ಮತಯಂತ್ರಕ್ಕೆ ಅಭ್ಯರ್ಥಿಗಳ ಹೆಸರು ಸೇರ್ಪಡೆ

<<ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖ ಪ್ರಕ್ರಿಯೆ ಆರಂಭ>>

ಉಡುಪಿ: ಏ.18ರಂದು ನಡೆಯುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರನ್ನು ಇವಿಎಂ ಮತ್ತು ವಿವಿ ಪ್ಯಾಟ್‌ಗಳಲ್ಲಿ ಅಳವಡಿಸುವ ಕಾರ್ಯ ಮಂಗಳವಾರದಿಂದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಆರಂಭಗೊಂಡಿದೆ. ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಬಿ.ಇ.ಎಲ್ ಇಂಜಿನಿಯರ್, ಸಹಾಯಕ ಚುನಾವಣಾಧಿಕಾರಿ ಮೇಲ್ವಿಚಾರಣೆಯಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚುನಾವಣೆಗೆ ಸಂಬಂಧಿಸಿ 956 ಮತಗಟ್ಟೆ ಅಧಿಕಾರಿ, 956 ಸಹಾಯಕ ಮತಗಟ್ಟೆ ಅಧಿಕಾರಿ, 1912 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಿದ್ದು, ಈಗಾಗಲೇ 2 ಹಂತದ ತರಬೇತಿ ನೀಡಲಾಗಿದೆ. 250 ಮೈಕ್ರೋ ವೀಕ್ಷಕರನ್ನು ನೇಮಕ ಮಾಡಿದ್ದು, ಅವರಿಗೆ ಏ.10ರಂದು ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು.

25 ಸಖೀ ಕೇಂದ್ರ: ಬೈಂದೂರು ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5ರಂತೆ ಒಟ್ಟು 25 ಸಖಿ ಕೇಂದ್ರಗಳನ್ನು ತೆರೆಯಲಾಗುವುದು. 2 ಅಂಗವಿಕಲ ಮತಗಟ್ಟೆ ಮತ್ತು 1 ಬುಡಕಟ್ಟು ಮತಗಟ್ಟೆ ತೆರೆಯಲಾಗುವುದು. 70 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗುವುದು ಎಂದರು.
ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ 6,48,885 ಮತದಾರರಿಗೆ ಪೋಟೋ ವೋಟರ್ ಸ್ಲಿಪ್ ವಿತರಿಸಲಾಗಿದ್ದು, ಉಳಿದ 1,31,503 ಮತದಾರರಿಗೆ 2 ದಿನದಲ್ಲಿ ವಿತರಿಸಲಾಗುವುದು ಎಂದು ಹೇಳಿದರು.
ಎಪಿಕ್ ಕಾರ್ಡ್ ಇಲ್ಲವಾದಲ್ಲಿ ಮತ ಚಲಾಯಿಸಲು ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಒಂದನ್ನು ತೆಗೆದುಕೊಂಡು ಹೋಗಬೇಕು. ಪೋಟೋ ವೋಟರ್ ಸ್ಲಿಪ್ ದಾಖಲೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣಾ ವೆಚ್ಚ ವೀಕ್ಷಕ ಸಚಿನ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸುದ್ದಿಗೋಷ್ಠಿಯಲ್ಲಿದ್ದರು.

2.64 ಕೋಟಿ ರೂ. ಮೌಲ್ಯದ ವಾಹನ, ವಸ್ತು ವಶ:  ನೀತಿ ಸಂಹಿತೆ ಜಾರಿ ಬಳಿಕ ಒಟ್ಟು 13 ಪ್ರಕರಣಗಳಲ್ಲಿ 23,50,290 ರೂ. ನಗದು ಹಣ ವಶಪಡಿಸಿಕೊಂಡಿದ್ದು, ಸಮರ್ಪಕ ದಾಖಲೆ ನೀಡಿದ ನಂತರ ಎಲ್ಲ ಮೊತ್ತ ಬಿಡುಗಡೆಗೊಳಿಸಲಾಗಿದೆ. ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಮೂಲಕ 15,821 ಲೀ. ಮದ್ಯ, 3 ಟ್ರಕ್, 4 ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 2,64,26,999 ಮೌಲ್ಯದ ವಾಹನ ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು.

ಮೋದಿ ಚಿತ್ರ ಬಳಕೆ ತಡೆ:  ಲೋಕಸಭಾ ಚುನಾವನೆಯಲ್ಲಿ ಶಿವಸೇನಾ ಅಭ್ಯರ್ಥಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಸಿ ಮತಯಾಚನೆ ಮಾಡುತ್ತಿರುವ ಬಗ್ಗೆ ಬಿಜೆಪಿಯಿಂದ ದೂರು ಬಂದಿದ್ದು, ಮೋದಿ ಚಿತ್ರ ತೆರವಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.