾಲಕ ಮತ್ತು ಬಾಲಕಿಯರಿಗೆ ಸೈಕಲ್ ವಿತರಿಸಲು ಮುಂದಾಯಿತು. ಮಹಾನಗರ ಪಾಲಿಕೆ ಸೇರಿದ ಹಾಗೂ ಬಸ್ಗಳ ಸಂಖ್ಯೆ ಹೆಚ್ಚಿರುವ ನಗರಗಳಲ್ಲಿ ಓದುತ್ತಿರುವ ಮಕ್ಕಳಿಗೆ ಯೋಜನೆಯ ಪ್ರಯೋಜನ ದೊರೆಯುವುದಿಲ್ಲ.
ತಜ್ಞರ ಸಮಿತಿ ನೀಡಿರುವ ಗುಣಮಟ್ಟ ವರದಿಯನ್ನು ಸಲ್ಲಿಸಿದ್ದೇವೆ. ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ.
| ಡಾ. ಕೆ.ಜಿ. ಜಗದೀಶ್
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ
ದೇವರಾಜ್ ಎಲ್.