More

    ಸೋಲು-ಗೆಲುವು ಲೆಕ್ಕಾಚಾರಕ್ಕೆ ನಾಳೆ ತೆರೆ: ಬಯಲಾಗಲಿದೆ 76 ಅಭ್ಯರ್ಥಿಗಳ ಹಣೆಬರಹ

    ಚಿತ್ರದುರ್ಗ: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಮೇ 13ರಂದು ಪ್ರಕಟವಾಗಲಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಗಳ ಮತ ಎಣಿಕೆ ಕಾರ‌್ಯ ನಗರದ ಸರ್ಕಾರಿ ಸೈನ್ಸ್ ಕಾಲೇಜು ಹೊಸ ಕಟ್ಟಡದಲ್ಲಿ ನಡೆಯಲಿದೆ.

    ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆರು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ 76 ಅಭ್ಯರ್ಥಿ ಗಳ ಹಣೆಬರಹ ಬಯಲಾಗಲಿದ್ದು, ಹಲವು ದಿನಗಳಿಂದ ಸತತವಾಗಿ ನಡೆಯುತ್ತಿದ್ದ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ತೆರೆ ಬೀಳಲಿದೆ.

    ಬೆಳಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂ. ತೆರೆಯಲಿದ್ದು, 8ಕ್ಕೆ ಮತ ಎಣಿಕೆ ಆರಂಭವಾಗಲಿದೆ. 8ರಿಂದ 8.30 ಅಂಚೆ ಮತ, 8.30ರಿಂದ ಇವಿಎಂಗಳಲ್ಲಿರುವ ಮತಗಳ ಎಣಿಕೆ ಪ್ರಾರಂಭವಾಗಲಿದೆ.

    ಪ್ರತಿ ಕ್ಷೇತ್ರಕ್ಕೆ ಒಂದು ಪ್ರತ್ಯೇಕ ಕೌಂಟಿಂಗ್ ಹಾಲ್

    ಪ್ರತಿ ಕ್ಷೇತ್ರಕ್ಕೆ ಒಂದು ಪ್ರತ್ಯೇಕ ಕೌಂಟಿಂಗ್ ಹಾಲ್ ಇರಲಿದ್ದು, ತಲಾ 14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ. ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಟೇಬಲ್‌ಗಳಲ್ಲಿ ಅಂಚೆ ಮತ ಪತ್ರದ ಎಣಿಕೆ ನಡೆಯಲಿದೆ.

    ಹಿರಿಯೂರು, ಮೊಳಕಾಲ್ಮೂರು, ಚಿತ್ರದುರ್ಗ ಕ್ಷೇತ್ರಗಳ ಮತ ಎಣಿಕೆ 21 ಸುತ್ತು, ಚಳ್ಳಕೆರೆ 19, ಹೊಸದುರ್ಗ 18, ಹೊಳಲ್ಕೆರೆ ಕ್ಷೇತ್ರದ ಮತ ಎಣಿಕೆ 22 ಸುತ್ತುಗಳಲ್ಲಿ ನಡೆಯಲಿದೆ.

    ಪ್ರತಿ ಕ್ಷೇತ್ರಕ್ಕೆ 17 ಎಣಿಕೆ ಮೇಲ್ವಿಚಾರಕರು, 17 ಸಹಾಯಕರು ಹಾಗೂ 19 ಮೈಕ್ರೋ ವೀಕ್ಷಕರಂತೆ 318 ಮತ ಎಣಿಕೆ ಅಧಿಕಾರಿ, ಸಿಬ್ಬಂದಿಯನ್ನು ನೇಮಿಸಲಾಗಿದೆ.

    ಕಾಲೇಜಿನ ಹೊಸ ಕಟ್ಟಡದ ನೆಲಮಹಡಿಯಲ್ಲಿ ಹಿರಿಯೂರು, ಚಿತ್ರದುರ್ಗ, ಮೊದಲ ಮಹಡಿ-ಚಳ್ಳಕೆರೆ, ಮೊಳಕಾಲ್ಮೂರು, 2ನೇ ಮಹಡಿಯಲ್ಲಿ ಹೊಸದುರ್ಗ, ಹೊಳಲ್ಕೆರೆ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

    ಸಿಸಿ ಕ್ಯಾಮರಾ

    ಪ್ರತಿ ಟೇಬಲ್‌ಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಎಣಿಕೆ ಕೇಂದ್ರಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಆಯೋಗದ ಗುರುತಿನ ಚೀಟಿ ಇದ್ದವರಿಗೆ ಮಾತ್ರ ಕೇಂದ್ರ ಪ್ರವೇಶಿಸಲು ಅವಕಾಶವಿರುತ್ತದೆ. ಮೊಬೈಲ್ ಬಳಕೆ ನಿಷೇಧಿಸಲಾಗಿದೆ.

    8.30ಕ್ಕೆ ಇವಿಎಂಗಳಲ್ಲಿರುವ ಮತಯಂತ್ರಗಳ ಎಣಿಕೆ ಆರಂಭವಾಗಲಿದೆ. ಜಿಲ್ಲೆಯಲ್ಲಿ ಫಾರಂ 12ರಡಿ 10,701 ಅಂಚೆ ಮತಪತ್ರ ವಿತರಿಸಿದ್ದು, ಮೇ 12ರ ಮಧ್ಯಾಹ್ನ 1.30ವರೆಗೆ 7340 ಅಂಚೆ ಮತಪತ್ರಗಳು ಸ್ವೀಕೃತವಾಗಿವೆ.

    381 ಸೇವಾ ಮತದಾರರ ಪೈಕಿ 61 ಮತದಾರರ ಮತಪತ್ರಗಳು ಸ್ವೀಕೃತವಾಗಿದೆ. 219 ಅಗತ್ಯ ಸೇವಾ ಮತದಾರರು ತಾಲೂಕು ಕೇಂದ್ರಗಳಲ್ಲಿ ಮತ ಚಲಾಯಿಸಿದ್ದಾರೆ. 80 ವರ್ಷ ವಯಸ್ಸು ಮೀರಿದ 1093 ಹಾಗೂ 398 ಅಂಗವಿಕಲರು ಮನೆಯಿಂದ ಮತ ಚಲಾಯಿಸಿದ್ದಾರೆ.

    ಸೂಕ್ತ ಬಂದೋಬಸ್ತ್

    ಮತ ಎಣಿಕೆ ಕೇಂದ್ರದ ಬಳಿ ಹಾಗೂ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ 250 ಪೊಲೀಸರು, ಸಿಆರ್‌ಪಿಎಫ್, ಕೆಎಸ್‌ಆರ್‌ಪಿ, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

    ಎಣಿಕೆ ಕಾರ‌್ಯ ಮುಗಿಯುವವರೆಗೂ ಚಳ್ಳಕೆರೆ ಗೇಟ್‌ನಿಂದ ಮದಕರಿ ವೃತ್ತದವರೆಗೆ ವಾಹನಗಳ ಸಂಚಾರಕ್ಕೆ ನಿಷೇಧ ಇರುತ್ತದೆ.

    ಮತ ಎಣಿಕೆ ಕಾರ್ಯಕ್ಕೆ ಕೈಗೊಂಡಿರುವ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ಡಿಸಿ ದಿವ್ಯಾಪ್ರಭು, ಎಸ್‌ಪಿ ಕೆ.ಪರಶುರಾಮ್ ನೀಡಿದರು. ಎಡಿಸಿ ಟಿ.ಜವರೇಗೌಡ ಇದ್ದರು.

    ಜಿಲ್ಯಾದ್ಯಂತ 144 ನಿಷೇಧಾಜ್ಞೆ ಜಾರಿ
    ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 13ರ ಬೆಳಗ್ಗೆ 6ರಿಂದ 14ರ ಬೆಳಗ್ಗೆ 6ರವರೆಗೆ ಜಿಲ್ಲಾದ್ಯಂತ ಕಲಂ 144 ಮೇರೆಗೆ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ.

    ಮತ ಎಣಿಕೆ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮೆರವಣಿಗೆ ಅಥವಾ 5ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಎಣಿಕೆ ದಿನದಂದು ಬೆಳಗ್ಗೆ 6ರಿಂದ 12 ತಾಸಿನವರೆಗೆ ಮದ್ಯ ಮಾರಾಟ,ಶೇಖರಣೆ, ಮದ್ಯ ಮಾರಾಟ ನಿಷೇಧ ಇರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts