ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆ

ಬೆಳಗಾವಿ: ಪ್ರೇಮಿಗಳ ದಿನಾಚರಣೆ ದಿನ ಭಗ್ನ ಯುವ ಪ್ರೇಮಿಯೊಬ್ಬ ಕಾಲೇಜು ಮಹಡಿಯಿಂದ ಬಿದ್ದು ಗುರುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾನು ಇಷ್ಟ ಪಟ್ಟ ಹುಡುಗಿ ಪ್ರೀತಿ ನಿರಾಕರಿಸಿದಳು ಎಂದು ಮನನೊಂದು ಈತ ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಶಿವಪ್ರಸಾದ ಪವಾರ(21) ಆತ್ಮಹತ್ಯೆಗೆ ಶರಣಾದವ. ನಿಪ್ಪಾಣಿ ಮೂಲದ ಶಿವಪ್ರಸಾದ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ನಾಲ್ಕನೇಯ ಸೆಮಿಸ್ಟರ್ ಓದುತ್ತಿದ್ದ. ಚಿಕ್ಕವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಶಿವಪ್ರಸಾದ ಸಂಬಂಧಿಕರ ಮನೆಯಲ್ಲಿ ಬೆಳೆದು ಇದೀಗ ನಗರದ ಬಿಸಿಎಂ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ.

ಎರಡು ವರ್ಷಗಳಿಂದ ತಮ್ಮದೆ ತರಗತಿಯ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಆತ ಅನೇಕ ಬಾರಿ ಪ್ರೇಮ ನಿವೇದನೆ ಮಾಡಿಕೊಂಡಾಗಲೂ ವಿದ್ಯಾರ್ಥಿನಿ ಆತನ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ.ಮತ್ತೆ ಗುರುವಾರ ಮೊಬೈಲ್ ಕರೆ ಮಾಡಿ ತನ್ನ ಪ್ರೇಮ ನಿವೇದನೆ ಮಾಡಿದ್ದು,ಯುವತಿ ತಿರಸ್ಕರಿಸಿದ್ದಾಳೆ. ಹೀಗಾಗಿ ಮನನೊಂದು ಏಕಾಏಕಿ ಕಾಲೇಜಿನ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ.