ಕೆಂಪುಚಂದಿರ ಇಂದು ಗೋಚರ

>

ವೈಜ್ಞಾನಿಕ ಲೋಕದ ಜತೆಗೆ ಜನಸಾಮಾನ್ಯರಲ್ಲೂ ತೀವ್ರ ಕುತೂಹಲ ಕೆರಳಿಸಿರುವ ಈ ಶತಮಾನದ ಅತಿ ದೀರ್ಘ ಖಗ್ರಾಸ ಚಂದ್ರಗ್ರಹಣ ಶುಕ್ರವಾರ ಮಧ್ಯರಾತ್ರಿ ಸಂಭವಿಸಲಿದೆ. ಮೈಕ್ರೋ ಬ್ಲಡ್ ಮೂನ್ ಎಂದೇ ಕರೆಯಲಾಗುವ ಈ ಗ್ರಹಣ ಸಮಯದಲ್ಲಿ ಚಂದ್ರ ಕಡುಗೆಂಪಾಗಿ ಕಾಣಿಸಲಿದ್ದಾನೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಗ್ರಹಣ ಸಂಪೂರ್ಣವಾಗಿ ಗೋಚರಿಸಲಿದೆ.

ಗ್ರಹಣ ಸ್ಪರ್ಶ, ಮೋಕ್ಷ

ಗ್ರಹಣ ಆರಂಭ- ರಾತ್ರಿ 11.54

ಅಂತ್ಯ -ಬೆಳಗಿನ ಜಾವ 03.49

ಗ್ರಹಣ ಅವಧಿ 03 ಗಂಟೆ 55 ನಿಮಿಷ

ಗ್ರಹಣದ ಮಧ್ಯಕಾಲ 01-51

 

ಎಲ್ಲೆಲ್ಲಿ ಗೋಚರ?

ಭಾರತ ಸಹಿತ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್​ನಲ್ಲಿ ಗ್ರಹಣ ಗೋಚರಿಸಲಿದೆ. ನ್ಯೂಜಿಲೆಂಡ್, ಜಪಾನ್, ರಷ್ಯಾ, ಚೀನಾ, ದಕ್ಷಿಣ ಅಮೆರಿಕದಲ್ಲಿ ಭಾಗಶಃ ಗೋಚರಿಸಲಿದೆ.

ಜನರಲ್ಲಿ ಸಂಚಲನ

  • ಹೆರಿಗೆ ಮುಂದೂಡಿಕೆ ಮಾಡಿಸಿಕೊಂಡ ಗರ್ಭಿಣಿಯರು
  • ಯಜ್ಞ , ಯಾಗಕ್ಕೆ ಮೊರೆ ಹೋದ ಗಣ್ಯರು, ರಾಜಕಾರಣಿಗಳು
  • ಪ್ರವಾಸ, ಶುಭ ಸಮಾರಂಭ ಮುಂದೂಡಿಕೆ

 

ಬರಿಗಣ್ಣಲ್ಲಿ ನೋಡಬಹುದು

ಬರಿಗಣ್ಣಲ್ಲಿ ಗ್ರಹಣ ವೀಕ್ಷಿಸಿದರೆ ಯಾವುದೇ ತೊಂದರೆ ಆಗದೆಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಇಲ್ಲಿ ದರ್ಶನ ಯಥಾಸ್ಥಿತಿ

ಧರ್ಮಸ್ಥಳ, ಕೊಲ್ಲೂರು, ಮಂತ್ರಾಲಯ, ನಂಜನಗೂಡು, ಶೃಂಗೇರಿ, ಹೊರನಾಡು

ಎಲ್ಲೆಲ್ಲಿ ದರ್ಶನ ವ್ಯತ್ಯಯ

ತಿರುಪತಿ, ಕುಕ್ಕೆ ಸುಬ್ರಹ್ಮಣ್ಯ, ಗೋಕರ್ಣ, ಶಿರಸಿ ಮಾರಿಕಾಂಬ, ಮುರ್ಡೆಶ್ವರ, ಚಾಮುಂಡಿ ಬೆಟ್ಟ, ಮೇಲುಕೋಟೆ

ಕೆಂಪೇಕೆ?

ಚಂದ್ರ ಭೂಮಿಯಿಂದ ಹೆಚ್ಚು ದೂರಕ್ಕೆ ಹೋದಾಗ ಗ್ರಹಣ ಸಂಭವಿಸಿದರೆ, ಚಂದ್ರನ ಬಣ್ಣ ಕೆಂಪು ಮಿಶ್ರಿತ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ.

ಮತ್ತೆ ಯಾವಾಗ

ಮುಂದಿನ ದೀರ್ಘ ಚಂದ್ರ ಚಂದ್ರಗ್ರಹಣ 2123ರಲ್ಲಿ ಸಂಭವಿಸಲಿದೆ.


ದೇವಸ್ಥಾನಗಳ ದರ್ಶನ ಸಮಯ

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶುಕ್ರವಾರದ ಮಟ್ಟಿಗೆ ಕೆಲ ದೇವಸ್ಥಾನಗಳ ದರ್ಶನ ಸಮಯ ಬದಲಾಗಿದ್ದು, ವಿವರ ಇಂತಿದೆ.

ತಿರುಪತಿ ದೇವಾಲಯ ಸಂಜೆ ಬಂದ್

ತಿರುಮಲ ತಿರುಪತಿ ದೇವಾಲಯದ ಬಾಗಿಲನ್ನು ಗ್ರಹಣಕ್ಕೂ ಆರು ಗಂಟೆಗಳ ಮುನ್ನ ಅಂದರೆ ಶುಕ್ರವಾರ ಸಂಜೆ 5 ಗಂಟೆಗೆ ಮುಚ್ಚಲಾಗುತ್ತದೆ. ಆರ್ಜಿತ ಸೇವಾ, ಕಲ್ಯಾಣೋತ್ಸವ, ಉಂಜಲ ಸೇವಾ, ವಸಂತೋತ್ಸವಂ, ಪೌರ್ಣಮಿ ಗರುಡ ಸೇವೆಗಳನ್ನು ಶುಕ್ರವಾರ ರದ್ದುಪಡಿಸಲಾಗಿದೆ. ಜು.28ರ ಬೆಳಗಿನ ಜಾವ 4.15ಕ್ಕೆ ಸುಪ್ರಭಾತ ಸೇವೆ, ಶುದ್ಧಿ ಮತ್ತು ಪುಣ್ಯಾಹವಚನದ ಮೂಲಕ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ.

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಎಂದಿನಂತೆ ಪೂಜೆ, ಸೇವೆಗಳು ನಡೆಯುತ್ತವೆ. ಗ್ರಹಣ ಸಂದರ್ಭ ಗ್ರಹಣ ದೋಷ ಪರಿಹಾರ ಸಹಿತ ವಿಶೇಷ ಪೂಜೆಗಳು ನೆರವೇರಲಿವೆ.

ಗೋಕರ್ಣ: ಮಹಾಬಲೇಶ್ವರ ಮಂದಿರದ ಪೂಜಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12.30ರವರೆಗೆ ಹಾಗೂ ಸಂಜೆ 5ರಿಂದ 5.30ರವರೆಗೆ ದರ್ಶನಕ್ಕೆ ಅವಕಾಶವಿದೆ. ಗ್ರಹಣ ಸಮಯ ರಾತ್ರಿ 11.30ರಿಂದ ಬೆಳಗಿನ ಜಾವ 4ರವರೆಗೆ ಪೂಜೆ ಮತ್ತು ಸ್ಪರ್ಶ ದರ್ಶನ ಮಾಡಬಹುದಾಗಿದೆ.

ದೇವಲಗಾಣಗಾಪುರ: ಅಫಜಲಪುರ ತಾಲೂಕಿನ ದೇವಲಗಾಣಗಾಪುರ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಇಡೀ ದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 12ಕ್ಕೆ ನಡೆಯುತ್ತಿದ್ದ ಮಾಧುಕರಿ ವ್ಯವಸ್ಥೆ 10ಕ್ಕೆ ಬದಲಾವಣೆ ಮಾಡಲಾಗಿದೆ. ಗ್ರಹಣ ಕಾಲದಲ್ಲಿ ನಿರಂತರ ಪೂಜೆ ನಡೆಯಲಿದೆ.

ಮಂತ್ರಾಲಯ: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ ದರ್ಶನಕ್ಕೆ ಸಮಯದ ಬದಲಾವಣೆ ಮಾಡಲಾಗಿಲ್ಲ. ಗ್ರಹಣ ಸಂದರ್ಭದಲ್ಲೂ ರಾಯರ ದರ್ಶನಕ್ಕೆ ಭಕ್ತರಿಗೆ ಅವಕಾಶವಿದೆ. ಗ್ರಹಣ ನಿಮಿತ್ತ ಶ್ರೀಮಠದಲ್ಲಿ ವಿಶೇಷ ಹೋಮ, ಹವನಗಳನ್ನು ಹಮ್ಮಿಕೊಳ್ಳಲಾಗಿದೆ.

ಚಾಮುಂಡಿ ಬೆಟ್ಟ: ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಾಗಿಲು ರಾತ್ರಿ 9ಕ್ಕೆ ಮುಚ್ಚಲಿದೆ.

ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸಂಜೆ 6 ಗಂಟೆಗೆ ಸಾರ್ವಜನಿಕ ಪೂಜೆ. ಬಳಿಕ ದೇವರ ದರ್ಶನ ಸ್ಥಗಿತ.

ನಂಜನಗೂಡು: ಶ್ರೀಕಂಠೇಶ್ವರ ದೇಗುಲದಲ್ಲಿ ಪೂಜೆ, ದರ್ಶನದಲ್ಲಿ ಯಾವುದೇ ಬದಲಾವಣೆ ಇಲ್ಲ.

ಶೃಂಗೇರಿ: ಶ್ರೀಮಠದ ದೈನಂದಿನ ಪೂಜಾ ಸಮಯದಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅನ್ನಪ್ರಸಾದವಿರಲಿದ್ದು ರಾತ್ರಿ ಅನ್ನಪ್ರಸಾದ ಇರುವುದಿಲ್ಲ.

ಹೊರನಾಡು: ಹೊರನಾಡು ಅನ್ನಪೂರ್ಣೆಶ್ವರಿ ದೇವಸ್ಥಾನದ ಪೂಜಾ ವಿಧಿವಿಧಾನಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಅನ್ನಪ್ರಸಾದವಿರಲಿದ್ದು, ರಾತ್ರಿ ಅನ್ನಪ್ರಸಾದ ಇರುವುದಿಲ್ಲ. ರಾತ್ರಿ 11ರಿಂದ ಗ್ರಹಣ ಮೋಕ್ಷದವರೆಗೆ ದೇವಿಗೆ ಅಭಿಷೇಕ ನಡೆಯಲಿದೆ.

ಸವದತ್ತಿ: ಯಲ್ಲಮ್ಮಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸಂಜೆ 6 ಗಂಟೆಯೊಳಗೆ ಪೂಜೆ ನೆರವೇರಲಿದ್ದು, ರಾತ್ರಿ 10 ಗಂಟೆಯವರೆಗೂ ದರ್ಶನಕ್ಕೆ ಅವಕಾಶವಿದೆ.

ಬಾದಾಮಿ ಬನಶಂಕರಿ: ಬನಶಂಕರಿ ದೇವಸ್ಥಾನದಲ್ಲಿ ಮಧ್ಯಾಹ್ನ 12 ಗಂಟೆಯೊಳಗೆ ಪೂಜೆ, ಪಾದುಕೆ ಅಭಿಷೇಕ ಮಾಡಲಾಗುತ್ತದೆ. ಅಲ್ಲದೆ, ಸ್ಪರ್ಷಕಾಲ ರಾತ್ರಿ 11.57ರಿಂದ ಮೋಕ್ಷಕಾಲ ಬೆಳಗ್ಗೆ 3.45ರವರೆಗೆ ದೇವಸ್ಥಾನ ಗರ್ಭಗುಡಿಯಲ್ಲಿ ಜಲಾಭಿಷೇಕ ನೆರವೇರಲಿದೆ.

ಹಂಪಿ: ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸಂಜೆ 6.30ಕ್ಕೆ ನಡೆಯುವ ಪೂಜೆಯನ್ನು ಮಧ್ಯಾಹ್ನ 1.30ಕ್ಕೆ ನಡೆಸಲಾಗುವುದು. ಸಂಜೆ 4 ಗಂಟೆ ನಂತರ ಭಕ್ತರಿಗೆ ದೇವಸ್ಥಾನದಲ್ಲಿ ಪೂಜೆಗೆ ಅವಕಾಶವಿಲ್ಲ.

ಮುರ್ಡೆಶ್ವರ: ಭಟ್ಕಳ ತಾಲೂಕಿನ ಮುರ್ಡೆಶ್ವರದ ದೇವಾಲಯದಲ್ಲಿ ಸಂಜೆ 5.45ರ ಒಳಗೆ ರಾತ್ರಿ ಪೂಜೆ ಮಾಡಲಾಗುತ್ತದೆ. ನಂತರ ರಾತ್ರಿ 8.15ಕ್ಕೆ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು. ವಿಶೇಷ ಎಂದರೆ 11.54ಕ್ಕೆ ಗ್ರಹಣ ಕಾಲದಲ್ಲಿ ದೇವಾಲಯದ ಬಾಗಿಲು ತೆಗೆದು ಮಾತೋಬಾರ ಮುರ್ಡೆಶ್ವರ ದೇವರಿಗೆ ಬೆಳಗ್ಗೆ 3.54 ರವರೆಗೂ ನಿರಂತರ ಕುಂಭಾಭಿಷೇಕ ನೆರವೇರಿಸಲಾಗುವುದು. ಈ ಸಮಯದಲ್ಲಿ ಭಕ್ತರಿಗೆ ದೇವರ ದರ್ಶನ ಹಾಗೂ ದಾನಕ್ಕೂ ವ್ಯವಸ್ಥೆ ಮಾಡಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ, ಸೇವೆ, ಮಧ್ಯಾಹ್ನದ ಮಹಾಪೂಜೆ ಎಂದಿನಂತೆ ನಡೆಯುತ್ತದೆ. ರಾತ್ರಿಯ ಮಹಾಪೂಜೆ ಸಂಜೆ 6.30ಕ್ಕೆ ನೆರವೇರಲಿದೆ. ಸಂಜೆ 7ರ ನಂತರ ದೇವರ ದರ್ಶನಕ್ಕೆ ಅವಕಾಶವಿಲ್ಲ. ಸಾಯಂಕಾಲ ಆಶ್ಲೇಷ ಬಲಿ ಸೇವೆ, ರಾತ್ರಿ ಭೋಜನ ಪ್ರಸಾದ ಇರುವುದಿಲ್ಲ.

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮತ್ತು ಪೂಜೆಯ ಸಮಯದಲ್ಲಿ ಬದಲಾವಣೆ ಇರುವುದಿಲ್ಲ. ಅನ್ನಪೂರ್ಣ ಛತ್ರದಲ್ಲಿ ಸಂಜೆ 6.30ರಿಂದ 8ರವರೆಗೆ ಮಾತ್ರ ಅನ್ನದಾನ ಇರಲಿದೆ.

ಶಿರಸಿ: ಮಾರಿಕಾಂಬಾ ದೇವಾಲಯದಲ್ಲಿ ಸಂಜೆ 6 ಗಂಟೆ ಬಳಿಕ ಭಕ್ತರಿಗೆ ದರ್ಶನ ಮತ್ತು ಸೇವಾ ಅವಕಾಶ ಇಲ್ಲ.

ಸಾಮೂಹಿಕ ವಿವಾಹ

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಜು. 27ರ ರಾತ್ರಿ 9ಕ್ಕೆ ಚಿತ್ರದುರ್ಗದ ಮುರುಘಾ ಮಠದಲ್ಲಿ ಲಿಂಗದೀಕ್ಷೆ ಮತ್ತು ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಗರ್ಭಿಣಿಯರಿಗೆ ಆತಂಕ ಬೇಡ

ಗರ್ಭಿಣಿಯರು ಅದರಲ್ಲೂ ಗ್ರಹಣದ ಎರಡು ಮೂರು ದಿನ ಆಚೆ ಈಚೆ ಹೆರಿಗೆ ಸಂಭವ ಇರುವ ಹಲವರು ಗ್ರಹಣದ ದಿನದ ಹೆರಿಗೆ ಮುಂದೂಡುವಂತೆ ವೈದರಲ್ಲಿ ಬೇಡಿಕೆ ಇಟ್ಟಿದ್ದಾರೆ. ‘ನಮಗೆ ಗ್ರಹಣ ದಿನ ಹೆರಿಗೆ ಆಗುವುದಾಗಿ ಹೇಳಿದ್ದಾರೆ. ಅದನ್ನೇನಾದರೂ ಮುಂದೂಡಲು ಸಾಧ್ಯವೆ?’ ಎಂದು ಕೇಳುವ ಮಹಿಳೆಯರ ಸಂಖ್ಯೆ ಒಂದು ವಾರದಿಂದ ಹೆಚ್ಚಿದೆ ಎಂದು ಬೆಂಗಳೂರಿನ ಪ್ರಸೂತಿ ವೈದ್ಯರೊಬ್ಬರು ಹೇಳಿದ್ದಾರೆ. ಗ್ರಹಣಕ್ಕೂ ಹೆರಿಗೆಗೂ ಯಾವುದೇ ಸಂಬಂಧವಿಲ್ಲ. ಗ್ರಹಣದಿಂದ ಹುಟ್ಟುವ ಮಗುವಿಗೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಮನವರಿಕೆ ಮಾಡಿದರೂ ಕೆಲವರು ಒಪ್ಪುತ್ತಿಲ್ಲ. ಸಂಪ್ರದಾಯಸ್ಥ ಕುಟುಂಬಗಳಂತೂ ಗ್ರಹಣ ಗ್ರಹಚಾರವೆಂದೇ ಭಾವಿಸಿದ್ದಾರೆ.