ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಆಗ್ರಹ

ತರೀಕೆರೆ: ಕಲ್ಲು ಗಣಿಗಾರಿಕೆ ನಿಷೇಧಿಸಿ, ಕಲ್ಲು ತುಂಬಿದ ಭಾರಿ ವಾಹನಗಳ ಸಂಚಾರ ನಿಷೇಧಿಸಬೇಕೆಂದು ಆಗ್ರಹಿಸಿ ಬೇಲೇನಹಳ್ಳಿ ತಾಂಡ ಮಹಿಳೆಯರು, ಗ್ರಾಮಸ್ಥರು ಬುಧವಾರ ಕಲ್ಲು ತುಂಬಿದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಎರಡು ತಾಸಿಗೂ ಹೆಚ್ಚು ಸಮಯ ಲಾರಿಗಳನ್ನು ತಡೆದಿದ್ದ ಗ್ರಾಮಸ್ಥರು, ಸ್ಥಳಕ್ಕೆ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟುಹಿಡಿದರು.

ಪಿರಮೇನಹಳ್ಳಿ ಗ್ರಾಮದ ಸರ್ವೆ ನಂ.22ರಲ್ಲಿ ಕಲ್ಲುಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡಿದೆ. ಆದರೆ ನಿಯಮ ಮೀರಿ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಸುತ್ತಮುತ್ತ ರೈತರ ಜಮೀನುಗಳಿವೆ. ಧೂಳು ಬೆಳೆಗಳನ್ನು ಆವರಿಸಿ ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ಜನ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿದರು.

ಗಣಿಗಾರಿಕೆ ನಡೆಯುತ್ತಿರುವ ಪ್ರದೇಶವನ್ನು ಸರ್ಕಾರ ಸುರಕ್ಷಿತ ವಲಯ ಎಂದು ಘೊಷಿಸಿರುವುದು ಸಮಂಜಸವಲ್ಲ. ಜತೆಗೆ ಬೇಲೇನಹಳ್ಳಿ ನವಗ್ರಾಮದ ಮೂಲಕವೇ ಕಲ್ಲು ತುಂಬಿದ ಲಾರಿಗಳು ಸಂಚರಿಸುತ್ತಿವೆ. ರಸ್ತೆ ಪಕ್ಕದ ಅಂಗನವಾಡಿ ಕೇಂದ್ರದ ತುಂಬ ಧೂಳು ಆವರಿಸುತ್ತದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ದೂರಿದರು.