ರಕ್ಷಣೆಗಾಗಿ ಶೃಂಗೇರಿ ಪೊಲೀಸರ ಮೊರೆಹೋದ ದಂಪತಿ

ಶೃಂಗೇರಿ; ಪರಸ್ಪರ ಪ್ರೀತಿಸಿ ವಿವಾಹವಾದ ಬಳಿಕ ಊರು ತೊರೆದು ಬಂದಿರುವ ದಂಪತಿ ತಮಗೆ ರಕ್ಷಣೆ ನೀಡುವಂತೆ ಶೃಂಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ನೇಕಾರ ಬೀದಿಯ ರುಬಿಯಾ ಹಾಗೂ ಅದೇ ಊರಿನ ರಾಜು ಪರಸ್ಪರ ಪ್ರೀತಿಸುತ್ತಿದ್ದರು. ವಿವಾಹಕ್ಕೆ ಎರಡೂ ಕುಟುಂಬದವರ ವಿರೋಧ ಇದ್ದುದರಿಂದ ಊರು ತೊರೆದು ಶೃಂಗೇರಿಗೆ ಬಂದು ನೆಲೆಸಿದ್ದರು. ರುಬಿಯಾ ತನ್ನ ಹೆಸರನ್ನು ಪ್ರೀತಿ ಎಂದು ಬದಲಾಯಿಸಿಕೊಂಡು 2018ರಲ್ಲಿ ಶೃಂಗೇರಿಯ ಬೆಳಂದೂರು ಗ್ರಾಮದ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ರಾಜು ಅವರನ್ನು ವರಿಸಿದ್ದರು. ದಂಪತಿಗೆ ಈಗ ಒಂದು ಪುಟ್ಟ ಮಗುವಿದೆ.

ತಮ್ಮ ಮಗಳನ್ನು ಬಲವಂತವಾಗಿ ಕರೆದೊಯ್ದು ವಿವಾಹ ಮಾಡಿಕೊಳ್ಳಲಾಗಿದೆ ಎಂದು ಯುವತಿಯ ಪಾಲಕರು ಚಡಚಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾವು ವಯಸ್ಕರಾಗಿದ್ದು, ಸ್ವ ಇಚ್ಛೆಯಿಂದ ವಿವಾಹವಾಗಿದ್ದೇವೆ. ಬೇರೆ ಬೇರೆ ಧರ್ಮಕ್ಕೆ ಸೇರಿದ್ದರಿಂದ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆ ನೀಡಬೇಕೆಂದು ಪ್ರೀತಿ ಶೃಂಗೇರಿ ಪೊಲೀಸರ ಮೊರೆ ಹೋಗಿದ್ದಾರೆ.