ಬಂದ್ ನಷ್ಟ ಕರೆ ನೀಡಿದವರು ಭರಿಸಬೇಕು

ಮತ್ತೆ ಗುಡುಗಿದ ಜನಾರ್ದನ ಪೂಜಾರಿ
ಮಂಗಳೂರು: ಬಂದ್ ಸಂವಿಧಾನ ವಿರೋಧಿ. ಇದರಿಂದ ಉಂಟಾಗಬಹುದಾದ ನಷ್ಟವನ್ನು ಕರೆ ನೀಡಿದವರೇ ಭರಿಸಬೇಕು.. ಕಾಂಗ್ರೆಸ್ ಕರೆ ನೀಡಿದೆ; ಅನುಭವಿಸಬೇಕಾಗುತ್ತದೆ ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಂದ್ ಬಗ್ಗೆ ಸುಪ್ರೀಂಕೋರ್ಟ್‌ನ ಸ್ಪಷ್ಟ ನಿರ್ದೇಶನವಿದೆ. ಆದ್ದರಿಂದ ಬಂದ್‌ಗೆ ಕರೆ ನೀಡಿದವರು ತುಂಬಾ ಜಾಗರೂಕತೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.
ಭಾರತ್ ಬಂದ್‌ಗೆ ಕರೆ ನೀಡುವುದು ಸುಲಭ. ಕರೆ ಕೊಟ್ಟ ಬಳಿಕ ಅದರಿಂದ ಉಂಟಾಗಬಹುದಾದ ಸಾವಿರಾರು ಕೋಟಿ ರೂ. ನಷ್ಟ ಭರಿಸಲು ಕರೆ ನೀಡಿದ ಪಕ್ಷ ಸಿದ್ಧವಿರಬೇಕು. ಕಾಂಗ್ರೆಸ್ ಆದರೂ, ಬಿಜೆಪಿಯಾದರೂ ತಪ್ಪು ಮಾಡಿದರೆ ತಪ್ಪೇ ಎಂದು ಹೇಳಿದರು.
ತೈಲ ಮಾರಾಟ ಬೆಲೆಯ ಮೇಲೆ ಹಾಕಿರುವ ಸೆಸ್ ಕಡಿತಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದು ಸಮಸ್ಯೆಗೆ ಪರಿಹಾರವಲ್ಲ. ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ, ಪ್ರಧಾನಿ ದಿಟ್ಟ ಕ್ರಮ ಕೈಗೊಳ್ಳಬೇಕು. ಅಕ್ರಮ ದಾಸ್ತಾನು ಮಾಡಿಕೊಂಡವರನ್ನು ಜೈಲಿಗೆ ಕಳುಹಿಸಬೇಕು ಎಂದರು.
ಮಾರಾಟದ ಮೇಲಿನ ಸೆಸ್ ಕಡಿತಗೊಂಡರೆ ರಾಜ್ಯ ಸರ್ಕಾರ ನಡೆಯುವುದು ಹೇಗೆ? ಎಂದು ಪ್ರಶ್ನಿಸಿದ ಅವರು, ವಿತ್ತ ಸಚಿವನಾಗಿದ್ದ ಸಂದರ್ಭ ನಾನು ಕೂಡ ಈ ಸೆಸ್ ಕಡಿತದ ಚಿಂತೆ ಮಾಡಿದ್ದೆ. ಅಧಿಕಾರಿಗಳ ಕಡೆಯಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ನಾನು ಹಾಗೆ ಆಲೋಚನೆ ಮಾಡಿದ್ದು ತಪ್ಪು ಎಂದು ಆ ಮೇಲೆ ತಿಳಿಯಿತು ಎಂದರು.