ಲವ್​ಜಿಹಾದ್​ನಿಂದ ವಿಶ್ವದ ಗಮನಸೆಳೆದಿದ್ದ ಹಾದಿಯಾ ತಂದೆ ಬಿಜೆಪಿಗೆ: ಶಬರಿಮಲೆ ಹೋರಾಟಕ್ಕೆ ಬೆಂಬಲ

ತಿರುವನಂತಪುರ: ಲವ್​ ಜಿಹಾದ್​ ಮೂಲಕ ಸುದ್ದಿ ಮಾಡಿದ್ದ ಕೇರಳದ ಹಾದಿಯಾ ಅವರ ತಂದೆ, ಮಾಜಿ ಸೈನಿಕ ಕೆ.ಎಂ.ಅಶೋಕನ್​ ಬಿಜೆಪಿ ಸೇರ್ಪಡೆಗೊಂಡಿದ್ದು, ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಸುಪ್ರೀಂಕೋರ್ಟ್​ ನೀಡಿರುವ ತೀರ್ಪಿನ ವಿರುದ್ಧ ಹೋರಾಡುತ್ತಿರುವ ಪಕ್ಷಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಇಂದು ಬಿಜೆಪಿ ಸೇರಿದ ಅಶೋಕನ್​ ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಗೋಪಾಲಕೃಷ್ಣನ್​ ಅವರು ಸದಸ್ಯತ್ವ ನೀಡಿ ಬರಮಾಡಿಕೊಂಡರು. ಬಿಜೆಪಿ ಸೇರಿರುವ ಅವರಿಗೆ ಮೂಲಭೂತವಾದಿಗಳಿಂದ ಬೆದರಿಕೆ ಬರುತ್ತಿದ್ದು ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎನ್ನಲಾಗಿದೆ.

ನಂತರ ಮಾತನಾಡಿದ ಅಶೋಕನ್​, ಹಿಂದು ಧರ್ಮದ ರಕ್ಷಣೆಗೆ ಸನ್ನದ್ಧವಾಗಿರುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ. ನಾನು ಮೊದಲಿನಿಂದಲೂ ಕಮ್ಯೂನಿಸ್ಟ್​ ಪಕ್ಷವನ್ನು ಹಿಂಬಾಲಿಸುತ್ತಿದ್ದೆ. ಆದರೆ, ಆ ಪಕ್ಷ ಮತಬ್ಯಾಂಕ್​ನಂಥ ಕೊಳಕು ರಾಜಕಾರಣ ನಡೆಸುತ್ತಿದೆ. ಯಾರಾದರೂ ಹಿಂದುತ್ವದ ಬಗ್ಗೆ ಮಾತನಾಡಿದರೆ ಅವರನ್ನು ಕೋಮುವಾದಿ ಎಂದು ಬಿಂಬಿಸಲಾಗುತ್ತಿದೆ. ಇದರಿಂದ ನಾನು ಅಲ್ಲಿಂದ ಹೊರಬಂದಿದ್ದೇನೆ. ಬಿಜೆಪಿ ಜತೆ ಕೈ ಜೋಡಿಸಿ ಶಬರಿಮಲೆ ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.

ಕೇರಳದ ಹಲವು ಹಿಂದುಗಳಂತೆ ನಾನೂ ಕೂಡ ನನ್ನ ನಂಬಿಕೆ ಮತ್ತು ಕಾನೂನಿನ ನಡುವೆ ಸಿಲುಕಿಕೊಂಡಿದ್ದೇನೆ. ನನ್ನ ಪದ್ಧತಿ, ಸಂಸ್ಕೃತಿಗಳು ನ್ಯಾಯಾಲಯದ ವೀಕ್ಷಣೆಯಡಿ ಬರುವುದಿಲ್ಲ. ಧಾರ್ಮಿಕ ತತ್ತ್ವಜ್ಞಾನಿಗಳು ಇಂಥ ವಿಷಯಗಳನ್ನು ಬಗೆಹರಿಸಿ ನಿರ್ಧಾರ ಕೈಗೊಳ್ಳಬೇಕು ಎಂದರು.

ಅಶೋಕನ್ ಮಗಳು ಅಖಿಲಾ ಲವ್​ಜಿಹಾದ್​ ಪ್ರಕರಣ ಇಡೀ ವಿಶ್ವದ ಗಮನ ಸೆಳೆದಿತ್ತು. ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಈಕೆ ಮುಸ್ಲಿಂ ಯುವಕನನ್ನು ಮದುವೆಯಾಗುವುದಕ್ಕೋಸ್ಕರ 2016ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಹಾದಿಯಾ ಎಂದು ಹೆಸರು ಬದಲಿಸಿಕೊಂಡಿದ್ದರು. ಮುಸ್ಲಿಂ ಯುವಕನನ್ನು ಮದುವೆಯಾದ ಮಗಳ ವಿರುದ್ಧ ಅಶೋಕನ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ತನ್ನ ಮಗಳನ್ನು ಮದುವೆಯಾದ ಶಫೀನ್ ಜಹಾನ್ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾದ ಸದಸ್ಯ. ಅವರೆಲ್ಲ ಸೇರಿ ತನ್ನ ಮಗಳನ್ನು ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಹೈಕೋರ್ಟ್​ ಹಾದಿಯಾ ವಿವಾಹವನ್ನು ಅಸಿಂಧುಗೊಳಿಸಿ ಪಾಲಕರ ವಶಕ್ಕೆ ಒಪ್ಪಿಸಿತ್ತು. ಆದರೆ, ಹಾದಿಯಾ ಪತಿ, ತನಗೆ ಪತ್ನಿಯೊಂದಿಗೆ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಹಾದಿಯಾ ವಿವಾಹವನ್ನು ಸಿಂಧುಗೊಳಿಸಿತ್ತು.