ನಷ್ಟದ ನೋವು ಮರೆಸಿದ ಹೂವು

ಹಲವು ರೈತರು ಇನ್ನೂ ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ನೆಚ್ಚಿಕೊಂಡಿದ್ದಾರೆ. ಅದರಲ್ಲೂ ಪುಷ್ಪಕೃಷಿ ಎಂದರೆ ಅಷ್ಟಕ್ಕಷ್ಟೇ. ದೇವರ ಪೂಜೆ, ಪುನಸ್ಕಾರಕ್ಕೆಂದು ಒಂದಿಷ್ಟು ಹೂ-ಗಿಡ ಬೆಳೆಯುತ್ತಾರೆಯೇ ಹೊರತು, ಸಂಪೂರ್ಣ ಕೃಷಿ ಕೈಗೊಳ್ಳಲು ಮನಸ್ಸು ಮಾಡುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಹೂವಿನ ಬೇಡಿಕೆಗೆ ತಕ್ಕಂತೆ ಬೆಳೆ ಇಲ್ಲದಿರುವುದರಿಂದ ದರವೂ ಹೆಚ್ಚುತ್ತಿದೆ. ಆದರೆ, ಹೂಬೆಳೆಯಲ್ಲಿನ ಲಾಭ ಮನಗಂಡು ನಾಲ್ಕು ಎಕರೆಯಲ್ಲಿ ವಿವಿಧ ಬಗೆಯ ಅಂದಚೆಂದದ ಹೂ ಬೆಳೆದು ಈ ಕೃಷಿಯಲ್ಲಿಯೂ ಲಕ್ಷಾಂತರ ರೂ. ಲಾಭ ಪಡೆಯಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಕೊಪ್ಪಳ ಜಿಲ್ಲೆಯ ಬೆಳಗಟ್ಟಿ ಗ್ರಾಮದ ರೈತ ನಿಂಗಪ್ಪ ಚಿಲವಾಡಗಿ.

‘ನಮ್ದು ಬಿಸ್ಲ್ ನಾಡು. ಮಳಿ ಆದ್ರ್ ಆತು. ಇಲ್ಲಂದ್ರ್ ಇಲ್ಲ. ಹಂಗಾಗಿ ಹೊಟ್ಟಿ-ಬಟ್ಟಿಗಾಗಿ ಬರೀ ಕಾಳ ಕಡಿ ಬೆಳಕೊಂತ ಬಂದಿದ್ವಿ. ಒಮ್ಮೊಮ್ಮೆ ಮಳಿ ಪೂರ್ತಿ ಕೈ ಕೊಟ್ಟ ವರಸ್ ಒಣ ಬೇಸಾಯದ ಬೆಳಿನೂ ಒಣಗಿ, ಇದಕ್ ಮಾಡಿದ ಖರ್ಚೂ ಹೊಳ್ಳಿ ಬರ್ತಿದ್ದಿಲ್ಲ. ಬೆಳಿಗಾಗಿ ಮಾಡಿದ ಸಾಲಾನೂ ತೀರಿಸಾಕ್ ಆಗ್ತಿದ್ದಿಲ್ಲ. ಸಾಕಷ್ಟ್ ಜಮೀನು ಇದ್ರೂ ಏನ್ ಮಾಡೋದ್? ಹಂಗಾಗಿ ಒಕ್ಕಲತನ್ ಅಂದ್ರ್ ಸಾಕಾಗಿಹೋಗಿತ್. ಆಗ್ ನಮ್ಗ್ ಒಮ್ಮೆ ಹೂ ಬೆಳದ್ ನೋಡ್​ಬೇಕ್ ಅಂತ್ ಅನ್ನಿಸ್ತ್. ಯಾಕಂದ್ರ್ ಹೆಚ್ಚ್ ನೀರ್ ಇಲ್ದನೂ ಹೂ ಬೆಳಿ ಬರೆôತಿ ಅಂತ್ ಹೂ ಬೆಳ್ಯಾಕ್ ಪ್ರಾರಂಭಿಸಿದ್ವಿ. ಈಗ ಹದನಾಲ್ಕ್ ವರಸ್ ಆತ್. ಒಂದಿಲ್ಲೊಂದು ಹೂ ಬೆಳಕೊಂತ್ ಬರಾಕ್ ಹತ್ಯೇವ್. ಹೂ ಬೆಳಿಯಿಂದ ವರಸ್​ಪೂರ್ತಿ ನಮ್ಗ್ ರೊಕ್ಕ್ ಬರೆôತಿ. ಯಾವ್ದಕ್ಕೂ ಕಡಿಮಿ ಇಲ್ಲ. ಇತ್ತಿತ್ಲಾಗಿ ಮತ್ ಹೆಚ್ಚ್ ಹೂ ಹಚ್ಚೀವಿ. ಈಗ ಬರೋಬ್ಬರಿ ನಾಲ್ಕ್ ಎಕರೆದಾಗ್ ನಾಲ್ಕಾರ್ ತರಹದ ಹೂ ಜೋರ್ ಬೆಳೆದಾವ್.. ಕೃಷಿ ಅಂದ್ರ್ ಖುಷಿ ಕಾಯ್ಕಾ ಅಂತ್ ಅನಿಸೇತಿ…’

– ಹೀಗೆ ನಾಲ್ಕು ಎಕರೆ ಪುಷ್ಪಕೃಷಿಯಲ್ಲಿ ಯಶ ಕಂಡಿರುವ ಕೊಪ್ಪಳ ಜಿಲ್ಲೆಯ ಬೆಳಗಟ್ಟಿ ಗ್ರಾಮದ ರೈತ ನಿಂಗಪ್ಪ ಚಿಲವಾಡಗಿ ಯಶೋಗಾಥೆಯನ್ನು ಬಿಚ್ಚಿಟ್ಟರು. ಕೃಷಿಕಾರ್ಯಕ್ಕೆ ಇವರ ಮೂವರು ಸಹೋದರರು ಸಾಥ್ ನೀಡಿದ್ದಾರೆ.

ಕೃಷಿ ಇವರ ಮೂಲ ಕಸುಬು. 45 ಎಕರೆ ಜಮೀನು ಇದೆ. ಇಪ್ಪತ್ತು ಎಕರೆ ಖುಷ್ಕಿ ಭೂಮಿಯಲ್ಲಿ ಮಳೆಯಾಶ್ರಿತವಾಗಿ ಹತ್ತಿ, ಜೋಳ, ಗೋವಿನ ಜೋಳ, ಶೇಂಗಾ, ಕಡಲೆ, ಸೂರ್ಯಕಾಂತಿ, ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಯುತ್ತಾರೆ. ಇಪ್ಪತ್ತು ಎಕರೆಯಲ್ಲಿ ನೀರಾವರಿಯಾಗಿ ಕಬ್ಬು, ಬಾಳೆ ಇತರ ಬೆಳೆ ಬೆಳೆಯುತ್ತಾರೆ. ಹೆಚ್ಚು ಜಮೀನು ಇದ್ದರೂ ಸರಿಯಾಗಿ ಮಳೆ ಬಾರದೆ, ಬೆಳೆ ಇಲ್ಲದೆ ಹೊಲ ಇದ್ದೂ ಇಲ್ಲದಂತಹ ಪರಿಸ್ಥಿತಿ ಇವರದ್ದಾಗಿತ್ತು. ಒಮ್ಮೊಮ್ಮೆ ಬೆಳೆಗೆ ಮಾಡಿದ ಖರ್ಚೂ ಮರಳಿ ಬರುತ್ತಿರಲಿಲ್ಲ. ಬೆಳೆಗಾಗಿ ಮಾಡಿದ ಸಾಲ ತೀರಿಸಲೂ ಆಗದೆ, ಬದುಕು ಕಷ್ಟಕರವಾಗಿ ಸಾಗಿತ್ತು. ಅದರಲ್ಲೂ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತ ಸಾಗಿದ್ದರಿಂದ ಅಂತರ್ಜಲ ಮಟ್ಟ ಕುಸಿದು ತೆರೆದ ಬಾವಿಗಳು ಬತ್ತಿದವು. ಇದ್ದ 4-6 ಬೋರ್​ವೆಲ್​ಗಳಲ್ಲಿನ ನೀರೂ ಕಡಿಮೆಯಾಯಿತು. ಆಗ ತಾವು ಬೆಳೆಯುತ್ತಿದ್ದ ಸಾಂಪ್ರದಾಯಿಕ ಬೆಳೆಗಳಿಗೆ ಪರ್ಯಾಯವಾಗಿ ಕಡಿಮೆ ನೀರಿನಲ್ಲಿಯೇ ಹೆಚ್ಚು ಬೆಳೆಯುವ ಹಾಗೂ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ನೀಡುವ ಪುಷ್ಪಕೃಷಿಯನ್ನೊಮ್ಮೆ ಮಾಡಿ ನೋಡಬೇಕೆಂದು ಮುಂದಾದರು. ಈಗ ಬರೋಬ್ಬರಿ ನಾಲ್ಕು ಎಕರೆಯಲ್ಲಿ ವಿವಿಧ ಬಗೆಯ ಹೂ ಬೆಳೆದಿದ್ದು, ಪ್ರತಿವರ್ಷ ಆರು ಲಕ್ಷ ರೂ.ಗಳಿಗೂ ಅಧಿಕ ಲಾಭ ಪಡೆಯುತ್ತಿದ್ದಾರೆ.

ನಿರೀಕ್ಷೆ ಹುಸಿಯಾಗಲಿಲ್ಲ..: ಮಳೆ ಕೈ ಕೊಟ್ಟರೂ, ಸತತ ಬರಗಾಲ ಬಿದ್ದರೂ ಬೋರ್​ವೆಲ್​ಗಳಲ್ಲಿನ ಅಲ್ಪಸ್ವಲ್ಪ ನೀರಿನ ಆಸರೆಯಿಂದ ಹನಿ ನೀರಾವರಿ ಅಳವಡಿಸಿಕೊಂಡು ಪ್ರಾರಂಭದಲ್ಲಿ ಒಂದು ಎಕರೆ ಕನಕಾಂಬರ (ಅಬ್ಬಲಿಗೆ) ಹೂ ಬೆಳೆದರು. ಇದು ಭರ್ಜರಿ ಬೆಳೆ ಬಂದು ಅಧಿಕ ಲಾಭ ನೀಡಿತು. ಬಳಿಕ ಇದರಲ್ಲಿ ಮಿಶ್ರ ಬೆಳೆಯಾಗಿ ನುಗ್ಗೆ ಗಿಡ ಬೆಳೆದರು. ಇದೂ ಮತ್ತಷ್ಟು ಆರ್ಥಿಕ ಚೇತರಿಕೆ ನೀಡಿತು. ಹೂಬೆಳೆಯಲ್ಲಿನ ಲಾಭವನ್ನು ಮನಗಂಡು 14 ವರ್ಷದಿಂದ ಪುಷ್ಪ ಕೃಷಿಯಲ್ಲಿ ತೊಡಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಬೇರೆ ಬೆಳೆಗಳಿಗೆ ಹೆಚ್ಚು ನೀರು ಬೇಕು. ಅಲ್ಲದೆ, ಕಳೆ ತೆಗೆಯಲು ಕಾರ್ವಿುಕರ ವೆಚ್ಚ, ರಸಗೊಬ್ಬರ, ಕ್ರಿಮಿನಾಶಕ ಸಿಂಪಡಣೆ ಸೇರಿ ಬೆಳೆ ನಿರ್ವಹಣೆಗೂ ಅಧಿಕ ಹಣ ವೆಚ್ಚವಾಗುತ್ತದೆ. ಆದ್ದರಿಂದ ಪ್ರಾರಂಭದಲ್ಲಿ ಒಂದು ಎಕರೆ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಪುಷ್ಪಕೃಷಿಯನ್ನು ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ವಿಸ್ತರಿಸಿದ್ದಾರೆ.

ಕನಕಾಂಬರ ಬೆಳೆ: ಒಂದು ಎಕರೆಯಲ್ಲಿ ಕನಕಾಂಬರ ಹೂ ಬೆಳೆದಿದ್ದಾರೆ. ಕನಕಾಂಬರವನ್ನು ಒಮ್ಮೆ ಸಸಿ ನಾಟಿ ಮಾಡಿ ಮೂರು ವರ್ಷ ಬೆಳೆ ತೆಗೆಯಬಹುದು. 16 ಸಾವಿರ ಗಿಡಗಳಿವೆ. ಇದರಲ್ಲಿ ಹೂವಿಗೆ ನೆರಳಾಗಲು ಮಿಶ್ರ ಬೆಳೆಯಾಗಿ 400 ನುಗ್ಗೆ ಗಿಡ ಬೆಳೆದಿದ್ದಾರೆ. ಮೂರು ವರ್ಷಗಳವರೆಗೆ ನುಗ್ಗೆ ಬೆಳೆಯಬಹುದು. ನುಗ್ಗೆಯಿಂದಲೂ ಇವರಿಗೆ ಉತ್ತಮ ಆದಾಯ ಕೈ ಸೇರುತ್ತಿದೆ. ಪ್ರಾರಂಭದಲ್ಲಿ ಕನಕಾಂಬರ ಬೆಳೆಯಲು 25 ಸಾವಿರ ರೂ. ಖರ್ಚು ತಗಲುತ್ತದೆ. ಕನಕಾಂಬರ ಪ್ರತಿದಿನ ಐದು ಕೆಜಿಗೂ ಹೆಚ್ಚು ಇಳುವರಿ ನೀಡುತ್ತಿದೆ. ಕೆಜಿಗೆ 250-300 ರೂ. ದರವಿದೆ. ಪ್ರತಿ ತಿಂಗಳು 35 ಸಾವಿರ ರೂ. ಆದಾಯವಿದ್ದು, ಖರ್ಚುವೆಚ್ಚ ತೆಗೆದರೂ 25 ಸಾವಿರ ರೂ. ಲಾಭವಾಗುತ್ತಿದೆ.

ಬಳ್ಳಾರಿ ಮಲ್ಲಿಗೆ: ಒಂದು ಎಕರೆಯಲ್ಲಿ ಬಳ್ಳಾರಿ ಮಲ್ಲಿಗೆ ಬೆಳೆದಿದ್ದಾರೆ. ಪ್ರಾರಂಭದಲ್ಲಿ ಸಸಿ ನಾಟಿ, ಗೊಬ್ಬರ, ಕೂಲಿ ವೆಚ್ಚ ಸೇರಿ 25 ಸಾವಿರ ರೂ.ಗಳಷ್ಟು ಖರ್ಚು ಬಂದಿತ್ತು. ವರ್ಷದಲ್ಲಿ ಆರು ತಿಂಗಳು ಹೂ ನೀಡುತ್ತದೆ. ಪ್ರತಿದಿನ 5-6 ಕೆಜಿ ಇಳುವರಿ ಇದೆ. ಒಂದು ಕೆಜಿಗೆ 250-300 ರೂ. ಇದೆ. ಪ್ರತಿ ತಿಂಗಳು 35 ಸಾವಿರ ರೂ. ಆದಾಯವಿದೆ. ಖರ್ಚುವೆಚ್ಚ ತೆಗೆದರೂ 25 ಸಾವಿರ ರೂ. ಲಾಭ ದೊರೆಯುತ್ತಿದೆ.

ಕಾಕಡಾ ಮಲ್ಲಿಗೆ: ಒಂದು ಎಕರೆಯಲ್ಲಿ ಕಾಕಡಾ ಮಲ್ಲಿಗೆ ಬೆಳೆದಿದ್ದಾರೆ. ಪ್ರಾರಂಭದಲ್ಲಿ ಸಸಿ ನಾಟಿ ಇತರೆ ವೆಚ್ಚ ಸೇರಿ 20 ಸಾವಿರ ರೂ. ಖರ್ಚು ಬಂತು. ಇದು ವರ್ಷದಲ್ಲಿ ಎಂಟು ತಿಂಗಳು ಹೂ ನೀಡುತ್ತಿದ್ದು, ಒಂದು ಕೆಜಿಗೆ 250-300 ರೂ.ಗಳಿಗೆ ಮಾರಾಟವಾಗುತ್ತಿದೆ. ತಿಂಗಳಿಗೆ 35 ಸಾವಿರ ರೂ. ಆದಾಯ ದೊರೆಯುತ್ತಿದ್ದು, ಖರ್ಚುವೆಚ್ಚ ತೆಗೆದರೂ ಪ್ರತಿ ತಿಂಗಳು 25 ಸಾವಿರ ರೂ. ಲಾಭ ಸಿಗುತ್ತಿದೆ.

ಗಲಾಟೆ ಹೂ: ಅರ್ಧ ಎಕರೆಯಲ್ಲಿ ಗಲಾಟೆ ಹೂ ಬೆಳೆದಿದ್ದಾರೆ. ಒಂಭತ್ತು ತಿಂಗಳ ಬೆಳೆಯಾದ ಇದು ವರ್ಷದಲ್ಲಿ ಆರು ತಿಂಗಳು ಹೂ ನೀಡುತ್ತದೆ. ಪ್ರತಿದಿನ 30 ಕೆಜಿ ಕೊಯ್ಲಿಗೆ ಬರುತ್ತದೆ. ಕೆಜಿಗೆ ಮಾರಾಟ ದರ 30-40 ರೂ. ಪ್ರತಿ ತಿಂಗಳು 30 ಸಾವಿರ ರೂ. ಆದಾಯ ಬರುತ್ತಿದ್ದು, 10 ಸಾವಿರ ರೂ. ವೆಚ್ಚವಾದರೂ 20 ಸಾವಿರ ರೂ. ಲಾಭವಾಗುತ್ತಿದೆ.

ಪನ್ನೀರ ಎಲೆ: 20 ಗುಂಟೆಯಲ್ಲಿ ಪನ್ನೀರ ಎಲೆ ಬೆಳೆದಿದ್ದಾರೆ. ಪನ್ನೀರ ಎಲೆಯನ್ನು ಹೂವಿನ ಮಾಲೆ ಸುಂದರಗೊಳ್ಳಲು ಮಧ್ಯೆ ಜೋಡಿಸುತ್ತಾರೆ. ಆದ್ದರಿಂದ ಇದಕ್ಕೂ ಹೆಚ್ಚಿನ ಬೇಡಿಕೆ ಇದೆ. ಕೆಜಿಗೆ 40-45 ರೂ. ದರವಿದೆ. ಪ್ರತಿದಿನ 15 ಕೆಜಿ ಹರಿಯುತ್ತಾರೆ. ಪ್ರತಿ ತಿಂಗಳು 18 ಸಾವಿರ ರೂ. ಆದಾಯವಿದೆ. ಖರ್ಚು ವೆಚ್ಚ ತೆಗೆದರೂ 12 ಸಾವಿರ ರೂ. ಲಾಭ.

ನಾಟಿಪದ್ಧತಿ ವಿಧಾನ: ಒಂದು ಎಕರೆಯಲ್ಲಿ 500 ಮಲ್ಲಿಗೆ ಗಿಡ ಬೆಳೆಸಿದ್ದಾರೆ. ಸಾಲಿನಿಂದ ಸಾಲಿಗೆ ಎಂಟು ಅಡಿ ಅಂತರ ಹಾಗೂ ಗಿಡದಿಂದ ಗಿಡಕ್ಕೆ ಎಂಟು ಅಡಿ ಅಂತರವಿದೆ. ಬಳ್ಳಾರಿ ಮಲ್ಲಿಗೆಯ ಸಸಿಯನ್ನು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಿಂದ ತಂದು ನಾಟಿ ಮಾಡಿದ್ದಾರೆ. ಒಂದು ವರ್ಷದ ಬಳಿಕ ಹೂ ಬಿಡಲು ಪ್ರಾರಂಭಿಸುತ್ತದೆ. ಸರಿಯಾಗಿ ನಿರ್ವಹಣೆ ಮಾಡಿದರೆ 25 ವರ್ಷಕ್ಕೂ ಹೆಚ್ಚು ಕಾಲ ಬೆಳೆ ಬರುತ್ತದೆ. ಬೀಜದಿಂದ ಸಸಿ ತಯಾರಿಸಿ ಕನಕಾಂಬರ ಸಸಿ ನಾಟಿ ಮಾಡಿದ್ದಾರೆ. ಬೀಜದಿಂದ ಬೀಜಕ್ಕೆ ಒಂದು ಅಡಿ ಅಂತರವಿದೆ. ಸಾಲಿನಿಂದ ಸಾಲಿಗೆ ಎರಡು ಅಡಿ ಅಂತರವಿದೆ. ಸಸಿ ನಾಟಿ ಮಾಡಿದ ಮೂರು ತಿಂಗಳಿಗೆ ಹೂ ನೀಡಲು ಪ್ರಾರಂಭಿಸುತ್ತದೆ. ಒಂಭತ್ತು ತಿಂಗಳ ಬೆಳೆಯಾಗಿದ್ದು, ಆರು ತಿಂಗಳವರೆಗೆ ಹೂ ನೀಡುತ್ತದೆ. ತುಮಕೂರಿನ ಖಾಸಗಿ ನರ್ಸರಿಯಿಂದ ಪನ್ನೀರ ಸಸಿ ತಂದು ನಾಟಿ ಮಾಡಿದ್ದಾರೆ. ಇದು ಸಾಲಿನಿಂದ ಸಾಲಿಗೆ ಹಾಗೂ ಗಿಡದಿಂದ ಗಿಡಕ್ಕೆ ಎರಡು ಅಡಿಗಳ ಅಂತರವಿದೆ.

ಬೆಳೆ ನಿರ್ವಹಣೆ ಹೀಗೆ: ರೈತ ನಿಂಗಪ್ಪ ಅವರದ್ದು ಹೂಗಿಡಗಳನ್ನು ಬೆಳೆಯಲು ಪೂರಕವಾಗಿರುವ ಕೆಂಪು ಮಸಾರಿ ಭೂಮಿ. ಇದರಿಂದ ಇಲ್ಲಿ ಹೂಬೆಳೆ ಚೆನ್ನಾಗಿ ಬರುತ್ತದೆ. ಜಾನುವಾರುಗಳ ಕೊಟ್ಟಿಗೆ ಗೊಬ್ಬರ ಹಾಗೂ ಕುರಿಗೊಬ್ಬರ ಮಿಶ್ರಣ ಮಾಡಿ ಭೂಮಿಯನ್ನು ಹದಗೊಳಿಸಿ ಸಸಿ ನಾಟಿ ಮಾಡುತ್ತಾರೆ. ಸಾವಯವ ವಿಧಾನ ಹಾಗೂ ಕ್ರಿಮಿನಾಶಕದಿಂದ ಬೆಳೆಗಳಿಗೆ ಬರುವ ರೋಗವನ್ನು ನಿಯಂತ್ರಿಸುತ್ತಾರೆ. ಹನಿ ನೀರಾವರಿಯ ಮೂಲಕ ಅಗತ್ಯವಿರುವಷ್ಟು ನೀರನ್ನು ಮಾತ್ರ ನೀಡುತ್ತಾರೆ. ಪ್ರತಿವರ್ಷ ಹೂಗಿಡಗಳಲ್ಲಿನ ಹೆಚ್ಚಿನ ಬಳ್ಳಿ, ಟೊಂಗೆಗಳನ್ನು ಕಟಾವು ಮಾಡುತ್ತಾರೆ. ಇದರಿಂದ ಹೂವಿನ ಗಿಡಗಳಿಗೆ ಅಗತ್ಯ ಗಾಳಿ, ಬೆಳಕು ದೊರೆತು ಮತ್ತಷ್ಟು ಸಮೃದ್ಧವಾಗಿ ಬೆಳೆದು ಅಪಾರ ಮೊಗ್ಗು, ಹೂ ಬಿಡುತ್ತವೆ. ಹೂ ಬೆಳೆದ ಪ್ರದೇಶದಲ್ಲಿ ಒಂದೆರಡು ವರ್ಷ ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತಾರೆ. ಮೊದಲು ಹೂ ಬೆಳೆದ ಜಮೀನಿನ ಫಲವತ್ತತೆ ವೃದ್ಧಿಸುವುದರಿಂದ ಬೇರೆ ಬೆಳೆಗಳು ಕೂಡ ಭರ್ಜರಿಯಾಗಿ ಬರುತ್ತವೆ.

ವ್ಯಾಪಾರಸ್ಥರೊಂದಿಗೆ ಒಪ್ಪಂದ: ಪೂಜೆ, ಶುಭಕಾರ್ಯದ ವೇಳೆ ಹೂಗಳಿಗೆ ಬೇಡಿಕೆ ಹೆಚ್ಚುತ್ತದೆ. ಅಲ್ಲದೆ, ಮಲ್ಲಿಗೆಯನ್ನು ಸುಗಂಧದ್ರವ್ಯ, ಇತರೆ ವಸ್ತುಗಳ ತಯಾರಿಕೆಗೂ ಬಳಸಲಾಗುತ್ತದೆ. ಇದರಿಂದ ಹೂ ಬೆಳೆ ಉತ್ಪಾದನೆಗಿಂತಲೂ ಹೆಚ್ಚು ಬೇಡಿಕೆ ಇದೆ. ಹೀಗಾಗಿ ದರವೂ ಹೆಚ್ಚಿದೆ. ಇವರು ಅಪಾರ ಪ್ರಮಾಣದಲ್ಲಿ ಹೂ ಬೆಳೆಯುತ್ತಿರುವುದರಿಂದ ಹೂ ಮಾರಾಟಗಾರರೊಂದಿಗೆ ಕೆಜಿಗೆ ಇಂತಿಷ್ಟು ದರ ಎಂದು ಮೊದಲೇ ಒಪ್ಪಂದ ಮಾಡಿಕೊಂಡು ವರ್ಷವಿಡೀ ಮಾರುತ್ತಾರೆ. ಇದರಿಂದಾಗಿ ದರ ಇಳಿಕೆಯಾದರೂ ನಷ್ಟವಿಲ್ಲ. ಹೀಗೆ ಇವರಿಗೆ ಪ್ರತಿ ವರ್ಷ ಲಾಭವೇ ಆಗುತ್ತಿದೆ.

ಸಂಪರ್ಕ: 9945873113

ಪುಷ್ಪಕೃಷಿ ಇತರ ಬೆಳೆಗಳಿಗಿಂತ ಹೆಚ್ಚು ಲಾಭ ತಂದುಕೊಟ್ಟಿದೆ. ಬೇರೆ ಬೆಳೆಗಳಿಗೆ ಹೋಲಿಸಿದಲ್ಲಿ ಖರ್ಚು ಕಡಿಮೆ, ಲಾಭ ಹೆಚ್ಚು. ಅಲ್ಲದೆ, ಪ್ರತಿವರ್ಷ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ನೀರಿನ ಕೊರತೆ ಇದ್ದೇ ಇದೆ. ಆದ್ದರಿಂದ ಹನಿನೀರಾವರಿಯ ಮೂಲಕ ಬರಗಾಲದಲ್ಲಿಯೂ ಹೂ ಬೆಳೆಯುತ್ತೇವೆ. ಹೂ ಬೆಳೆಯಿಂದ ನಿರಂತರ ಹಣ ದೊರೆಯುತ್ತಿದ್ದು, ಕುಟುಂಬನಿರ್ವಹಣೆಗೆ ಅನುಕೂಲವಾಗಿದೆ.

| ನಿಂಗಪ್ಪ ಚಿಲವಾಡಗಿ, ಬೆಳಗಟ್ಟಿ ಗ್ರಾಮದ ಪುಷ್ಪಕೃಷಿಕ