ಗುಳೇದಗುಡ್ಡ: ತಪ್ಪು ದಾರಿಯಲ್ಲಿ ನಡೆಯುತ್ತಿದ್ದವರಿಗೆ ಸರಿದಾರಿಯನ್ನು ತೋರುವ ಮೂಲಕ ಅವರ ಬದುಕು ಕಟ್ಟುವ ಕಾಯಕವನ್ನು ಹುಚ್ಚೇಶ್ವರ ಶ್ರೀಗಳು ಮಾಡುತ್ತಿದ್ದಾರೆ ಎಂದು ಅಮರೇಶ್ವರ ಬ್ರಹನ್ಮಠದ ಡಾ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಕೋಟೆಕಲ್ ಗ್ರಾಮದ ಹೊಳೆ ಕೋಟೆಕಲ್ ಹುಚ್ಚೇಶ್ವರ ಸಂಸ್ಥಾನಮಠದ 13ನೇ ಪೀಠಾಧಿಪತಿಗಳಾದ ಹೊಳೆ ಹುಚ್ಚೇಶ್ವರ ಶ್ರೀಗಳ 44ನೇ ವರ್ಷದ ಜನ್ಮದಿನದ ಅಂಗವಾಗಿ ನಡೆದ ವಿಭೂತಿ ತುಲಾಭಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶ್ರೀಗಳೊಂದಿಗೆ 15 ವರ್ಷಗಳ ಒಡನಾಟ ಹೊಂದಿದ್ದೇನೆ. ಅವರು ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಮಾತನಾಡುತ್ತ, ಎಲ್ಲರು ಬೆಳೆಯಲಿ ಎಂಬ ಸದುದ್ಧೇಶದಿಂದ ಮಾರ್ಗದರ್ಶನ ನೀಡುತ್ತಾರೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಹುಚ್ಚೇಶ್ವರ ಶ್ರೀಗಳು ನಮ್ಮ ಮಠಕ್ಕೆ ದೊರೆತಿರುವುದು ಪುಣ್ಯ. ಅವರ ಮಾರ್ಗದರ್ಶನ ನಮ್ಮೆಲ್ಲರಿಗೂ ಅವಶ್ಯ. ನಿರಂತರ ಕ್ರೀಯಾಶೀಲರಾಗಿ ಯಾವುದೇ ಲಾಪೇಕ್ಷೆ ಇಲ್ಲದೇ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದರು.
ಹೊಳೆಹುಚ್ಚೇಶ್ವರ ಮಹಾಸ್ವಾಮಿಗಳು ಮಾತನಾಡಿ, 25ನೇ ವರ್ಷದ ರಜತ ಮಹೋತ್ಸವವ ಮಾಡಿದಾಗ ಎಷ್ಟು ಖುಷಿ, ಆನಂದವಾಗಿತ್ತು. ಅದೇ ಖುಷಿ ಆನಂದ ಇಂದು ಮಾಡಿದ ವಿಭೂತಿ ತುಲಾಭಾರದಿಂದ ಆಗಿದೆ. ಮಠದ ಭಕ್ತರ ಪ್ರೀತಿ, ಸೇವೆ ನಾನು ಎಷ್ಟು ಹೇಳಿದರು ತೀರದು. ನನ್ನ ಮೇಲೆ ಅಷ್ಟು ಭಕ್ತಿ ಗೌರವ ಹೊಂದಿದ್ದಾರೆ ಎಂದರು.
ಗೌರವ್ವ ರಂಗಪ್ಪ ತೊಗಲಂಗಿ ಅವರ ಕುಟುಂಬದ ವತಿಯಿಂದ ವಿಭೂತಿ ತುಲಾಭಾರ ಮಾಡಲಾಯಿತು. ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಸ್. ಮಿಟ್ಟಲಕೋಡ ಅವರನ್ನು ಸನ್ಮಾನಿಸಲಾಯಿತು.
ಯಲಗುರ್ದಪ್ಪ ತೊಗಲಂಗಿ, ಮುರಿಗೆಪ್ಪ ತೊಗಲಂಗಿ, ಬಸವರಾಜ ತೊಗಲಂಗಿ, ಸುರೇಶ ತೊಗಲಂಗಿ ಅವರು ಗುರುಗಳ ತುಲಾಭಾರ ಸಂದರ್ಭದಲ್ಲಿ ಪಾದಪೂಜೆ ಸೇವೆ ಸಲ್ಲಿಸಿದರು.
ಭುಜಂಗರಾವ್ ದೇಸಾಯಿ, ಶಶಿಧರ ದೇಸಾಯಿ, ನೀಲಪ್ಪ ಅಬಕಾರಿ, ಅಶೋಕ ಗೌಡರ, ಮುತ್ತು ಮರಬದ, ಸಂಗಣ್ಣ ಪಟ್ಟಣಶೆಟ್ಟಿ, ಶೇಖಪ್ಪ ಕಡಪಟ್ಟಿ, ಸಂಗಣ್ಣ ಹರಿಬಿ, ಗುಂಡಪ್ಪ ಕೋಟಿ, ಮೈಲಾರಲಿಂಗ ಆಲೂರು, ಹುಚ್ಚಪ್ಪ ಮೇಟಿ, ಯಲ್ಲಪ್ಪ ತಳವಾರ, ಮಾಂತೇಶ ಕಡಪಟ್ಟಿ, ಶಿವಕುಮಾರ ಕುಟಕನಕೇರಿ, ಪ್ರಶಾಂತ ಅಮರಣ್ಣನವರ, ಹನುಮಂತ ಕಡ್ಲಿಮಟ್ಟಿ ಇದ್ದರು.