ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಡೆ ಇನ್ನೂ ನಿಗೂಢ: ಮುಂದುವರಿದ ಕಾಂಗ್ರೆಸ್​ ನಾಯಕರ ಸರ್ಕಸ್​

ತುಮಕೂರು: ಮೈತ್ರಿ ಪಕ್ಷಗಳ ಒಪ್ಪಂದಂತೆ ತುಮಕೂರು ಕ್ಷೇತ್ರ ಜೆಡಿಎಸ್​ ವಶವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್​ನ ಹಾಲಿ ಸಂಸದರಾಗಿರುವ ಮುದ್ದಹನುಮೇಗೌಡರು ಆಕ್ರೋಶಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರವನ್ನು ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮುಂದುವರಿದಿದೆ.

ಮುದ್ದಹನುಮೇಗೌಡರು ಕಾಂಗ್ರೆಸ್​ ಅಭ್ಯರ್ಥಿಯಾಗಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಪ್ರತ್ಯೇಕವಾಗಿ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದರು. ಆದರೆ, ಬಿ ಫಾರಂ ನೀಡದ ಕಾರಣ ಕಾಂಗ್ರೆಸ್​ ನಾಮಪತ್ರ ತಿರಸ್ಕೃತಗೊಂಡಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರ ಸ್ವೀಕೃತವಾಗಿದೆ. ಮೈತ್ರಿ ಪಕ್ಷದಿಂದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರು ಕಣಕ್ಕಿಳಿದಿರುವುದರಿಂದ ಹಿನ್ನೆಡೆಯಾಗಬಹುದು ಎಂದು ಮನಗಂಡಿರುವ ಮೈತ್ರಿ ಪಕ್ಷಗಳು ಮುದ್ದಹನುಮೇಗೌಡ ಅವರ ಮನವೊಲಿಸುವ ಪ್ರಯತ್ನವನ್ನು ಮುಂದುವರಿಸಿವೆ.

ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿರುವುದರಿಂದ ಮುದ್ದಹನುಮೇಗೌಡರು ಕೊನೆ ಸುತ್ತಿನ ಬೆಂಬಲಿಗರ ಸಭೆ ಕರೆದಿದ್ದಾರೆ. ಬೆಂಗಳೂರಿನ ಸಂಜಯನಗರದಲ್ಲಿರುವ ನಿವಾಸದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿನ ನಿರ್ಣಯದಂತೆ ಮುದ್ದಹನುಮೇಗೌಡರ ಮುಂದಿನ ಹೆಜ್ಜೆ ಇರಿಸಲಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ನಿನ್ನೆವರೆಗೂ ಅವರು ಒಲವು ತೋರಿಲ್ಲ. ಇಂದು ಮತ್ತೆ ಕೆಪಿಸಿಸಿ‌‌ ಅಧ್ಯಕ್ಷ ‌ದಿನೇಶ್ ಗುಂಡೂರಾವ್ ಹಾಗೂ ಡಿಸಿಎಂ ಜಿ. ಪರಮೇಶ್ವರ್ ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ. ಇನ್ನೋರ್ವ ಬಂಡಾಯ ಅಭ್ಯರ್ಥಿ ಕೆ.ಎನ್. ರಾಜಣ್ಣ ಇಂದು ನಾಮಪತ್ರ ವಾಪಸ್ಸು ಪಡೆಯಲಿದ್ದಾರೆ.

ಬೇಡಿಕೆ ಇಡ್ತಾರಾ ಮುದ್ದಹನುಮೇಗೌಡ?
ಡಿಸಿಎಂ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್ ಭೇಟಿಯಾಗುವ ಹಿನ್ನೆಲೆಯಲ್ಲಿ ನಾಮಪತ್ರ ವಾಪಸು ಪಡೆಯಬೇಕಾದರೆ, ಮುದ್ದಹನುಮೇಗೌಡರು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಬೇಡಿಕೆ ಇಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯಸಭೆಗೆ ಆಯ್ಕೆ, ಬೆಂಬಲಿಗರಿಗೆ ಉತ್ತಮ ಸ್ಥಾನಮಾನ ಹಾಗೂ ತಮ್ಮ ನೇತೃತ್ವದಲ್ಲಿಯೇ ಮೈತ್ರಿ ಚುನಾವಣೆ ನಡೆಯಬೇಕು ಎಂಬ ಬೇಡಿಕೆ ಇಡಲಿದ್ದಾರೆ ಎಂದು ಹೇಳಲಾಗಿದೆ. ರಾಷ್ಟ್ರ ರಾಜಕೀಯದಲ್ಲೇ ಮುಂದುವರೆಯಲು ಅಪೇಕ್ಷಿಸಿರುವ ಮುದ್ದಹನುಮೇಗೌಡರು ಎಲ್ಲಾ ಬೇಡಿಕೆಗಳಿಗೆ ಒಪ್ಪಿಕೊಂಡರೆ ನಾಮಪತ್ರ ವಾಪಸು ಪಡೆಯುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *