ಬಾದಾಮಿ ಕ್ಷೇತ್ರದಲ್ಲಿ ಎದ್ದೂ ಬಿದ್ದೂ ಗೆದ್ದ ಸಿದ್ದರಾಮಯ್ಯ

| ಅಶೋಕ ಶೆಟ್ಟರ, ಬಾಗಲಕೋಟೆ

ತಾಯಿ ಚಾಮುಂಡೇಶ್ವರಿ ಅವಕೃಪೆಗೊಳಗಾಗಿ ರಾಜಕೀಯವಾಗಿ ಮುಳುಗುವ ಸಂಕಷ್ಟದಲ್ಲಿದ್ದ ಸಿದ್ದರಾಮಯ್ಯ ಅವರನ್ನು ಕೊನೇ ಕ್ಷಣದಲ್ಲಿ ಬನಶಂಕರಿ ದೇವಿ ಒಲ್ಲದ ಮನಸ್ಸಿನಿಂದ ಕೈಹಿಡಿದು ಗೆಲುವಿನ ದಡ ಮುಟ್ಟಿಸಿದ್ದಾಳೆ.

ಬಾದಾಮಿ ಕ್ಷೇತ್ರದ ಮತ ಎಣಿಕೆ ಕೊನೇ ಸುತ್ತಿನವರೆಗೂ ವಿಜಯಮಾಲೆ ಯಾರಿಗೆ ಎನ್ನುವ ಕುತೂಹಲವಿತ್ತು. ಜೆಡಿಎಸ್ ಅಭ್ಯರ್ಥಿ ನಿರೀಕ್ಷೆ ಮೀರಿ ಮತ ಪಡೆದಿದ್ದರಿಂದ ಅಂತಿಮವಾಗಿ ಬಿಜೆಪಿಯ ಶ್ರೀರಾಮುಲು ಸೋತು, ಸಿದ್ದರಾಮಯ್ಯ 1,696 ಮತಗಳ ಅಂತರದ ಪ್ರಯಾಸದ ಗೆಲುವು ದಾಖಲಿಸಿದರು.

ಪಕ್ಷಕ್ಕೆ ಮುಳುವಾದ ಪ್ರತ್ಯೇಕ ಧರ್ಮ: ವಾಸ್ತವದಲ್ಲಿ ಸಿದ್ದರಾಮಯ್ಯ ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಂತೆ ಈ ಭಾಗದ ಮತದಾರರು ಕಾಂಗ್ರೆಸ್ ಅನ್ನು ಸೋಲಿಸಲು ಪಣತೊಟ್ಟಿದ್ದರು. ಮುಖ್ಯವಾಗಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶದಿಂದ ಕುದಿಯುತ್ತಿದ್ದ ಸಮುದಾಯದ ಜನರಿಗೆ ಅವರ ಸ್ಪರ್ಧೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಹೀಗಾಗಿ ಸಿದ್ದು ಮೇಲಿನ ಆಕ್ರೋಶ ಕಾಂಗ್ರೆಸ್ ಅನ್ನು ಮಕಾಡೆ ಮಲಗಿಸಲು ಕಾರಣವಾಯಿತು.

ಸೋತರೂ ಪಕ್ಷ ಗೆಲ್ಲಿಸಿದ ಶ್ರೀರಾಮುಲು!: ಸಿಎಂ ವಿರುದ್ಧ ಸ್ಪರ್ಧಿಸಿದ ಶ್ರೀರಾಮುಲು ಹಿಂದೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನಮನ ಗೆದ್ದಿದ್ದರು. ಅದೇ ಗದಗದ ಗಡಿಗೆ ಹೊಂದಿಕೊಂಡ ಬಾದಾಮಿಯಲ್ಲಿ ಸ್ಪರ್ಧಿಸಿದ್ದು, ಕಡಿಮೆ ದಿನಗಳಲ್ಲಿ ಕ್ಷೇತ್ರದಲ್ಲಿ ದೊಡ್ಡಮಟ್ಟದ ಬೆಂಬಲ ವ್ಯಕ್ತವಾಗಲು ಕಾರಣವಾಯಿತು.

ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆನ್ನಿಗೆ ನಿಂತಿದ್ದ ವಾಲ್ಮೀಕಿ ಸಮುದಾಯ ಶ್ರೀರಾಮುಲು ಕಾರಣಕ್ಕೆ ರಾತ್ರೋರಾತ್ರಿ ಬಿಜೆಪಿ ಕಡೆಗೆ ವಾಲಿತ್ತು. ಕ್ಷೇತ್ರದಲ್ಲಿ ಮಾತ್ರವಲ್ಲದೆ, ಜಿಲ್ಲಾದ್ಯಂತ ಬಿಜೆಪಿಯನ್ನು ಬೆಂಬಲಿಸಿತು. ಜತೆಗೆ ಎಸ್ಟಿ ಸಮುದಾಯಕ್ಕೆ ಸಿದ್ದರಾಮಯ್ಯ ಶೇ. 7.5 ಮೀಸಲಾತಿ ಕಲ್ಪಿಸಲಿಲ್ಲ ಎಂಬ ಆಕ್ರೋಶವೂ ಸೇರಿತು. ಅಲ್ಲದೆ ಬಿಜೆಪಿ ಸರ್ಕಾರ ಬಂದ ತಕ್ಷಣ ಆ ಕೆಲಸ ಮಾಡುತ್ತೇವೆ ಎಂದು ಶ್ರೀರಾಮುಲು ಅಭಯ ನೀಡಿದ್ದು ಬಿಜೆಪಿ ಮತ ಕ್ರೋಡೀಕರಣಕ್ಕೆ ನೆರವಾಗಿ ಅಹಿಂದ ಮತ ವಿಭಜನೆಯಾಯಿತು. ಹೀಗಾಗಿ ಶ್ರೀರಾಮುಲು ಕಡಿಮೆ ಅಂತರದಲ್ಲಿ ಸೋತರೂ ತಮ್ಮ ಸಮುದಾಯದ ಮತಗಳನ್ನು ವೀರಶೈವ-ಲಿಂಗಾಯತ ಸಮುದಾಯದ ಜತೆಗೆ ಸಮೀಕರಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನೆರವಾದರು.

ಗೆದ್ದು ಸೋತ ಸಿದ್ದರಾಮಯ್ಯ!: ಸಿದ್ದರಾಮಯ್ಯ ಗೆದ್ದಿರುವುದು 1,696 ಮತಗಳಿಂದ ಮಾತ್ರ. ಸಿಎಂ ಆಗಿದ್ದರೂ ಭಾರಿ ಅಂತರದ ಗೆಲುವು ಸಾಧ್ಯವಾಗಲಿಲ್ಲ. ನೇರ ಹಣಾಹಣಿ ಉಂಟಾಗಿದ್ದರೆ ಚಾಮುಂಡೇಶ್ವರಿಯಂತೆ ಇಲ್ಲೂ ಭಾರಿ ಅಂತರದಲ್ಲಿ ಸೋಲುತ್ತಿದ್ದರು. ಹಾಗಾಗಿ ಸಿದ್ದರಾಮಯ್ಯ ಗೆದ್ದರೂ ಸೋತಂತೆ ಎನ್ನಲಾಗುತ್ತಿದೆ.

ಸಿಎಂ ಗೆಲ್ಲಿಸಿದ ಜೆಡಿಎಸ್ !

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನು ಸೋಲಿಸಿದ ಜೆಡಿಎಸ್ ಬಾದಾಮಿಯಲ್ಲಿ ಪರೋಕ್ಷವಾಗಿ ಗೆಲುವಿಗೆ ಸಹಕರಿಸಿತು ಎನ್ನುವ ಮಾತುಗಳಿವೆ. ಲಿಂಗಾಯತ ಸಮುದಾಯದ ಹನುಮಂತ ಮಾವಿನಮರದ ಜತೆ ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಜೆಡಿಎಸ್ ಅಭ್ಯರ್ಥಿ ಗೌಪ್ಯವಾಗಿ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ್ದು ಅನುಮಾನಗಳಿಗೆ ಪುಷ್ಟಿ ಕೊಟ್ಟಿತ್ತು. ಅಂತಿಮವಾಗಿ 24,484 ಮತ ಪಡೆದಿದ್ದರಿಂದ ಬಿಜೆಪಿಯ ರಣತಂತ್ರಕ್ಕೆ ಹಿನ್ನಡೆ ಆಯಿತು.

ಗೆಲುವಿಗೆ ತ್ರಿಕೋನ ಸ್ಪರ್ಧೆ ಕಾರಣ

ಬಾದಾಮಿಯ ಒಟ್ಟು 1,64,006 ಮತಗಳಲ್ಲಿ ಸಿದ್ದರಾಮಯ್ಯ 67,599 ಮತ ಪಡೆದಿದ್ದಾರೆ. ವಿರೋಧಿ ಮತಗಳ ಸಂಖ್ಯೆ 96,326. ನೋಟಾ ಸಂಖ್ಯೆ 2007. ಇದು ಕೂಡ ಸಿದ್ದರಾಮಯ್ಯ ಗೆಲುವಿನ ಅಂತರದ ಮತಗಳಿಗಿಂತಲೂ ಅಧಿಕ. ಬಾದಾಮಿಯಲ್ಲಿ ತ್ರಿಕೋನ ಸ್ಪರ್ಧೆ ಇದ್ದಾಗ ಮಾತ್ರ ಕಾಂಗ್ರೆಸ್ ಗೆಲ್ಲುತ್ತ ಬಂದಿದ್ದು, ಈಗಲೂ ಅದು ಸಾಧ್ಯವಾಗಿದೆ ವಿನಃ ಸಿದ್ದರಾಮಯ್ಯ ವರ್ಚಸ್ಸು ಇಲ್ಲಿ ಕೆಲಸ ಮಾಡಿಲ್ಲ. ಅವರನ್ನು ಗೆಲ್ಲಿಸಲೆಂದು ಜಿಲ್ಲೆ, ಹೊರಗಿನ ಅನೇಕ ಮುಖಂಡರು ಕ್ಷೇತ್ರದಲ್ಲಿ ಗಿರಕಿ ಹೊಡೆದರೂ ಸಫಲರಾಗಿಲ್ಲ ಎನ್ನುವುದನ್ನು ಅವರು ಪಡೆದ ಮತಗಳು ದೃಢೀಕರಿಸುತ್ತಿವೆ.

ಬಾದಾಮಿ ಸೋಲಿನ ಹೊಣೆಯನ್ನು ನಾನೇ ಹೊತ್ತು ಕೊಳ್ಳುತ್ತೇನೆ. ಅಲ್ಪ ಮತಗಳಿಂದ ಸಿದ್ದರಾಮಯ್ಯ ಗೆದ್ದಿದ್ದಾರೆ. ತಾಂತ್ರಿಕವಾಗಿ ಸೋಲುಂಡಿದ್ದರೂ ಹಣದ ಹೊಳೆ ಹರಿಸಿದ ಸಿಎಂ ವಿರುದ್ಧ ನೈತಿಕ ಗೆಲುವು ಸಾಧಿಸಿದ್ದೇನೆ. ಜೆಡಿಎಸ್ ಅಭ್ಯರ್ಥಿ ಅಧಿಕ ಮತಗಳನ್ನು ಪಡೆದಿದ್ದು ಗೆಲುವಿಗೆ ತೊಡಕಾಯಿತು. ಬಾದಾಮಿ ಕ್ಷೇತ್ರದ ಮೇಲೆ ಪ್ರೀತಿಯಿದೆ.

| ಬಿ. ಶ್ರೀರಾಮುಲು ಶಾಸಕ

Leave a Reply

Your email address will not be published. Required fields are marked *