ಪ್ರೀತಿ ಒಪ್ಪದ ಯುವತಿಗೆ ಬೆಂಕಿ ಹಚ್ಚಿ ಕೊಂದ ಕ್ರೂರಿ ಪ್ರೇಮಿ

ಉತ್ತರಖಾಂಡ: ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಇಲ್ಲೊಬ್ಬ ಪಾಗಲ್​ ಪ್ರೇಮಿ 18 ವರ್ಷದ ಯುವತಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾನೆ.

ಸುಟ್ಟಗಾಯಗಳಿಂದ ನರಳಾಡುತ್ತಿದ್ದ ಆಕೆಯನ್ನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ರಾವತ್​ ಅವರ ಸೂಚನೆ ಮೇರೆಗೆ ಯುವತಿಯನ್ನು ಸಫ್ತರ್​ಜಂಗ್​ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಯುವತಿ ಮೃತಪಟ್ಟಿದ್ದಾಳೆ. ಮಗಳ ಸಾವಿನ ಸುದ್ದಿ ಕೇಳಿದ ತಾಯಿಗೆ ಹೃದಯಾಘಾತವಾಗಿದೆ.

ಯುವತಿಗೆ ಬೆಂಕಿ ಹಚ್ಚಿದ ಆರೋಪಿ ಮನೋಜ್​ ಸಿಂಗ್​ ಅಲಿಯಾಸ್​ ಬಂಟಿ(31) ಯನ್ನು ಪೊಲೀಸರು ಬಂಧಿಸಿದ್ದು ಸದ್ಯ ಆಥ ಪೌರಿ ಜೈಲಿನಲ್ಲಿದ್ದಾನೆ.

ಪ್ರಕರಣದ ಸಂಪೂರ್ಣ ವಿವರವನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ. ಕ್ಯಾಬ್​ ಡ್ರೈವರ್​ ಆಗಿರುವ ಬಂಟಿ ಯುವತಿಯನ್ನು ಪ್ರೀತಿಸುತ್ತಿದ್ದ. 5 ವರ್ಷಗಳಿಂದ ಆಕೆಯನ್ನು ಹಿಂಬಾಲಿಸುತ್ತಿದ್ದ. ಆಕೆ 9ನೇ ತರಗತಿಯಲ್ಲಿ ಇದ್ದಾಗಿನಿಂದ ಇಷ್ಪಡುತ್ತಿದ್ದ. ಆದರೆ ಯುವತಿ ಆತನ ಪ್ರೀತಿಯನ್ನು ತಿರಸ್ಕರಿಸಿದ್ದಳು ಎಂದು ಆರೋಪಿಯೇ ಪೊಲೀಸರಿಗೆ ತಿಳಿಸಿದ್ದಾನೆ. 6 ತಿಂಗಳ ಹಿಂದೆ ಬೇರೊಬ್ಬಳನ್ನು ವಿವಾಹವಾಗಿದ್ದರೂ ಈಕೆಯನ್ನು ಹಿಂಬಾಲಿಸುವುದನ್ನು ಬಿಟ್ಟಿರಲಿಲ್ಲ.

ಈ ಯುವತಿ ಪೌರಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಡಿ.16ರಂದು ಪರೀಕ್ಷೆ ಮುಗಿಸಿ ಸ್ಕೂಟರ್​ನಲ್ಲಿ ಮನೆಗೆ ತೆರಳುತ್ತಿದ್ದಳು. ಮಾರ್ಗ ಮಧ್ಯದಲ್ಲಿ ಸಿಗುವ ಅರಣ್ಯದಲ್ಲಿ ಈಕೆಯನ್ನು ತಡೆದು ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ಅಲ್ಲದೆ, ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದ ಅವಳನ್ನು ಕೊಲ್ಲಬೇಕೆಂದು ನಿರ್ಧರಿಸಿದ್ದೆ ಎಂದು ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ.

ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಮೃತ ಯುವತಿಯ ಕುಟುಂಬದವರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.