ರಾಮ ಒಂಭತ್ತನೇ ಪೈಗಂಬರ್​ ಎಂದ ಬಿಜೆಪಿ ನಾಯಕ ವಿನಯ್​ ಕಟಿಯಾರ್​

ನವದೆಹಲಿ: ಪುರಾಣಪುರುಷ ರಾಮ ಒಂಭತ್ತನೇ ಪೈಗಂಬರ್​. ಹೀಗಾಗಿ ಮುಸ್ಲೀಮರೂ ಕೂಡ ರಾಮನನ್ನು ಪೂಜಿಸಬೇಕು ಎಂದು ಬಿಜೆಪಿಯ ಬೆಂಕಿಚೆಂಡು ಎಂದೇ ಕರೆಸಿಕೊಳ್ಳುವ ವಿನಯ್​ ಕಟಿಯಾರ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್​ಐ ಜತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕಟಿಯಾರ್​, ” ಇವತ್ತು ದೇಶದಲ್ಲಿರುವ ಮುಸ್ಲೀಮರು ಮತಾಂತರವಾಗುವುದಕ್ಕೂ ಮೊದಲು ಹಿಂದುಗಳಾಗಿದ್ದರು. ಮುಸ್ಲೀಂ ರಾಜರು ಅವರನ್ನು ಮತಾಂತರ ಮಾಡಿದ್ದಾರೆ,” ಎಂದು ಕಟಿಯಾರ್​ ಹೇಳಿಕೊಂಡಿದ್ದಾರೆ.

ಇನ್ನು ರಾಮ ಮಂದಿರ ನಿರ್ಮಿಸುವ ಸಲುವಾಗಿ ಅಡಿಗಲ್ಲು ಹಾಕಲೆಂದು ಆಯೋಧ್ಯೆಗೆ ಆಗಮಿಸುವುದಾಗಿ ತಿಳಿಸಿರುವ ಸ್ವಾಮಿ ಸ್ವರೂಪಾನಂದ ಅವರ ನಿಲುವಿನ ಬಗ್ಗೆ ಮಾತನಾಡಿರುವ ಅವರು, ” ಅಯೋಧ್ಯೆಯಲ್ಲಿ ಈಗಾಗಲೇ ಅಡಿಗಲ್ಲು ಹಾಕಲಾಗಿದೆ. ಮತ್ತೊಮ್ಮೆ ಆ ಪ್ರಕ್ರಿಯೆ ನೆರವೇರಿಸಲು ಸ್ವರೂಪಾನಂದರು ಅಲ್ಲಿಗೆ ತೆರಳುವ ಅಗತ್ಯವೇನೂ ಇಲ್ಲ,” ಎಂದು ಕಟಿಯಾರ್​ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ಹೋರಾಟವನ್ನು ವಿಶ್ವಹಿಂದೂ ಪರಿಷತ್​ ಲೋಕಸಭೆ ಚುನಾವಣೆ ವರೆಗೆ ನಿಲ್ಲಿಸಿರುವುದನ್ನು ವಿರೋಧಿಸಿರುವ ಸ್ವಾಮಿ ಸ್ವರೂಪಾನಂದ ಅವರು, ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡು, ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುವುದಾಗಿ ಘೋಷಿಸಿದ್ದಾರೆ.