ತನ್ನದೇ ಲಾರಿಯಿಂದ ಸಾಮಗ್ರಿ ಕದ್ದು ಮಾರಿದ ಮಾಲೀಕ!

ಉಪ್ಪಿನಂಗಡಿ: ಗೋಳಿತೊಟ್ಟು ಗ್ರಾಮ ಶಿರ್ಡಿಗುಡ್ಡೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಾ.25ರಂದು ತಡರಾತ್ರಿ ಲಾರಿ ಚಾಲಕನನ್ನು ಕಟ್ಟಿಹಾಕಿ ದರೋಡೆಗೈದ ಪ್ರಕರಣ ತಿರುವು ಪಡೆದುಕೊಂಡಿದ್ದು, ಲಾರಿ ಮಾಲೀಕನೇ ದರೋಡೆ ಕತೆ ಹೆಣೆದಿರುವ ಸಂಗತಿ ತನಿಖೆಯಲ್ಲಿ ಬಹಿರಂಗಗೊಂಡಿದೆ. ಲಾರಿ ವಶಪಡಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಲಾರಿ ಚಾಲಕ, ಮಾಲೀಕನೂ ಆಗಿರುವ ಮಂಡ್ಯ ಪಾಂಡವಪುರ ತಾಲೂಕು ಸೀತಾಪುರ ಮನೆ ನಿವಾಸಿ ಅಂಬರೀಷ್ ಎಸ್.ಆರ್(35) ಆರೋಪಿ. ಸಾಲದ ಸುಳಿಗೆ ಸಿಲುಕಿದ್ದ ತಾನು ಹಣ ಹೊಂದಿಸಲಾಗದೆ ಲಾರಿಯಲ್ಲಿ ಸಾಗಿಸುತ್ತಿದ್ದ ಸಾಮಗ್ರಿಗಳನ್ನು ಮಾರಾಟ ಮಾಡಿ ದರೋಡೆ ನಾಟಕವಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಮಂಡ್ಯ, ಚೆನ್ನಪಟ್ಟಣಗಳಲ್ಲಿ ಆತ ಮಾರಾಟ ಮಾಡಿದ್ದ 59 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಮರುಸ್ವಾಧೀನಪಡಿಸಿಕೊಳ್ಳಲಾಗಿದೆ. ಹಾಗೂ ಆತನಿಂದ 51,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ದರೋಡೆ ಕಟ್ಟುಕತೆ: ಚಿಕ್ಕಬಳ್ಳಾಪುರದಿಂದ ಮಂಗಳೂರು ಕಡೆಗೆ ಹಿಂದುಸ್ತಾನ್ ಕಂಪನಿಗೆ ಸೇರಿದ ಸರಕು ಸಾಗಿಸುತ್ತಿದ್ದ ಲಾರಿಯನ್ನು ಮಾ.25ರಂದು ತಡರಾತ್ರಿ 2.30ರ ಸುಮಾರಿಗೆ ನಂಬರ್‌ಪ್ಲೇಟ್ ಇಲ್ಲದ ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ಬಂದ ದರೋಡೆಕೋರರ ತಂಡ ಕಾರನ್ನು ಅಡ್ಡ ನಿಲ್ಲಿಸಿ ತಡೆದಿದೆ. ಕಾರಿನಲ್ಲಿದ್ದ ಇಬ್ಬರು ಲಾರಿಯನ್ನೇರಿ ತನ್ನ ಬಾಯಿಗೆ ಬಟ್ಟೆ ತುರುಕಿ, ಕಣ್ಣಿಗೆ ಖಾರ ಪುಡಿ ಎರಚಿ ಹಲ್ಲೆಗೈದು, ಕೈ, ಕಾಲನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಬಳಿಕ ತನ್ನ ಬಳಿ ಇದ್ದ 5,200 ರೂ. ನಗದು, 2 ಸಾವಿರ ರೂ. ಮೌಲ್ಯದ ಮೊಬೈಲ್ ಲಪಟಾಯಿಸಿದ್ದಾರೆ. ಲಾರಿಯ ಟರ್ಪಾಲು ತೆಗೆದು, ಕೆಲಸೊತ್ತುಗಳನ್ನು ದೋಚಿದ್ದಾರೆ ಎಂದು ಅಂಬರೀಷ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದನು.

ಸಾಲದ ಸುಳಿಯಿಂದ ಪಾರಾಗಲು ಕೃತ್ಯ: ಪೊಲೀಸರಿಗೆ ಆರಂಭದಲ್ಲೇ ಅಂಬರೀಷ್ ಮೇಲೆ ಸಂಶಯ ಬಂದಿತ್ತಾದರೂ ಲಾರಿ ಮಾಲೀಕನೂ ಆತನೇ ಆಗಿರುವುದರಿಂದ ಬೇರೆ ಸಾಧ್ಯತೆ ಬಗ್ಗೆ ಗಮನಹರಿಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಕಪ್ಪುಹಣ ಸಾಗಾಟ ಶಂಕೆಯಿಂದ ದರೋಡೆ ನಡೆದಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿತ್ತು. ಆದರೆ ಅಂಬರೀಷ್‌ನ ವರ್ತನೆ, ಪೊಲೀಸ್ ವಶದಲ್ಲಿದ್ದ ಲಾರಿಯನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸುತ್ತಿದ್ದ ಬಗ್ಗೆ ಅನುಮಾನಗೊಂಡು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
ಉಪ್ಪಿನಂಗಡಿ ಠಾಣಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಸಿಪಿಐ ಪುತ್ತೂರು ಗ್ರಾಮಾಂತರ ವೃತ್ತ ವೃತ್ತನಿರೀಕ್ಷಕ ಡಿ.ಮಂಜುನಾಥ್ ನೇತೃತ್ವದಲ್ಲಿ ಉಪ್ಪಿನಂಗಡಿ ಪಿಎಸ್‌ಐ ನಂದಕುಮಾರ್ ಎಂ ಎಂ, ಪ್ರೊಬೆಶನರಿ ಪಿಎಸ್‌ಐ ಪವನ್ ನಾಯಕ್, ಎಎಸ್‌ಐ ರುಕ್ಮ ನಾಯ್ಕ ಸಿಬ್ಬಂದಿ ಹರಿಶ್ಚಂದ್ರ, ದೇವದಾಸ್, ಶೇಖರ್ ಗೌಡ, ಇರ್ಷಾದ್, ಜಗದೀಶ್, ಶ್ರೀಧರ್, ಮನೋಹರ್ ಹಾಗೂ ನೆಲ್ಯಾಡಿ ಹೊರ ಠಾಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಪೊಲೀಸರನ್ನೇ ಬೆದರಿಸುತ್ತಿದ್ದ!: ಪೊಲೀಸರು ತನ್ನ ಮೇಲೆ ಸಂಶಯಪಡಬಾರದೆಂಬ ಕಾರಣಕ್ಕೆ ಆರೋಪಿ ಅಂಬರೀಷ್ ಪೊಲೀಸರನ್ನೇ ಬೆದರಿಸುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೂಕ್ತ ತನಿಖೆಯನ್ನೇ ನಡೆಸುತ್ತಿಲ್ಲ ಎಂದು ಆರೋಪಿಸಿ, ತ್ವರಿತ ತನಿಖೆಗಾಗಿ ಪ್ರಭಾವಿಗಳಿಂದೆಲ್ಲ ಒತ್ತಡ ತರುತ್ತಿದ್ದ. ಆರೋಪಿಯ ತಂತ್ರಗಳನ್ನೆಲ್ಲ ಗಮನಿಸುತ್ತಿದ್ದ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

Leave a Reply

Your email address will not be published. Required fields are marked *