ಸೊರಗುತ್ತಿರುವ ಸರ್ಕಾರಿ ಕಟ್ಟಡ

< ನಿರ್ವಹಣೆ ಕೊರತೆ ಕಾರಣ ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಬಳಿ ಕಟ್ಟಡ ಶಿಥಿಲಾವಸ್ಥೆ >

ಬಿ.ರಾಘವೇಂದ್ರ ಪೈ ಗಂಗೊಳ್ಳಿ

ಬಹುತೇಕ ಸರ್ಕಾರಿ ಕಟ್ಟಡಗಳ ನಿರ್ವಹಣೆಯಲ್ಲಿ ಸರ್ಕಾರ ಕಾಳಜಿ ವಹಿಸದಿರುವುದರಿಂದ ವಿವಿಧ ಇಲಾಖೆಗಳು ಕಟ್ಟಡಗಳು ಶಿಥಿಲಾವಸ್ಥೆಗೆ ಬಂದು ತಲುಪಿದ್ದು, ಕುಸಿಯುವ ಭೀತಿಯಲ್ಲಿವೆ.

ಇದಕ್ಕೆ ಸ್ಪಷ್ಟ ಉದಾಹರಣೆ ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಬಳಿ ಇರುವ ಮೀನುಗಾರಿಕಾ ಇಲಾಖೆಗೆ ಸೇರಿದೆ ಎನ್ನಲಾದ ಕಟ್ಟಡ. ಈ ಕಟ್ಟಡ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡು ಪಾಳು ಬಿದ್ದಿದೆ. ಇನ್ನೊಂದು ವಿಶೇಷವೆಂದರೆ ಮ್ಯಾಂಗನೀಸ್ ವಾರ್ಫ್ ಉತ್ತರ ದಿಕ್ಕಿನಲ್ಲಿರುವ ಈ ಕಟ್ಟಡ ಬಂದರು ಇಲಾಖೆಗೆ ಸೇರಿದೆಯೇ ಅಥವಾ ಮೀನುಗಾರಿಕಾ ಇಲಾಖೆಗೆ ಸೇರಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿನ ಉತ್ತರ ದಿಕ್ಕಿನಲ್ಲಿ ಮೀನುಗಾರರ ಉಪಯೋಗಕ್ಕಾಗಿ ಶೆಡ್ ನಿರ್ಮಿಸಲಾಗಿದ್ದು, ನಿರ್ವಹಣೆ ಕೊರತೆಯಿಂದ ಸಂಪೂರ್ಣವಾಗಿ ಹದಗೆಟ್ಟಿದೆ. ಕಟ್ಟಡ ಸುತ್ತಲೂ ಗಿಡಗಂಟಿಗಳು ಬೆಳೆದಿದ್ದು, ಭೂತ ಬಂಗಲೆಯಂತೆ ಭಾಸವಾಗುತ್ತಿದೆ. ಮೇಲ್ಛಾವಣಿಯ ಸಿಮೆಂಟ್ ಶೀಟ್‌ಗಳು ಗಾಳಿಗೆ ಹಾರಿ ಹೋಗಿದೆ. ಬಾಗಿಲು, ಕಿಟಕಿಗಳು ಸಂಪೂರ್ಣವಾಗಿ ಹಾಳಾಗಿ ಕಿತ್ತು ಹೋಗಿದೆ. ಕಟ್ಟಡದ ಸುತ್ತಲೂ ಗಿಡ ಮರಗಳು ಬೆಳೆದಿರುವುದರಿಂದ ಹಾವು ಮತ್ತಿತರ ವಿಷ ಜಂತುಗಳ ಹಾವಳಿ ಕಾಣಿಸಿಕೊಂಡಿದೆ. ಶೆಡ್‌ನ ಹೊರಗೆ ಮತ್ತು ಒಳ ಭಾಗದಲ್ಲಿ ಬೆಳೆದಿರುವ ಗಿಡಮರಗಳನ್ನು ಕಡಿಯುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.

ಮೀನುಗಾರಿಕಾ ಇಲಾಖೆಗೆ ಸೇರಿದೆ ಎನ್ನಲಾಗುತ್ತಿರುವ ಈ ಕಟ್ಟಡವನ್ನು ಹಲವು ವರ್ಷಗಳ ಹಿಂದೆ ಬಾಡಿಗೆಗೆ ನೀಡಲಾಗುತ್ತಿತ್ತು. ಕಟ್ಟಡ ರಿಪೇರಿ ಸಹಿತ ಇನ್ನಿತರ ನಿರ್ವಹಣೆಯನ್ನು ಇಲಾಖೆ ನಿರ್ವಹಿಸುತ್ತಿದ್ದು, ಇತ್ತೀಚಿನ ವರ್ಷಗಳಿಂದ ಕಟ್ಟಡ ನಿರ್ವಹಣೆಗೆ ಇಲಾಖೆಯಿಂದ ಅನುದಾನ ದೊರೆಯುತ್ತಿಲ್ಲ. ಹೀಗಾಗಿ ಕಟ್ಟಡವನ್ನು ದುರಸ್ತಿಗೊಳಿಸಲು ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.

ಕಟ್ಟಡಗಳಲ್ಲಿ ಮೀನುಗಾರರು ಬಲೆ ಮತ್ತಿತರ ಸಲಕರಣೆಗಳನ್ನು ಇಟ್ಟಿದ್ದು, ಸುತ್ತಮುತ್ತ ಕಾರ್ಯನಿರ್ವಹಿಸುವ ಮೀನುಗಾರರು ತಮ್ಮ ವಾಹನಗಳನ್ನು ಶೆಡ್ ಒಳಗೆ ನಿಲ್ಲಿಸುತ್ತಿದ್ದಾರೆ. ಶೆಡ್ ಮೇಲ್ಛಾವಣಿ ಹಾರಿ ಹೋಗಿರುವುದರಿಂದ ಮಳೆ ನೀರು ಗೋಡೆ ಮೇಲೆ ಬಿದ್ದು ಗೋಡೆ ಶಿಥಿಲಗೊಳ್ಳುತ್ತಿದೆ.

ಸರ್ಕಾರದ ವಿವಿಧ ಇಲಾಖೆಗಳಿಗೆ ಕಟ್ಟಡ ಇಲ್ಲದೆ ಕಷ್ಟಪಡುತ್ತಿರುವ ಈ ದಿನಗಳಲ್ಲಿ ಗಂಗೊಳ್ಳಿ ಮೀನುಗಾರಿಕಾ ಇಲಾಖೆಗೆ ಸೇರಿದೆ ಎನ್ನಲಾಗುತ್ತಿರುವ ಈ ಕಟ್ಟಡಗಳು ಉಪಯೋಗಕ್ಕಿಲ್ಲದೆ ಪಾಳು ಬಿದ್ದಿವೆ. ಇಲಾಖೆ ಅಧಿಕಾರಿಗಳು ಕಟ್ಟಡವನ್ನು ಸಮರ್ಪಕವಾಗಿ ಉಪಯೋಗಿಸಲು ಮತ್ತು ನಿರ್ವಹಣೆ ಮಾಡಲು ವಿಫಲರಾಗಿರುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಅನುದಾನದ ಕೊರತೆಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳು ಸೊರಗಿ ಹೋಗುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇಲಾಖೆ ಹಿರಿಯ ಅಧಿಕಾರಿಗಳು ಈ ಕಟ್ಟಡ ದುರಸ್ತಿಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.

ಮ್ಯಾಂಗನೀಸ್ ವಾರ್ಫ್ ಬಳಿ ಕಟ್ಟಡ ಸುತ್ತ ದೊಡ್ಡ ದೊಡ್ಡ ಗಿಡಗಂಟಿಗಳು ಬೆಳೆದು ನಿಂತಿದ್ದು, ಹಾವು ಮತ್ತಿತರ ವಿಷ ಜಂತುಗಳಿಗೆ ಆಶ್ರಯ ತಾಣವಾಗುತ್ತಿದೆ. ಕಟ್ಟಡ ನಿರ್ವಹಣೆ ಇಲ್ಲದೆ ಶಿಥಿಲಗೊಳ್ಳುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಟ್ಟಡ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
ರಾಜ ಪೂಜಾರಿ, ಸ್ಥಳೀಯ ನಿವಾಸಿ

ಹಲವು ವರ್ಷಗಳಿಂದ ಮೀನುಗಾರಿಕಾ ಇಲಾಖೆ ವ್ಯಾಪ್ತಿಯ ಮ್ಯಾಂಗನೀಸ್ ದಕ್ಕೆಯಲ್ಲಿರುವ ಕಟ್ಟಡ, ಶೆಡ್ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಸುತ್ತಲೂ ಬೆಳೆದು ನಿಂತಿರುವ ಗಿಡ ಮರಗಳಿಂದ ಕಟ್ಟಡಕ್ಕೆ ಹಾನಿಯಾಗುತ್ತಿದೆ. ಕಟ್ಟಡದ ಮೇಲ್ಛಾವಣಿ, ಕಿಟಕಿ, ಗೋಡೆಗಳು ಸಂಪೂರ್ಣವಾಗಿ ಶಿಥಿಲಗೊಳ್ಳುತ್ತಿದ್ದು, ಕೂಡಲೇ ಕಟ್ಟಡ, ಶೆಡ್‌ನ್ನು ಸಂಪೂರ್ಣವಾಗಿ ರಿಪೇರಿ ಮಾಡಿ ಅದರ ಸಮಗ್ರ ನಿರ್ವಹಣೆ ಮಾಡಬೇಕು.
ಜಯಕುಮಾರ್, ಸ್ಥಳೀಯ ಉದ್ಯಮಿ