ಡಾರ್ಲಿಂಗ್ ಕೃಷ್ಣ ಪ್ರಪ್ರಥಮ ಬಾರಿಗೆ ನಿರ್ದೇಶನ ಹಾಗೂ ನಿರ್ಮಾಣ ಮಾಡುವ ಜತೆಗೆ ನಾಯಕರಾಗಿಯೂ ಅಭಿನಯಿಸಿರುವ ಲವ್ ಮಾಕ್ಟೇಲ್ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಇವೆಲ್ಲದರ ಜತೆಗೆ ಚಿತ್ರದ ಇನ್ನೂ ಹಲವು ವಿಭಾಗಗಳ ಜವಾಬ್ದಾರಿ ನಿಭಾಯಿಸಿರುವ ಕೃಷ್ಣ ಅವರದ್ದಿಲ್ಲಿ ಒಂಥರಾ ಒನ್ ಮ್ಯಾನ್ ಶೋ ಎಂದರೂ ಅತಿಶಯೋಕ್ತಿ ಏನಲ್ಲ. ಅವರ ಈ ಮಲ್ಟಿಟಾಸ್ಕ್ ಹಾಗೂ ಚಿತ್ರದ ಕುರಿತ ಅವರದೇ ಅನಿಸಿಕೆಗಳ ಸಾರಾಂಶ ಇಲ್ಲಿದೆ.
‘ಲವ್ ಮಾಕ್ಟೇಲ್’ ಕಥೆ, ಚಿತ್ರಕಥೆ, ಸಂಭಾಷಣೆ, ನೃತ್ಯ-ಸಾಹಸ ಸಂಯೋಜನೆ, ನಿರ್ಮಾಣ, ನಿರ್ದೇಶನ, ನಾಯಕ ನಟ ಡಾರ್ಲಿಂಗ್ ಕೃಷ್ಣ.
– ಹೀಗೆ ಸಿನಿಮಾದ ಬಹುತೇಕ ಎಲ್ಲ ವಿಭಾಗಗಳ ಜವಾಬ್ದಾರಿ ಹೆಗಲೇರಿಸಿಕೊಂಡು ಪ್ರಪ್ರಥಮ ಬಾರಿಗೆ ನಿರ್ದೇಶಕ ಹಾಗೂ ನಿರ್ವಪಕರಾಗಿಯೂ ಡಾರ್ಲಿಂಗ್ ಕೃಷ್ಣ ಅವರ ಡೇರಿಂಗ್ ಪ್ರಯತ್ನವೇ ‘ಲವ್ ಮಾಕ್ಟೇಲ್’. ಮೊದಲಿಗೆ ಬರೀ ಕಥೆಯಿಂದ ಆರಂಭವಾದ ಕೃಷ್ಣ ಅವರ ಪ್ರಯತ್ನ ಕೊನೆಗೆ ಹಲವಾರು ವಿಭಾಗಗಳಿಗೆ ವ್ಯಾಪಿಸಿ, ಒಂದೊಳ್ಳೆಯ ‘ಲವ್ ಮಾಕ್ಟೇಲ್’ ಆಗಿ ಮೂಡಿಬಂದಿರುವ ಹಿಂದೆ ಸಾಕಷ್ಟು ಧೈರ್ಯ-ಆತ್ಮವಿಶ್ವಾಸ ಇದೆ ಎನ್ನುತ್ತಾರೆ ಮದರಂಗಿ ಕೃಷ್ಣ ಎಂದೂ ಹೆಸರಾಗಿರುವ ಈ ಡಾರ್ಲಿಂಗ್.
‘ಮದರಂಗಿ’ ಸಿನಿಮಾ ಆದ ಮೇಲೆ ನಾನು ಒಂದೊಳ್ಳೆಯ ಕಥೆಗಾಗಿ ಸಾಕಷ್ಟು ಕಾದೆ. ಆಫರ್ಸ್ ತುಂಬ ಬಂದರೂ ನನಗೆ ಇಷ್ಟವಾಗುವಂಥ ಕಥೆ ಸಿಗಲಿಲ್ಲ. ಇಂಡಸ್ಟ್ರಿಯಲ್ಲಿ ಒಳ್ಳೊಳ್ಳೆಯ ಕಥೆಗಳು ಸಿನಿಮಾಗಳಾಗುತ್ತಿದ್ದರೂ ಅಂಥ ಕಥೆಗಳು ನನಗೆ ಸಿಗಲಿಲ್ಲ. ಹಾಗಾಗಿ ನಾನೇ ಕಥೆ ಬರೆದೆ ಎನ್ನುತ್ತ ‘ಲವ್ ಮಾಕ್ಟೇಲ್’ ಹುಟ್ಟಿಕೊಂಡ ಬಗ್ಗೆ ಹೇಳಿಕೊಂಡರು ಕೃಷ್ಣ.
‘ಅದು 2018ರ ಅಕ್ಟೋಬರ್ 14. ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದವ ‘ಹೀರೋ ಎನಿಸಿಕೊಂಡು ಎಂಟು ವರ್ಷಗಳಾದರೂ ಯಾಕೆ ಒಂದೊಳ್ಳೆಯ ಸಿನಿಮಾ ಆಗುತ್ತಿಲ್ಲ?’ ಎಂದು ಯೋಚಿಸುತ್ತ ಬಿಡದಿಯಲ್ಲಿ ತಟ್ಟೆ ಇಡ್ಲಿ ತಿನ್ನಲು ಕಾರು ನಿಲ್ಲಿಸಿದೆ. ಆರ್ಡರ್ ಮಾಡಿದ ಇಡ್ಲಿ ಕೈಗೆ ಬರುತ್ತಿದ್ದಂತೆ ಈ ಕಥೆಯ ಎಳೆ ಹೊಳೆಯಿತು. ತಕ್ಷಣ ಮಿಲನಾ ನಾಗರಾಜ್ಗೆ
ಕರೆ ಮಾಡಿ, ಹೀಗೊಂದು ಕಥೆಯ ಎಳೆ ಹೊಳೆದಿದೆ ಎಂದೆ. ಅವರು ಆಗ ಮುಂಬೈನಲ್ಲಿ ಆಡ್ ಶೂಟ್ನಲ್ಲಿದ್ದರು. ಬಿಡದಿಯಿಂದ ಮೈಸೂರಿಗೆ ಹೋಗುವವರೆಗೂ ಕಥೆ ತೋಚಿದಂತೆಲ್ಲ ಅವರಿಗೆ ಹೇಳುತ್ತ ಹೋದೆ, ಅವರು ನೋಟ್ ಮಾಡಿಕೊಳ್ಳುತ್ತಲೇ ಇದ್ದರು. ಮಾರನೇ ದಿನವೇ ಇಬ್ಬರೂ ಭೇಟಿ ಆಗಿ ರ್ಚಚಿಸಿ, ಒಂದು ವಾರದಲ್ಲೇ ಸ್ಕ್ರಿಪ್ಟ್ ಪೂರ್ಣಗೊಳಿಸಿದೆವು.
ನಾವಿಬ್ರೇ ಒಟ್ಟಾಗಿ ನಿರ್ವಿುಸೋಣ ಎಂದು ನಿರ್ಧರಿಸಿ ರಫ್ ಆಗಿ ನೋಟ್ ಮಾಡಿಕೊಂಡಿದ್ದ ಪ್ಯಾಡ್ಗೇ ದೇವಸ್ಥಾನದಲ್ಲಿ ಪೂಜೆ ನಡೆಸಿ ಮುಹೂರ್ತ ಮಾಡಿ, ನವೆಂಬರ್ 9ರಿಂದ ಶೂಟಿಂಗ್ ಆರಂಭಿಸಿಬಿಟ್ಟೆವು’ ಎಂದು ಸಿನಿಮಾ ಆರಂಭವಾದ ಪರಿಯನ್ನು ವಿವರಿಸಿದರು ಕೃಷ್ಣ.
ಸಣ್ಣ ಬಂಡವಾಳದಿಂದ ಶುರುವಾದ ದೊಡ್ಡ ಕನಸು: ‘ಈ ಸಿನಿಮಾ ಆರಂಭಿಸಿದಾಗ ನನ್ನಲ್ಲಿದ್ದಿದ್ದು ಬರೀ ಒಂದು ಲಕ್ಷ ರೂಪಾಯಿ ಮತ್ತು ಅದಾಗಲೇ ಕಂಡಿದ್ದ ಒಂದೆರಡು ಸೋಲು. ಈ ಸಂದರ್ಭದಲ್ಲಿ ಯಾರ ಬಳಿಯಾದರೂ ಹೋಗಿ ಕೇಳಿದರೆ ಹೇಗೆ ನೋಡುತ್ತಾರೆ ಎಂಬ ಅಂದಾಜಿತ್ತು. ಹೇಗಿದ್ದರೂ ನನಗೆ ಕೆಲಸ ಗೊತ್ತು, ಒಂದಕ್ಕಿಂತ ಹೆಚ್ಚು ಕೆಲಸ ಮಾಡಿ ಅಭ್ಯಾಸವಿತ್ತು. ಹಾಗಾಗಿ ನಾನೇ ಸಿನಿಮಾ ನಿರ್ಮಾಣ ಮಾಡಲು ನಿರ್ಧರಿಸಿದೆ.
ಆಗ ಮಿಲನಾ ಬಳಿ 30 ಸಾವಿರ ರೂ. ಇತ್ತು. ನಮ್ಮಿಬ್ಬರ ಬಳಿ ಇದ್ದ ಅಷ್ಟೇ ಹಣ ಇಟ್ಟುಕೊಂಡು ಶೂಟಿಂಗ್ ಆರಂಭಿಸಿದೆವು. ನಂತರ ಮಿಲನಾ ಕೆಲವು ಸಿನಿಮಾಗಳಿಗೆ ಒಪ್ಪಿಕೊಂಡು ಅಲ್ಲಿಂದ ಬಂದ ಸಂಭಾವನೆಯನ್ನೆಲ್ಲ ತಂದು ಇಲ್ಲಿ ಬಂಡವಾಳ ಹೂಡಿದರು’ ಎನ್ನುತ್ತ ಹಣ ಕ್ರೋಡೀಕರಣದ ಬಗ್ಗೆ ತಿಳಿಸಿದರು ಮಲ್ಟಿಟಾಸ್ಕರ್ ಕೃಷ್ಣ.
ಅಷ್ಟೇ ಹಣದಿಂದ ಚಿತ್ರ ಆರಂಭಿಸಿದರೂ ಸಿನಿಮಾ ಮುಗಿಸಲು ನಾವಿಲ್ಲಿ ಸಾಲ ಮಾಡಿಲ್ಲ ಎನ್ನುತ್ತಾರೆ ಅವರು. ‘ಅನುಭವಸ್ಥರನ್ನು ಹಾಕಿಕೊಂಡರೆ ಜಾಸ್ತಿ ಸಂಭಾವನೆ ಕೊಡಬೇಕು. ಅಷ್ಟು ಬಜೆಟ್ ನಮ್ಮಲ್ಲಿರಲಿಲ್ಲ. ಹಾಗಾಗಿ ಹೊಸ ಕಲಾವಿದರನ್ನೇ ಆರಿಸಿಕೊಂಡ್ವಿ. ಮನೆಯನ್ನೇ ತರಗತಿಯ್ನನಾಗಿಸಿ ಅವರಿಗೆಲ್ಲ ತರಬೇತಿ ಕೊಡಿಸಿ ನಟನೆ ತೆಗೆಸಿದ್ದೇವೆ. ಪರಿಣತರಂತೆ ಅವರೆಲ್ಲ ಅಭಿನಯಿಸಿದ್ದಾರೆ.
ಇನ್ನು ಪರಿಚಿತ ಎಡಿಟರ್ ಒಬ್ಬರಿಗೆ ಕರೆ ಮಾಡಿ ತಿಳಿಸಿದಾಗ, ಹಿಂದೆ ನಾನೇ ಕ್ಯಾಮರಾಮನ್ ಆಗಿ ಕೆಲಸ ಮಾಡಿದ್ದೆ, ನಾನೇ ಸಿನಿಮಾಟೋಗ್ರಫಿ ಮಾಡುತ್ತೇನೆ ಎಂದರು. ಅವರಿಗೆ ಬರೀ ಅಡ್ವಾನ್ಸ್ ಅಷ್ಟೇ ಕೊಟ್ಟಿರುವುದು. ರಘು ದೀಕ್ಷಿತ್ ಅವರನ್ನು ಅಪ್ರೋಚ್ ಮಾಡಿದಾಗ ಅವರ ಎಸ್ಟಿಮೇಷನ್ಗಿಂತಲೂ ಕಡಿಮೆ ಮೊತ್ತದಲ್ಲಿ ಸಂಗೀತ ನೀಡಲು ಒಪ್ಪಿದರು. ಅದರಲ್ಲೂ ಶೇ. 25 ಮಾತ್ರ ಪಾವತಿ ಮಾಡಿರುವುದು. ಇನ್ನು ಈ ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್, ಆರ್ಟ್ ಡೈರೆಕ್ಟರ್, ಪ್ರೊಡಕ್ಷನ್ ಮ್ಯಾನೇಜರ್ ಕೂಡ ಇಲ್ಲ. ಎಲ್ಲ ನಾನೇ ನಿಭಾಯಿಸಿದ್ದೇನೆ.
ಕಥೆ ಬರೆಯುತ್ತ ನಾನು ಮಿಲನಾ ಚರ್ಚೆ ಮಾಡುತ್ತ ಹುಟ್ಟಿಕೊಂಡ ಡೈಲಾಗ್ಸ್ ಚೆನ್ನಾಗಿದೆ ಎನಿಸಿ ಸಂಭಾಷಣೆ ನಾನೇ ಬರೆದೆ. ನೃತ್ಯ ನಾನೇ ಸಂಯೋಜಿಸಿದೆ. ಫೈಟ್ ಕೂಡ ನಾನೇ ಕಂಪೋಸ್ ಮಾಡಿದೆ. ಇನ್ನು ನನ್ನ ಕಥೆಗೆ ನಾನು ಮಾತ್ರ ಸಂಪೂರ್ಣವಾಗಿ ಜೀವ ತುಂಬಲು ಸಾಧ್ಯ ಅಂತ ನಾನೇ ನಾಯಕನಾದೆ. ಇಲ್ಲಿ ಎಲ್ಲ ಜವಾಬ್ದಾರಿ ನಾನೇ ತೆಗೆದುಕೊಳ್ಳಲು ಇನ್ನೊಂದು ಕಾರಣವಿದೆ.
ನನ್ನ ಕಲ್ಪನೆಗೆ ನಾನೇ ಕೆಲಸ ಮಾಡಿದಾಗ ಅಲ್ಲಿ ಶೇ. 100 ಶ್ರಮ ಇರುತ್ತದೆ. ಇನ್ನೊಬ್ಬರಿಗೆ ಹೇಳಿದಾಗ ಆತ ಶೇ. 80 ಮಾತ್ರ ಮಾಡುತ್ತಾನೆ, ಆತ ಇನ್ನೊಬ್ಬನಿಗೆ ಹೇಳಿ ಮಾಡಿಸಿದರೆ ಅವನು ಬರೀ ಶೇ. 60 ಮಾಡುತ್ತಾನೆ’ ಎನ್ನುವ ಕೃಷ್ಣ, ಈ ಸಿನಿಮಾದ ಎಲ್ಲ ಫಲಿತಾಂಶಕ್ಕೂ ನಾನೇ ಜವಾಬ್ದಾರಿ, ಒಳಿತು-ಕೆಡುಕು ಏನಿದ್ದರೂ ನಾನೇ ಹೊಣೆ ಎನ್ನುತ್ತಾರೆ.
ಹೀರೋಗಿಂತಲೂ ಸಿನಿಮಾನೇ ಮಿಗಿಲು
ಇದು ಅವರ ನಿರ್ದೇಶನದ ಪ್ರಪ್ರಥಮ ಚಿತ್ರವಾದರೂ ತಮ್ಮ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಲೂ ವಿಭಿನ್ನವಾಗಿರುತ್ತದೆ ಅಂತೆೆ. ‘ಇದುವರೆಗೆ ಮಾಡಿರುವಂಥದ್ದೇನನ್ನೂ ಮಾಡಬಾರದು ಎಂಬ ಕಾರಣಕ್ಕೆ ಎಲ್ಲದರಲ್ಲೂ ವಿಶೇಷವಾದದ್ದನ್ನೇ ಮಾಡಿದ್ದೇನೆ’ ಎಂಬ ಭರವಸೆ ನೀಡುತ್ತಾರೆ ಕೃಷ್ಣ.
ಇಷ್ಟೆಲ್ಲದರ ನಡುವೆ ಅವರು ಈ ಚಿತ್ರಕ್ಕಾಗಿ 10 ಕೆಜಿ ತೂಕ ಕೂಡ ಕಳೆದುಕೊಂಡಿದ್ದಾರಂತೆ. ‘ಇದು ಒಬ್ಬ ಹುಡುಗನ ಜೀವನದಲ್ಲಿನ ವಿವಿಧ ಕಾಲಘಟ್ಟದ ಕಥೆ. ಬೇರೆ ಬೇರೆ ಹಂತದಲ್ಲಿ ನಡೆಯುವ ಪ್ರೀತಿಯ ಕಥಾಹಂದರದಲ್ಲಿ ‘ಲವ್ ಮಾಕ್ಟೇಲ್’
ತಯಾರಿಸಲಾಗಿದೆ. ಕಥಾನಾಯಕನ ಶಾಲಾದಿನಗಳ ಪಾತ್ರ ಧನುಷ್ ಮಾಡಿದ್ದಾನೆ. ಕಾಲೇಜು ದಿನಗಳ ಪಾತ್ರಕ್ಕಾಗಿ ನಾನು ತೂಕ ಇಳಿಸಿಕೊಂಡೆ. ನಂತರದ ಕಾಲಘಟ್ಟದ ಪಾತ್ರವನ್ನೆಲ್ಲ ನಾನೇ ಮಾಡಿದ್ದೇನೆ’ ಎನ್ನುವ ಈ ಡಾರ್ಲಿಂಗ್, ‘ಇದು ಎಲ್ಲರ ಕಥೆ. ಈ ಚಿತ್ರದಲ್ಲಿನ ಕಥೆ ಪ್ರತಿ ಪ್ರೇಕ್ಷಕನಿಗೂ ಅನ್ವಯಿಸುತ್ತದೆ’ ಎನ್ನುತ್ತಾರೆ. ವಿಶೇಷವೆಂದರೆ, ಯಾವ ಟಾಕೀಸ್ನಲ್ಲೂ ಹೀರೋ ಕಟೌಟ್ ಹಾಕುವುದಿಲ್ಲವಂತೆ. ಅ
ದಕ್ಕೆ ‘ಹೀರೋಗಿಂತಲೂ ಸಿನಿಮಾನೇ ಮಿಗಿಲು’ ಎಂಬ ಕಾರಣ ನೀಡುತ್ತಾರೆ ನಾಯಕ, ನಿರ್ದೇಶಕ. ಅಲ್ಲದೆ ಚಿತ್ರದ ಬಗ್ಗೆ ಅಪಾರ ವಿಶ್ವಾಸ ಹೊಂದಿರುವ ಅವರು, ಇದು ಈ ವರ್ಷದ ಟಾಪ್ 3 ಸಿನಿಮಾಗಳಲ್ಲಿ ಒಂದಾಗಿರಲಿದೆ ಎಂದೂ ಹೇಳುತ್ತಾರೆ. ಅಂದಹಾಗೆ ಚಿತ್ರರಂಗಕ್ಕೆ ಪ್ರವೇಶಿಸಿ ಹತ್ತು ವರ್ಷಗಳ ಪರಿಶ್ರಮ ಪಟ್ಟಿರುವ ಕೃಷ್ಣಗೆ, ದಶಕದ ಅನುಭವ ಪಾಠವನ್ನೂ ಕಲಿಸಿದೆಯಂತೆ.
‘ಇಲ್ಲಿ ನಮಗಾಗಿ ಏನೇ ಮಾಡುವುದಿದ್ದರೂ ನಾವೇ ಮಾಡಿಕೊಳ್ಳಬೇಕು. ಯಾರೋ ಬಂದು ಉದ್ಧರಿಸುತ್ತಾರೆ ಎಂದು ಕುಳಿತರೆ ನಮ್ಮ ಜೀವನ ಬೇರೆಯವರ ಕೈಯಲ್ಲಿ ಕೊಟ್ಟು ಕುಳಿತಂತೆ. ಮುಂದೆಯೂ ಬೇರೆಯವರು ಒಳ್ಳೆಯ ಕಥೆ ತಂದರೆ ನಟಿಸುತ್ತೇನೆ, ಇಲ್ಲದಿದ್ದರೆ ನಾನೇ ಕಥೆ ಬರೆಯುತ್ತೇನೆ. ನನ್ನ ಕಥೆಗೆ ನಾನೇ ಅಭಿನಯಿಸುತ್ತೇನೆ, ನನ್ನ ನಟನೆಗೆ ನಾನೇ ನಿರ್ದೇಶಿಸುತ್ತೇನೆ’ ಎನ್ನುತ್ತಾರೆ ಕೃಷ್ಣ.
| ರವಿಕಾಂತ ಕುಂದಾಪುರ ಬೆಂಗಳೂರು