ವಿಜಯಪುರ: ಡಿಜಿಟಲ್ ಅರೆಸ್ಟ್, ಕ್ರಿಪ್ಟೋ ಟ್ರೇಡಿಂಗ್, ಷೇರ್ ಮಾರ್ಕೆಟಿಂಗ್ ಸೇರಿ ವಿವಿಧ ರೀತಿಯ ಪ್ರಕರಣಗಳಲ್ಲಿ ಹಣ ಕಳೆದುಕೊಂಡ ನಾಲ್ವರಿಗೆ ಮರಳಿ ಹಣ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಸಫಲವಾಗಿದೆ. ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ದಾಖಲಾಗಿರುವ 12 ವಂಚನೆ ಪ್ರಕರಣಗಳ ಪೈಕಿ ನಾಲ್ಕು ಪ್ರಮುಖ ಕೇಸ್ಗಳಲ್ಲಿ ಒಟ್ಟು 1.47 ಕೋಟಿ ರೂ.ಗಳನ್ನು ವಾಪಸ್ ಕೊಡಿಸಿರುವುದಾಗಿ ಎಸ್ಪಿ ಲಕ್ಷ್ಮಣ ನಿಂಬರಗಿ ಬುಧವಾರ ಮಾಹಿತಿ ನೀಡಿದರು.
ಪ್ರಕರಣಗಳ ವಿವರ: ವಿಜಯಪುರ ನಗರದ ಸೃಷ್ಟಿ ಕಾಲನಿ ನಿವಾಸಿ ಶೈಲಜಾ ಶಿವಲಿಂಗಸ್ವಾಮಿ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿ 38 ಲಕ್ಷ ರೂ.ವಂಚಿಸಲಾಗಿತ್ತು. ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ವಾಡಿ 31,52,581 ರೂ.ಗಳನ್ನು ಶೈಲಜಾಗೆ ಮರಳಿ ಕೊಡಿಸಲಾಗಿದೆ. ತಾಳಿಕೋಟಿ ಪಟ್ಟಣದ ರಾಜಕನ್ಯಾ ಬಸವರಾಜ ಅವರಿಗೆ ಟ್ರೇಡಿಂಗ್ ಅಪ್ಲಿಕೇಶನ್ ಮೂಲಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವ ಆಮಿಷ ತೋರಿಸಿ 87 ಲಕ್ಷ ರೂ.ವಂಚಿಸಲಾಗಿತ್ತು. ಈ ಪ್ರಕರಣದಲ್ಲಿ 68,25,710 ರೂ. ಮರಳಿ ಕೊಡಿಸಲಾಗಿದೆ. ಸಿಂದಗಿಯ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರಿಗೆ ಮಾರ್ಕೆಟ್ ಬೆಲೆಗಿಂತ ಕಡಿಮೆ ದರದಲ್ಲಿ ಷೇರುಗಳನ್ನು ನೀಡುವುದಾಗಿ ನಂಬಿಸಿ 1 ಕೋಟಿ ರೂ. ವಂಚನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 9,97,762ರೂ. ಗಳನ್ನು ವಾಪಸ್ ಕೊಡಿಸಲಾಗಿದೆ. ವಿಜಯಪುರ ನಗರದ ನಿಖಿಲ ಶಿವಾನಂದ ಮೋಜಿ ಇವರಿಗೆ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ 2 ಕೋಟಿ ರೂ. ವಂಚಿಸಲಾಗಿತ್ತು. ಈ ಪ್ರಕರಣದಲ್ಲಿ 38 ಲಕ್ಷ ರೂ. ವಾಪಸ್ ಕೊಡಿಸಲಾಗಿದೆ ಎಂದು ಎಸ್ಪಿ ವಿವರ ನೀಡಿದರು.