More

    VIDEO | ಒಲಿಂಪಿಕ್ಸ್‌ನಲ್ಲೊಂದು ಪ್ರೇಮ ನಿವೇದನೆ, ಕೋಚ್ ಜತೆ ಮದುವೆ ಫಿಕ್ಸ್​​!

    ಟೋಕಿಯೊ: ಕರೊನಾ ವೈರಸ್ ಹಾವಳಿಯ ನಡುವೆ ಯಶಸ್ವಿಯಾಗಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಲವ್ ಸ್ಟೋರಿಗೂ ಸಾಕ್ಷಿಯಾಗಿದೆ. 3ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಅರ್ಜೆಂಟೀನಾದ ಮಹಿಳಾ ಕತ್ತಿವರಸೆ ಪಟು ಮರಿಯಾ ಬೆಲೆನ್ ಪೆರೆಜ್ ಮೌರಿಸ್ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಇದರ ನಡುವೆಯೂ ಅವರ ಮುಖದಲ್ಲಿ ನಗು ಮೂಡಿತು. ಅವರ ಕೋಚ್ ಲುಕಾಸ್ ಸೌಸೆಡೊ ಕ್ಯಾಮರಾ ಎದುರಲ್ಲೇ ಪ್ರೇಮ ನಿವೇದನೆ ಮಾಡಿದ್ದು ಇದಕ್ಕೆ ಕಾರಣ.

    ಸೋಲಿನ ಬಳಿಕ 36 ವರ್ಷದ ಮೌರಿಸ್ ಟಿವಿ ವರದಿಗಾರರ ಜತೆಗೆ ಮಾತನಾಡುತ್ತಿದ್ದಾಗ ಅವರ ಕೋಚ್ ಬಂದು ‘ನನ್ನನ್ನು ಮದುವೆಯಾಗುವೆಯಾ’ ಎಂದು ಬರೆದ ಪೇಪರ್ ಪ್ರದರ್ಶಿಸಿದರು. ಅದಕ್ಕೆ ಮೌರಿಸ್ ಜೋರಾಗಿ ‘ಯೆಸ್’ ಎನ್ನುತ್ತ ಅಪ್ಪಿ ಮುತ್ತಿಕ್ಕಿದರು. ಒಲಿಂಪಿಕ್ಸ್‌ನಿಂದ ತವರಿಗೆ ಮರಳಿದ ಬಳಿಕ ಬ್ಯೂನಸ್ ಐರಿಸ್‌ನಲ್ಲಿ ಇಬ್ಬರೂ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ.

    ಇದನ್ನೂ ಓದಿ:  ಒಲಿಂಪಿಕ್ಸ್‌ನ ಈ ಕ್ರೀಡೆಯಲ್ಲಿ ಕಡಿಮೆ ಅಂಕ ಪಡೆದವರೇ ಚಿನ್ನ ಗೆಲ್ತಾರೆ!

    ಈ ಮುನ್ನ 11 ವರ್ಷಗಳ ಹಿಂದೆ 2010ರಲ್ಲೂ ವಿಶ್ವ ಚಾಂಪಿಯನ್‌ಷಿಪ್ ವೇಳೆ ಕೋಚ್ ಸೌಸೆಡೊ ಇದೇ ರೀತಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರೂ, ಅದಕ್ಕೆ ಮೌರಿಸ್ ‘ನೋ’ ಎಂದಿದ್ದರು. ನಾನಿನ್ನೂ ತೀರ ಯಂಗ್ ಆಗಿದ್ದು, ಮದುವೆಗೆ ಸಿದ್ಧವಾಗಿಲ್ಲ ಎಂದು ಮೌರಿಸ್ ಆಗ ಕಾರಣ ನೀಡಿದ್ದರು. ಸೌಸೆಡೊ ಕಳೆದ 17 ವರ್ಷಗಳಿಂದ ಮೌರಿಸ್‌ಗೆ ಕೋಚ್ ಜತೆಗೆ ‘ಬಾಯ್​ಫ್ರೆಂಡ್’ ಕೂಡ ಆಗಿದ್ದರು.

    ‘ನಾನು ಆಕೆಯನ್ನು ತುಂಬ ಪ್ರೀತಿಸುತ್ತೇನೆ. ಅವರ ಪಂದ್ಯ ಸೋತ ಬಳಿಕ ತುಂಬ ನಿರಾಸೆಯಲ್ಲಿದ್ದಳು. ನನ್ನ ಪ್ರೇಮ ನಿವೇದನೆಯಿಂದ ಅವರ ನೋವು ಮರೆಯಾಗಬಹುದು ಎಂದೆಣಿಸಿದೆ. ಹೀಗಾಗಿ ಅಲ್ಲೇ ಪೇಪರ್‌ನಲ್ಲಿ ಬರೆದು ಮದುವೆ ಪ್ರಸ್ತಾಪ ಸಲ್ಲಿಸಿದೆ. ಅವಳು ಗೆದ್ದಿದ್ದರೆ ನಾನು ಇನ್ನಷ್ಟು ಸಮಯ ಕಾಯುತ್ತಿದ್ದೆ’ ಎಂದು ಸೌಸೆಡೊ ಹೇಳಿದ್ದಾರೆ. ಕೋಚ್ ಆಗುವುದಕ್ಕೆ ಮುನ್ನ ಸೌಸೆಡೊ ಕೂಡ ಫೆನ್ಸರ್ ಆಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts