ಭತ್ತ ತೆನೆ ಹೊತ್ತಲ್ಲಿ ಬತ್ತಿದ ಗದ್ದೆಗಳು

ಲೋಕೇಶ್ ಸುರತ್ಕಲ್
ಭತ್ತ ಕೃಷಿ ಬೆಳೆದ ರೈತರು ಈ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಇನ್ನೂ ಪೂರ್ಣ ಚೇತರಿಕೊಳ್ಳದಿರುವಾಗಲೇ ಎಣೇಲು ಬೆಳೆ ತೆನೆ ಬಿಡುವ ನಿರ್ಣಾಯಕ ಕಾಲದಲ್ಲಿ ಮಳೆ ಕೈಕೊಟ್ಟಿದೆ. ಇದರಿಂದಾಗಿ ಉಭಯ ಜಿಲ್ಲೆಗಳಲ್ಲಿ ಶೇ.10ರಿಂದ 30ರಷ್ಟು ಭತ್ತ ಬೆಳೆ ಫಸಲು ಕುಂಠಿತವಾಗುವ ಆತಂಕ ಎದುರಾಗಿದೆ.

ಭತ್ತ ತೆನೆಕಟ್ಟುವ ಸಮಯದಲ್ಲಿ ಗದ್ದೆಯಲ್ಲಿ ನೀರಿಗಿಂತ ಮಳೆ ಮುಖ್ಯ. ಮಳೆ ಬಾರದಿದ್ದರೆ ಭತ್ತ ಜಳ್ಳಾಗಿ ಇಳುವರಿ ಮೇಲೆ ನೇರ ಪರಿಣಾಮ ಬೀರುತ್ತದೆ. ಈಗ ಬಯಲು ಗದ್ದೆಗಳಿಗಿಂತಲೂ ಬೆಟ್ಟು ಮತ್ತು ಮಜಲು ಗದ್ದೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಬೆಳೆ ಜಳ್ಳಾಗುವ ಆತಂಕದಿಂದಿದ್ದಾರೆ ರೈತರು.

ಧಾರಾಕಾರ ಮಳೆಯಿಂದ ಬಯಲು ಗದ್ದೆಗಳಲ್ಲಿ ಬೆಳೆದ ಭತ್ತದ ತೆನೆ ಹೊಟ್ಟಾದರೆ, ಬೆಟ್ಟುಗದ್ದೆಯಲ್ಲಿ ನೀರು ಕಡಿಮೆಯಾಗಿ ತೆನೆ ಕಟ್ಟಲು ಸಮಸ್ಯೆಯಾಗಿದೆ. ಕೆರೆ-ಬಾವಿಗಳಲ್ಲಿ ನೀರು ಇರುವವರು ಪಂಪ್‌ಗಳ ಸಹಾಯದಿಂದ ನೀರು ಹಾಯಿಸಿ ಬೆಳೆ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರ ತೋಟದ ಬಾವಿಗಳಲ್ಲಿಯೂ ನೀರು ದಿಢೀರ್ ಕಡಿಮೆಯಾಗಿದ್ದು, ಗದ್ದೆಗೆ ನೀರು ಹಾಯಿಸಿ ಬೆಳೆ ಉಳಿಸುವಲ್ಲಿಯೂ ಸಮಸ್ಯೆಯಾಗಿದೆ ಎನ್ನುತ್ತಾರೆ ದ.ಕ. ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಚ್.ಧನಕೀರ್ತಿ ಬಲಿಪ.

ವಿಜಯವಾಣಿ ಜತೆ ಮಾತನಾಡಿದ ಸುಳ್ಯ ಮರ್ಕಂಜದ ರೈತ ಪಿ.ಜಗದೀಶ್ ರೈ, ತಾನು 25 ವರ್ಷದಿಂದ ಭತ್ತ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಬಯಲು ಗದ್ದೆಗೆ ಪಂಪ್‌ನಲ್ಲಿ ನೀರು ಹಾಯಿಸುತ್ತಿದ್ದೇನೆ. ಬೆಟ್ಟು ಗದ್ದೆ ಸಂಪೂರ್ಣ ಒಣಗಿ ಹೋಗಿದ್ದು, ತೋಡುಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಹರಿಯುತ್ತಿರುವ ಹಾಗೆ ನೀರು ಹರಿಯುತ್ತಿದೆ. ಬೆಂಕಿರೋಗದ ಕಾಣಿಸಿಕೊಳ್ಳುವ ಭೀತಿಯೂ ಇದೆ ಎಂದು ತಿಳಿಸಿದ್ದಾರೆ.

ತೆನೆ ಬಿಡದೆ ಆತಂಕ: ಸುರತ್ಕಲ್ ಸಮೀಪದ ಮುಕ್ಕ ಆರಂದು, ಕೃಷ್ಣಾಪುರ ಪರಿಸರದಲ್ಲಿ 10 ದಿನಗಳಿಂದ ನೀರು ಬತ್ತಿ ಹೋದ ಕಾರಣ ಗದ್ದೆಗಳು ಒಣಗಿವೆ. ಈಗ ತೆನೆ ಬಿಟ್ಟಿರುವ ಅಲ್ಪಸ್ವಲ್ಪ ಫಸಲು ಕೂಡ ಜಳ್ಳಾಗುವ ಸಾಧ್ಯತೆ ಹೆಚ್ಚಾಗಿದೆ. ತೆನೆ ಬಿಡದಿರುವ ಪೈರಿನ ಬೆಳವಣಿಗೆ ಏನಾಗುವುದೋ ಎಂಬ ಆತಂಕ ರೈತರಲ್ಲಿದೆ.

ಅತಿವೃಷ್ಟಿಯಿಂದ ಒಮ್ಮೆ ಪೈರು ನಾಶವಾದ ಬಳಿಕ ಮತ್ತೆ ನಾಟಿ ನಡೆಸಲಾಗಿದ್ದು, ಈಗ ತೆನೆ ಬಿಟ್ಟಿರುವ ಬೆಳೆ ಅ.15ರ ಬಳಿಕ ಕಟಾವಿಗೆ ಬರಬೇಕಿತ್ತು. ತೆನೆ ಬಿಡುವ ಹಂತದಲ್ಲಿ ಬುಡದಲ್ಲಿಯೇ 10 ದಿನದಿಂದ ನೀರಿಲ್ಲ. ಬುಡದಲ್ಲಿ ನೀರಿದ್ದರೂ ಪೈರಿಗೆ ಮಳೆ ಸಿಂಚನ ಅಗತ್ಯ ಎನ್ನುತ್ತಾರೆ ಆರಂದ್‌ನ ದಾಮೋದರ ದೇವಾಡಿಗ.

ಸೂರಿಂಜೆ ಆಸುಪಾಸು ಭತ್ತದ ಪೈರು ಮಳೆ ಕೊರತೆಯಿಂದ ಕೆಂಪಾಗಿದೆ. ಪಂಪ್ ಮೂಲಕ ನೀರು ಬಿಟ್ಟರೂ ಮಳೆ ನೀರು ಪೈರಿನ ಮೇಲೆ ಬೀಳದೆ ಪ್ರಯೋಜನವಿಲ್ಲ ಎಂದು ಸೂರಿಂಜೆ ಪಂಚಾಯಿತಿ ಉಪಾಧ್ಯಕ್ಷ ಜಿತೇಂದ್ರ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

‘ಮಳೆ ಕಡಿಮೆಯಿಂದ ಭತ್ತದ ಬೆಳೆಗೆ ಸಮಸ್ಯೆಯಿಲ್ಲ ಗದ್ದೆಗಳಲ್ಲಿ ಇನ್ನೂ ತೇವಾಂಶವಿದೆ. ಆದರೆ ತೆನೆ ಹೂ ಬಿಡುವ ಹಂತಕ್ಕೆ ಬಂದಿರುವ ಗದ್ದೆಗಳಲ್ಲಿ ನೀರು ಇರಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಇಮಾನ್ಯುವೆಲ್ ಆ್ಯಂಟನಿ ತಿಳಿಸಿದ್ದಾರೆ.

ದ.ಕ. ಶೇ.30, ಉಡುಪಿ ಶೇ.15: ಮಂಗಳೂರು/ಉಡುಪಿ: ಬೆಟ್ಟು ಗದ್ದೆಯಲ್ಲಿದ್ದ ನೀರು ಬಿಸಿಲಿಗೆ ಆವಿಯಾಗಿದೆ. ಪೈರು ತೆನೆಕಟ್ಟುವ ಸಮಯದಲ್ಲಿ ಅಗತ್ಯವಾಗಿರುವ ನೀರು ಈ ರೀತಿ ಆರಿ ಹೋಗಿರುವುದರಿಂದ ದ.ಕ. ಜಿಲ್ಲೆಯ ಶೇ.30ರಷ್ಟು ಗದ್ದೆಗಳಲ್ಲಿ ಬೆಳೆನಾಶ ಭೀತಿ ಇದ್ದು, ವಾರ್ಷಿಕ ಇಳುವರಿ ಕುಂಠಿತವಾಗಲಿದೆ ಎಂದು ಅಂದಾಜಿಸಲಾಗಿದೆ. ‘ಭತ್ತ ತೆನೆಕಟ್ಟುವ ಈ ಸಮಯದಲ್ಲಿ ನೀರಿನ ಅವಶ್ಯಕತೆಯಿದೆ. ಆದರೆ ಈ ಬಾರಿ ಅಬ್ಬರಿಸಿದ ಮಳೆ ಒಮ್ಮೆಲೇ ಸ್ತಬ್ಧವಾಗಿರುವುದರಿಂದ ಭತ್ತದ ಗದ್ದೆಯಲ್ಲಿದ ನೀರು ಇಂಗಿ ಹೋಗಿದೆ. ಸದ್ಯಕ್ಕೆ ನಮ್ಮಲ್ಲಿ ಭತ್ತಕ್ಕೆ ಸಮಸ್ಯೆಯಾಗಿಲ್ಲ, ಬೆಟ್ಟುಗದ್ದೆಗಳಲ್ಲಿಯೂ ನೀರಿದೆ. ನೀರು ಕಡಿಮೆಯಿರುವರು ಪಂಪ್ ಮೂಲಕ ನೀರು ಹರಿಸಿ ಬೆಳೆ ರಕ್ಷಣೆಯಲ್ಲಿ ತೊಡಗಿದ್ದಾರೆ’ ಎಂದು ಸುಳ್ಯ ಅರಂತೋಡು ರೈತ ಪಿ.ಬಿ.ಪ್ರಭಾಕರ ರೈ ಪ್ರತಿಕ್ರಿಯಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಶೇ.10ರಿಂದ 15ರಷ್ಟು ಭತ್ತದ ಇಳುವರಿ ಕುಂಠಿತವಾಗಬಹುದು ಎಂದು ಇಲಾಖೆ ಅಂದಾಜಿಸಿದೆ.

ಮಳೆ ಕೊರತೆಯಿಂದ ಪೈರಿನ ಬೆಳವಣಿಗೆ ಕುಸಿತವಾಗಿದೆ. ಮಳೆ ಕೈಕೊಟ್ಟ ಕಾರಣ ಈ ವರ್ಷ ಎಣೇಲು ಕೃಷಿಯಲ್ಲಿ ರೈತರಿಗೆ ಪೂರ್ಣ ನಷ್ಟವಾಗುವ ಸಾಧ್ಯತೆಯಿದೆ. ಸರ್ಕಾರ ರೈತರಿಗೆ ನೀಡುತ್ತಿರುವ ಪರಿಹಾರ, ಪ್ರೋತ್ಸಾಹ ಸಾಲದು. ಈ ಬಗ್ಗೆ ಅಧಿಕಾರಿಗಳು, ಜನನಪ್ರತಿನಿಧಿಗಳು ಗಮನಹರಿಸಬೇಕು.
|ಕೊಡಿಪಾಡಿ ಗೋಪಾಲಕೃಷ್ಣ ಪ್ರಭು, ಸುರತ್ಕಲ್, ಪ್ರಶಸ್ತಿ ಪುರಸ್ಕೃತ ಭತ್ತ ಕೃಷಿಕ

ಭತ್ತದ ಕೃಷಿಗೆ ಬೆಂಕಿರೋಗ ತಗುಲಿದೆ. ಗದ್ದೆಗೆ ನೀರು ಹರಿಸಿ ತೇವಾಂಶ ಕೊಡಬೇಕು. ಜತೆಗೆ 100 ಲೀಟರ್ ನೀರಿಗೆ 200 ಎಂ.ಎಲ್. ಎಕಾಲೆಕ್ಸ್, 100 ಗ್ರಾಂ ಡಯಾಸ್ಟಿಕ್ ಬೆರೆಸಿ ಸಿಂಪಡಿಸಿದರೆ ತಾತ್ಕಾಲಿಕ ಶಮನ ಸಾಧ್ಯ. ಹಿಂಗಾರು ಮಳೆ ಉತ್ತಮವಾಗಿದ್ದರೆ ಸಮಸ್ಯೆ ಪರಿಹಾರವಾಗಲಿದೆ.
|ಧನಂಜಯ, ಹಿರಿಯ ವಿಜ್ಞಾನಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ

ಪೈರು ಹೂ ಬಿಡುವ ವೇಳೆ ನೀರು ಅತಿ ಅಗತ್ಯ. ಆದರೆ ಈ ಬಾರಿ ಭತ್ತದ ಕೃಷಿಗೆ ಬೆಂಕಿ ರೋಗ ಆವರಿಸಿದೆ. ಇದರಿಂದ ಇಳುವರಿ ಕುಂಠಿತವಾಗಲಿದೆ. ಈ ಬಗ್ಗೆ ಕೃಷಿ ಇಲಾಖೆ ಭತ್ತದ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು.
|ಮೋಹನ್‌ರಾಜ್, ಸಹಾಯಕ ಕೃಷಿ ನಿರ್ದೇಶಕ, ಉಡುಪಿ