ಕೋಟ್ಯಂತರ ರೂ. ಬಾಡಿಗೆ ಬಾಕಿ

ಎಂ.ಎಸ್.ರವಿಕುಮಾರ್ ಕೆ.ಆರ್.ನಗರ
ಪಟ್ಟಣದ ಪುರಸಭೆಯ ಆದಾಯದ ಮೂಲವಾಗಿರುವ ವಾಣಿಜ್ಯ ಮಳಿಗೆಗಳಿಂದ ಬರಬೇಕಾದ ಬಾಡಿಗೆ ಕೋಟ್ಯಂತರ ರೂಪಾಯಿ ಬಾಕಿ ಉಳಿದಿರುವುದರಿಂದ ಆದಾಯಕ್ಕೆ ಧಕ್ಕೆ ಉಂಟಾಗಿದ್ದು, ಹೆಚ್ಚು ಬಾಕಿ ಉಳಿಸಿಕೊಂಡಿರುವ ಮಳಿಗೆಗಳಿಗೆ ಬೀಗ ಹಾಕಲಾಗಿದೆ.

ನಗರದ ಹೃದಯ ಭಾಗವಾದ ಮೈಸೂರು-ಹಾಸನ ರಸ್ತೆ ಮತ್ತು ಬಜಾರ್ ರಸ್ತೆ, ಸಿಎಂ ರಸ್ತೆಗಳಲ್ಲಿ ಪುರಸಭೆಯಿಂದ ನಿರ್ಮಾಣವಾಗಿರುವ ತರಕಾರಿ ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣಗಳು ಸೇರಿ 171 ಮಳಿಗೆಗಳನ್ನು ನಿಯಮಾನುಸಾರ ಹರಾಜಿನ ಮೂಲಕ ಬಾಡಿಗೆಗೆ ನೀಡಲಾಗಿದೆ. ಆದರೆ ಬಾಡಿಗೆದಾರರೂ ಪ್ರತಿ ತಿಂಗಳು ಬಾಡಿಗೆ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ರೂ. 3 ಕೋಟಿಯಷ್ಟು ಬಾಡಿಗೆ ಬಾಕಿ ಉಳಿದಿದೆ.

ವಿವಿ ರಸ್ತೆಯ ವಾಣಿಜ್ಯ ಸಂಕೀರ್ಣಗಳಿಂದ ರೂ. 12.91 ಲಕ್ಷ, ಬಜಾರ್ ರಸ್ತೆಯ ಮಳಿಗೆಗಳಿಂದ ರೂ. 43.5 ಲಕ್ಷ, ಐಡಿಎಸ್‌ಎಂಟಿ ಮಳಿಗೆಗಳಿಂದ ರೂ.26.80 ಲಕ್ಷ, ತರಕಾರಿ ಸಂಕುಲ ರೂ. 1.21 ಕೋಟಿ ಹಾಗೂ ಹೊಸ 5 ಮಳಿಗೆಗಳಿಂದ ರೂ. 95.99 ಲಕ್ಷ ಬಾಕಿ ಬಾಡಿಗೆ ಪುರಸಭೆಗೆ ಬರಬೇಕಾಗಿದೆ. ಅದರಲ್ಲಿ ಫಸಲ್‌ಉಲ್ಲಾ ಷರೀಫ್ ಇವರೊಬ್ಬರೇ ಒಟ್ಟು ರೂ. 34.05 ಲಕ್ಷ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ಪುರಸಭೆಗೆ ಸ್ಥಳೀಯ ಆದಾಯದ ಮೂಲವಾದ ಮಳಿಗೆಗಳಿಂದ ಪ್ರತಿ ತಿಂಗಳು ಲಕ್ಷಾಂತರ ರೂ. ಆದಾಯ ಬರಬೇಕಾಗಿತ್ತು. ಇದರಿಂದ ಸಿಬ್ಬಂದಿ ನಿರ್ವಹಣೆ ಮತ್ತು ಪಟ್ಟಣಾಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ವಾಣಿಜ್ಯ ಸಂಕೀರ್ಣಗಳ ಬಾಡಿಗೆದಾರರೂ ಸರಿಯಾಗಿ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಪುರಸಭೆಗೆ ಸೇರಿದ ಮಳಿಗೆಗಳಿಂದ ಬರಬೇಕಾದ ಆದಾಯದ ಬಾಕಿ ಉಳಿದಿರುವುದರಲ್ಲಿ ಕೆ.ಆರ್.ನಗರ ಪುರಸಭೆ ಮೊದಲ ಸ್ಥಾನದಲ್ಲಿದೆ ಎನ್ನಲಾಗುತ್ತಿದೆ.

ಇದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷೃ ಒಂದೆಡೆಯಾದರೆ, ಪುರಸಭಾ ಕೆಲ ಸದಸ್ಯರ ರಾಜಕೀಯ ಪ್ರಭಾವವು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಬಾಕಿ ಬಾಡಿಗೆ ವಸೂಲಿ ಮಾಡಬೇಕೆಂದು ‘ಲೌಡ ಸ್ಪೀಕರ್’ ಮೂಲಕ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಟ್ಟುವ ಬಾಡಿಗೆಯೇ ದುಬಾರಿ
ಮಳಿಗೆಗಳ ಹರಾಜಿನಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹೊರಗಿನ ವ್ಯಾಪಾರಿಗಳು ಭಾಗವಹಿಸಿದ್ದರಿಂದ ಸ್ಥಳೀಯ ಸಣ್ಣ ಪುಟ್ಟ ವ್ಯಾಪಾರಿಗಳು ಕೂಡ ದುಬಾರಿ ಬಾಡಿಗೆ ಕೂಗಬೇಕಾದ ಸನ್ನಿವೇಶ ನಿರ್ಮಾಣವಾಯಿತು. ಆ ಸ್ಥಳದಲ್ಲಿ ಬರುವ ಆದಾಯಕ್ಕಿಂತ ನಾವು ಕಟ್ಟುವ ಬಾಡಿಗೆಯೇ ದುಬಾರಿಯಾಗಿದೆ. ಸಚಿವ ಸಾ.ರಾ.ಮಹೇಶ್ ಇತ್ತ ಗಮನಹರಿಸಿ ವ್ಯಾಪಾರಿಗಳ ಸಮಸ್ಯೆಯನ್ನು ಬಗೆಹರಿಸಬೇಕು.
ಪ್ರಸನ್ನಕುಮಾರ್, ಮಳಿಗೆ ಬಾಡಿಗೆದಾರ

ಸಚಿವರ ಮೊರೆ ಹೋಗುವುದು ಸರಿಯಲ್ಲ
ಬಾಡಿಗೆಯನ್ನು ಹರಾಜಿನಲ್ಲಿ ಕೂಗಿ ಇದೀಗ ಬಾಡಿಗೆ ಕಟ್ಟಲು ಹರಾಜುದಾರರು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲೂ ಇಲ್ಲದಷ್ಟು ಬಾಡಿಗೆಯನ್ನು ಮನಸೋಇಚ್ಛೆಯಾಗಿ ಹರಾಜಿನಲ್ಲಿ ಕೂಗಲಾಗಿದೆ. ಇದೀಗ ಬಾಡಿಗೆ ಕಡಿಮೆ ಮಾಡಿ ಎಂದು ಸಚಿವರ ಮೊರೆ ಹೋಗುವುದು ಸರಿಯಲ್ಲ. ಕೂಗುವಾಗ ಇರುವ ಧೈರ್ಯ, ದರ್ಪವನ್ನು ಬಾಡಿಗೆ ಕಟ್ಟುವಾಗಲೂ ಪ್ರದರ್ಶಿಸಬೇಕು. ಇಲ್ಲವಾದರೆ ಬೇರೆಯವರು ಇದೇ ದಾರಿ ಹುಡುಕುತ್ತಾರೆ.
ಗರುಡಗಂಭದ ಸ್ವಾಮಿ, ಸ್ವರಾಜ್ ಇಂಡಿಯಾ ತಾಲೂಕು ಘಟಕ ಅಧ್ಯಕ್ಷ.
|
ಡಿಸಿಗೆ ವರದಿ ಕಳುಹಿಸಿ ಮುಂದಿನ ಕ್ರಮ
ಪುರಸಭಾ ವಾಣಿಜ್ಯ ಸಂಕೀರ್ಣಗಳ ಬಾಡಿಗೆದಾರರೂ ಕೋಟ್ಯಂತರ ರೂಪಾಯಿಗಳನ್ನು ಬಾಡಿಗೆ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿಸಿದ್ದು, ಸಚಿವರ ಗಮನಕ್ಕೆ ತರಲಾಗಿದೆ. ಅವರ ಸಲಹೆ ಮತ್ತು ಸೂಚನೆಯ ಮೇರೆಗೆ ಜಿಲ್ಲಾಧಿಕಾರಿಗೆ ವರದಿ ಕಳುಹಿಸಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಬಿ.ಎಸ್.ಹರ್ಷಲತಾ ಶ್ರೀಕಾಂತ್, ಪುರಸಭಾ ಅಧ್ಯಕ್ಷೆ.

ಠೇವಣಿ ಹಣ ಮುಟ್ಟುಗೋಲು ಹಾಕಿಕೊಳ್ಳಿ
ಒಂದು ಬಾರಿ ಸರ್ಕಾರದ ನಿಯಮಾನುಸಾರ ಹರಾಜು ನಡೆದ ಮೇಲೆ ಮತ್ತೆ ಬಾಡಿಗೆ ಕಡಿಮೆ ಮಾಡುವುದು ಸರಿಯಲ್ಲ. ಇದರಿಂದಾಗಿ ಬಿಡ್‌ನಲ್ಲಿ ಭಾಗವಹಿಸಿದ್ದ ಪೈಪೋಟಿದಾರರಿಗೆ ಮೋಸ ಮಾಡಿದಂತಾಗುತ್ತದೆ. ಆದ್ದರಿಂದ ಬಾಡಿಗೆ ಬಾಕಿ ಉಳಿಸಿರುವ ಬಾಡಿಗೆದಾರರ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು, ಕಾನೂನು ಕ್ರಮ ಕೈಗೊಂಡು ಬಾಕಿ ವಸೂಲಿ ಮಾಡಬೇಕು.
ಎಂ.ಬಿ.ಆನಂದ, ಯುವ ಮುಖಂಡ

ಮಳಿಗೆಗಳನ್ನು ಮರು ಹರಾಜು ಮಾಡಿ
ಪುರಸಭೆಯಿಂದ ನಿಯಮಾನುಸಾರ ಹರಾಜಾಗಿರುವ ವಾಣಿಜ್ಯ ಮಳಿಗೆಗಳಲ್ಲಿ ಶೇ.95ರಷ್ಟು ಬಾಡಿಗೆದಾರರು ಬಾಕಿ ಉಳಿಸಿಕೊಂಡಿದ್ದಾರೆ. ಆ ಅಂಗಡಿಗಳಿಂದ ದುಪ್ಪಟ್ಟು ಆದಾಯ ಗಳಿಸಿ ಬೇರೆಡೆ ಆಸ್ತಿ ಸಂಪಾದಿಸಿಕೊಂಡಿದ್ದರು. ಪುರಸಭೆಗೆ ಪ್ರತಿ ತಿಂಗಳು ಕಟ್ಟಬೇಕಾದ ಬಾಡಿಗೆಯನ್ನು ಉದ್ದೇಶಪೂರ್ವಕವಾಗಿಯೇ ಬಾಕಿ ಮಾಡಿಕೊಂಡಿದ್ದಾರೆ. ಇಂತಹವರಿಂದ ಪೂರ್ಣ ಬಾಡಿಗೆ ವಸೂಲಿ ಮಾಡಿ, ಮಳಿಗೆಗಳನ್ನು ಮರು ಹರಾಜು ಮಾಡಬೇಕು.
ಎಚ್.ಕೆ.ಹರೀಶ್, ವಕೀಲ.

ಸಚಿವರು ನಿರ್ಧಾರ ತೆಗೆದುಕೊಳ್ಳಲಿ
ಮಳಿಗೆಗಳನ್ನು ಹರಾಜು ಕೂಗುವಾಗ ನಾ ಮುಂದು ತಾ ಮುಂದು ಎಂದು ಪೈಪೋಟಿಯಲ್ಲಿ ಮುಂದಾಲೋಚನೆ ಮಾಡದೆ ಹೆಚ್ಚೆಚ್ಚು ಬಾಡಿಗೆ ಕೂಗಿದರು. ಆದರೆ, ಈಗ ವ್ಯವಹಾರದಲ್ಲಿ ಲಾಭ ಸಿಗುತ್ತಿಲ್ಲ. ಇದರಿಂದ ಕೈ ಸುಟ್ಟುಕೊಂಡು ಪಶ್ಚಾತ್ತಾಪಪಡುತ್ತಿದ್ದಾರೆ. ಮಳಿಗೆದಾರರಿಗೂ ಅನುಕೂಲವಾಗುವಂತಹ ನಿರ್ಧಾರವನ್ನು ಪುರಸಭೆಯವರು ಮತ್ತು ಸಚಿವ ಸಾ.ರಾ.ಮಹೇಶ್ ತೆಗೆದುಕೊಳ್ಳಲಿ.
ಕೆ.ಎಸ್.ರವೀಂದ್ರಕುಮಾರ್, ವ್ಯಾಪಾರಿ

ಬೇರೆಯವರಿಗೆ ಬಾಡಿಗೆಗೆ ನೀಡಲಾಗಿದೆ
ಸರ್ಕಾರಿ ಆಸ್ತಿ ಕಾಪಾಡಬೇಕಾಗಿರುವುದು ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕರ್ತವ್ಯ. ಆದರೆ, ಕೆಲವು ಜನಪ್ರತಿನಿಧಿಗಳು ಬಾಡಿಗೆ ವಸೂಲಾತಿಗೆ ಹೋಗುವ ಅಧಿಕಾರಿಗಳಿಗೆ ಫೋನ್ ಮಾಡಿ ಬೆದರಿಕೆ ಹಾಕುತ್ತಾ ತಡೆಹಿಡಿದಿದ್ದರಿಂದ ಹಾಗೂ ಮೂಲ ಬಾಡಿಗೆದಾರರು ಹೆಚ್ಚಿನ ಬಾಡಿಗೆಗೆ ಮಳಿಗೆಯನ್ನು ಬೇರೆಯವರಿಗೆ ಬಾಡಿಗೆ ನೀಡಿದ್ದು ಅದರಲ್ಲೂ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಲೇ ಕೋಟ್ಯಂತರ ರೂಪಾಯಿ ಬಾಡಿಗೆ ಬಾಕಿಯಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು.
ಸೈಯದ್ ಜಾಬೀರ್, ಕಾಂಗ್ರೆಸ್ ವಕ್ತಾರ

ಡಿಸಿ ಆದೇಶದಂತೆ ನಡೆಯುತ್ತೇವೆ
ಪುರಸಭೆ ಮಳಿಗೆಗಳ ಬಾಡಿಗೆದಾರರು ಲಕ್ಷಾಂತರ ರೂ. ಬಾಡಿಗೆ ಉಳಿಸಿಕೊಂಡಿರುವ ಪರಿಣಾಮ ಅಂತಹವರ ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಕೆಲವರು ಸ್ವಲ್ಪ ಬಾಕಿ ಕಟ್ಟಿದ್ದು ಉಳಿಕೆಯನ್ನು ಪಾವತಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ, ಅತಿ ಹೆಚ್ಚು ಮೊತ್ತದ ಬಾಡಿಗೆ ಬರಬೇಕಾದ ಹಿನ್ನೆಲೆಯಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರು ನೀಡುವ ಆದೇಶದಂತೆ ನಡೆದುಕೊಳ್ಳಲಾಗುವುದು.
ಕೆ.ಶಿವಣ್ಣ, ಪುರಸಭಾ ಮುಖ್ಯಾಧಿಕಾರಿ